Published
2 months agoon
By
Akkare News
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿದ್ದು, ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದಿರುವ ಡಿ ಕೆ ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲವನ್ನ ಹುಟ್ಟಿಸಿದೆ.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳ ಜೊತೆಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಮಲ್ಲಿಕಾರ್ಜುನ್ ಖರ್ಗೆ ಅವರ ಜತೆ ನಾಯಕತ್ವ ವಿಚಾರವಾಗಿ ಚರ್ಚೆ ನಡೆಸಿಲ್ಲ. ನಾನು ಚರ್ಚೆ ಮಾಡುವುದೂ ಇಲ್ಲ. ಮಾಡುವ ಅವಶ್ಯಕತೆಯೂ ಇಲ್ಲ. ನಾನು ಮತ್ತು ಸಿದ್ದರಾಮಯ್ಯ ಅವರು ಈಗಾಗಲೇ ಇದರ ಬಗ್ಗೆ ಹೇಳಿದ್ದೇವೆ. ಹೈಕಮಾಂಡ್ ಏನು ಹೇಳುತ್ತದೆಯೋ ಅದರಂತೆ ಕೆಲಸ ಮಾಡಿಕೊಂಡು ಹೋಗುತ್ತೇವೆ. ಅವರು ಏನು ಹೇಳುತ್ತಾರೋ ಆ ರೀತಿ ಕೇಳಿಕೊಂಡು ಹೋಗುತ್ತೇವೆ ಎಂದರು.
ಪಕ್ಷದ ಕಾರ್ಯಕರ್ತನಾಗಿಯೇ ಇರಲು ಬಯಸುತ್ತೇನೆ ಎಂದು ದೆಹಲಿಯಲ್ಲಿ ಹೇಳಿಕೆ ನೀಡಿದ್ದರ ಬಗ್ಗೆ ಮಾತನಾಡಿ, ನಾನು ಕೇವಲ ವೇದಿಕೆಯಲ್ಲಿ ಕುಳಿತು, ಭಾಷಣ ಮಾಡಿಕೊಂಡು ಹೋಗಿಲ್ಲ. ಪಕ್ಷದಲ್ಲಿ ಎಲ್ಲಾ ಕೆಲಸ ