Published
4 weeks agoon
By
Akkare News
ಪ್ರತಿಪಕ್ಷಗಳ ತೀವ್ರ ಪ್ರತಿಭಟನೆ ಹಿನ್ನೆಲೆ ಗುರುವಾರ (ಫೆ.5) ಲೋಕಸಭೆ ಕಲಾಪವನ್ನು ಸ್ಪೀಕರ್ ಓಂ ಬಿರ್ಲಾ ಮಧ್ಯಾಹ್ನದವರೆಗೆ ಮುಂದೂಡಿದರು.
ಬೆಳಿಗ್ಗೆ 11 ಗಂಟೆಗೆ ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ, ಪ್ರತಿಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ಆರಂಭಿಸಿದರು. ವಿಶೇಷವಾಗಿ, ಎಂಟು ಸಂಸದರ ಅಮಾನತು ಮತ್ತು ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಅವಕಾಶ ನಿರಾಕರಿಸಿದ್ದನ್ನು ವಿರೋಧಿಸಿ ಪ್ರತಿಭಟಿಸಿದರು.
ಸದನವು ಚರ್ಚೆ ಮತ್ತು ಸಂವಾದಕ್ಕಾಗಿ ಇದೆಯೇ ಹೊರತು, ಘೋಷಣೆಗಳನ್ನು ಕೂಗಲು ಅಲ್ಲ” ಎಂದು ಬಿರ್ಲಾ ಅವರು ಪ್ರತಿಪಕ್ಷ ಸದಸ್ಯರನ್ನು ಉದ್ದೇಶಿಸಿ ಹೇಳಿದರು. ಸಂಸತ್ತಿನ ಘನತೆಯನ್ನು ಕಾಪಾಡುವುದು ಎಲ್ಲ ಸದಸ್ಯರ ಜವಾಬ್ದಾರಿ ಎಂದರು.
ಗದ್ದಲದ ನಡುವೆಯೇ ಸ್ಪೀಕರ್ ಅವರು ಪ್ರಶ್ನೋತ್ತರ ಅವಧಿಯನ್ನು ನಡೆಸಲು ಪ್ರಯತ್ನಿಸಿದರು. ಕೇವಲ ಐದು ನಿಮಿಷಗಳ ಕಾಲ ನಡೆದ ಈ ಅವಧಿಯಲ್ಲಿ ಒಂದೇ ಒಂದು ಪ್ರಶ್ನೆ ಮತ್ತು ಅದರ ಉಪಪ್ರಶ್ನೆಗಳನ್ನು ತೆಗೆದುಕೊಳ್ಳಲು ಸಾಧ್ಯವಾಯಿತು.
ಈ ನಡುವೆ ಪ್ರತಿಪಕ್ಷದ ಸದಸ್ಯರು ಪ್ಲಕಾರ್ಡ್‌ಗಳನ್ನು ಪ್ರದರ್ಶಿಸುತ್ತಾ ಸದನದ ಬಾವಿಗೆ ಇಳಿದು ಪ್ರತಿಭಟನೆ ಮುಂದುವರಿಸಿದ ಕಾರಣ, ಸ್ಪೀಕರ್ ಅವರು ಸದನವನ್ನು ನಡೆಸಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಕಲಾಪವನ್ನು ಅಪರಾಹ್ನ 2 ಗಂಟೆಯವರೆಗೆ ಮುಂದೂಡಿದರು.
ಬೆಳಗ್ಗೆ 11 ಗಂಟೆಗೆ ಆರಂಭವಾದ ಕಲಾಪವು ವಿರೋಧ ಪಕ್ಷದ ಸದಸ್ಯರ ಘೋಷಣೆಗಳಿಂದಾಗಿ ಕೆಲವೇ ನಿಮಿಷಗಳಲ್ಲಿ ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲ್ಪಟ್ಟಿತು.
ಮಧ್ಯಾಹ್ನ 12 ಗಂಟೆಗೆ ಪುನಃ ಸಮಾವೇಶಗೊಂಡಾಗಲೂ ಗದ್ದಲ ಮುಂದುವರಿಯಿತು. ಈ ನಡುವೆಯೇ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯವನ್ನು ಅಂಗೀಕರಿಸಿ, ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು.