ಬೆಂಗಳೂರು, ಜೂನ್ 3: ರಾಜ್ಯ ರಾಜಕಾರಣದ ಅತ್ಯಂತ ಮಹತ್ವದ ಘಟ್ಟಕ್ಕೆ ರಾಜಧಾನಿ ಬೆಂಗಳೂರು ಸಾಕ್ಷಿಯಾಗುತ್ತಿದ್ದು, ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಲು ಕ್ಷಣಗಣನೆ ಶುರುವಾಗಿದೆ. ಬೆಂಗಳೂರಿನ ಲೋಕಭವನದ ಗಾಜಿನ ಮನೆ (ಗ್ಲಾಸ್ ಹೌಸ್) ಮದುವಣಗಿತ್ತಿಯಂತೆ ಕಂಗೊಳಿಸುತ್ತಿದ್ದು, ಇಂದು (ಜೂನ್ 3) ಸಂಜೆ ಸರಿಯಾಗಿ 4 ಗಂಟೆ 5 ನಿಮಿಷದ ಶುಭ ಮುಹೂರ್ತದಲ್ಲಿ ಡಿಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ನೂತನ ಸಿಎಂಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಆಡಂಬರವಿಲ್ಲದೆ, ಅತ್ಯಂತ ಶಿಸ್ತುಬದ್ಧವಾಗಿ ಈ ಐತಿಹಾಸಿಕ ಸಮಾರಂಭ ನೆರವೇರಲಿದ್ದು, ಬೆಂಗಳೂರಿನಾದ್ಯಂತ ನಿಯೋಜಿತ ಸಿಎಂ ಅವರ ಬೃಹತ್ ಕಟೌಟ್ ಹಾಗೂ ಬ್ಯಾನರ್‌ಗಳು ರಾರಾಜಿಸುತ್ತಿವೆ.
ಮುಖ್ಯಾಂಶಗಳು
ಇಂದು ಸಂಜೆ 4:05ಕ್ಕೆ ಪ್ರಮಾಣವಚನ ಸ್ವೀಕರಿಸಲಿರುವ ಡಿ.ಕೆ.ಶಿವಕುಮಾರ್.
ಜ್ಯೋತಿಷಿ ಸಲಹೆಯಂತೆ ಇದೇ ಮೊದಲ ಬಾರಿಗೆ ಪೂರ್ವಾಭಿಮುಖವಾಗಿ ಸಜ್ಜಾದ ಲೋಕಭವನದ ವೇದಿಕೆ.
ಶಾಂತಿ ಮತ್ತು ಸೌಹಾರ್ದತೆಯ ಸಂದೇಶ ಸಾರಲು ಆದಿಚುಂಚನಗಿರಿ ಸರ್ವಧರ್ಮದ 55 ಪ್ರಮುಖ ಧರ್ಮಗುರುಗಳಿಗೆ ಆಹ್ವಾನ
ಪರಿಶ್ರಮಕ್ಕೆ ಸಿಕ್ಕ ಫಲ, ಜಂಟಿ ಆಡಳಿತದ ಭರವಸೆ
ಮುಖ್ಯಮಂತ್ರಿ ಸ್ಥಾನಕ್ಕೆ ತಲುಪುವುದು ಬರೀ ಕನಸಾಗಿರಲಿಲ್ಲ, ಇದು ಕಠಿಣ ಪರಿಶ್ರಮದೊಂದಿಗಿನ ಸಮರ್ಪಣೆಯಾಗಿದೆ. ಸಮಯ ಜಟಿಲವಾಗಿತ್ತು, ವಿಳಂಬವಾಗಿರಬಹುದು ಆದರೆ ಹೈಕಮಾಂಡ್ ನನ್ನನ್ನು ನಿರಾಕರಿಸಿಲ್ಲ. ಇದು ಕೇವಲ ಶಿವಕುಮಾರ್ ಒಬ್ಬನ ಸಾಧನೆಯಲ್ಲ. ಕಾಂಗ್ರೆಸ್ ಇತಿಹಾಸ ಹಾಗೂ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಟ್ಟಿರುವ ಸಾವಿರಾರು ಕಾರ್ಯಕರ್ತರ ಶ್ರಮದ ಫಲ ಎಂದು ಡಿಕೆ ಶಿವಕುಮಾರ್ ಸುದ್ದಿಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ. ಗಾಂಧಿ-ನೆಹರು ಕುಟುಂಬಕ್ಕೆ ನಿಷ್ಠರಾಗಿರುವುದು ತಮ್ಮ ಕರ್ತವ್ಯ ಎಂದಿರುವ ಅವರು, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ತ್ಯಾಗವನ್ನು ಕೊಂಡಾಡಿದ್ದಾರೆ. ಅಲ್ಲದೆ, ರೈತರು, ಮಹಿಳೆಯರು ಹಾಗೂ ಯುವ ಪೀಳಿಗೆ ಸೇರಿದಂತೆ ಸಮಾಜದ ಪ್ರತಿಯೊಂದು ವರ್ಗವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಮೂಲಕ ರಾಜ್ಯದಲ್ಲಿ ಹೊಸ ‘ಯುವಯುಗ’ ಹಾಗೂ ‘ನವಯುಗ’ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ.
ವೇದಿಕೆಗೆ ವಾಸ್ತು ಟಚ್ ಮತ್ತು ಸರ್ವಧರ್ಮ ಸಮನ್ವಯತೆ
ಈ ಬಾರಿಯ ಪದಗ್ರಹಣ ಕಾರ್ಯಕ್ರಮಕ್ಕೆ ವಿಶೇಷವಾಗಿ ವಾಸ್ತು ಸ್ಪರ್ಶ ನೀಡಲಾಗಿದೆ. ಈ ಹಿಂದೆ ಲೋಕಭವನದಲ್ಲಿ ನಡೆಯುತ್ತಿದ್ದ ಕಲಾಪಗಳ ವೇದಿಕೆ ಪಶ್ಚಿಮಾಭಿಮುಖವಾಗಿ ಇರುತ್ತಿತ್ತು. ಆದರೆ, ಈ ಬಾರಿ ಜ್ಯೋತಿಷಿ ಆರಾಧ್ಯ ಅವರ ಸಲಹೆಯ ಮೇರೆಗೆ ವೇದಿಕೆಯನ್ನು ಪೂರ್ವಾಭಿಮುಖವಾಗಿ ಅತ್ಯಂತ ಆಕರ್ಷಕವಾಗಿ ಸಿದ್ಧಪಡಿಸಲಾಗಿದೆ. ಇಡೀ ಕಾರ್ಯಕ್ರಮದ ಜವಾಬ್ದಾರಿಯನ್ನು ಸಂಸದ ಡಿ.ಕೆ.ಸುರೇಶ್ ಹೊತ್ತುಕೊಂಡಿದ್ದು, ಪ್ರತಿಯೊಂದು ಸಿದ್ಧತೆಯನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ಮತ್ತೊಂದೆಡೆ, ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಸಂದೇಶ ಸಾರಲು ಸರ್ವಧರ್ಮ ಸಮನ್ವಯತೆಗೆ ಆದ್ಯತೆ ನೀಡಲಾಗಿದೆ. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಸುತ್ತೂರು ಶ್ರೀಗಳು, ತರಳುಬಾಳು ಶ್ರೀಗಳು, ಪೇಜಾವರ ಶ್ರೀಗಳು, ರಂಭಾಪುರಿ ಶ್ರೀಗಳು ಹಾಗೂ ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ ಸೇರಿದಂತೆ ವಿವಿಧ ಮಠಾಧೀಶರು, ಚರ್ಚ್‌ನ ಆರ್ಚ್ ಬಿಷಪ್ ಡಾ. ಪೀಟರ್ ಮಚಾಡೋ ಮತ್ತು ಮೌಲ್ವಿಗಳು ಸೇರಿದಂತೆ ಒಟ್ಟು 55 ಸರ್ವಧರ್ಮದ ಪ್ರಮುಖ ಗುರುಗಳಿಗೆ ಗೌರವಪೂರ್ವಕ ಆಹ್ವಾನ ನೀಡಲಾಗಿದೆ.
ಬೃಹತ್ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ. ವೇಣುಗೋಪಾಲ್ ಹಾಗೂ ಕಾಂಗ್ರೆಸ್ ಆಡಳಿತವಿರುವ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದಾರೆ. ಸಿನಿಮಾ ತಾರೆಯರು ಸೇರಿದಂತೆ ವಿವಿಧ ರಂಗದ ಗಣ್ಯರಿಗಾಗಿ ಲೋಕಭವನದಲ್ಲಿ 1,100 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, 3 ಹಂತದ ಪ್ರತ್ಯೇಕ ಪಾಸ್‌ಗಳನ್ನು ವಿತರಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ವಸಂತನಗರದ ಶಾಂಗ್ರೀಲಾ ಹೋಟೆಲ್ ಹಾಗೂ ಕೆಪಿಸಿಸಿ ಕಚೇರಿಯ 1 ಕಿ.ಮೀ ವ್ಯಾಪ್ತಿಯಲ್ಲಿ ‘ನೋ-ಫ್ಲೈ ಝೋನ್’ ಘೋಷಿಸಲಾಗಿದೆ. ಭದ್ರತೆ ಹಾಗೂ ಟ್ರಾಫಿಕ್ ದಟ್ಟಣೆ ನಿಯಂತ್ರಿಸುವ ಸಲುವಾಗಿ ವಿಧಾನಸೌಧ, ವಿಕಾಸಸೌಧ ಮತ್ತು ಎಂ.ಎಸ್. ಬಿಲ್ಡಿಂಗ್ ಸಿಬ್ಬಂದಿಗೆ ಇಂದು ಅರ್ಧ ದಿನ ರಜೆ ಘೋಷಿಸಿ ಆದೇಶ ಹೊರಡಿಸಲಾಗಿದೆ.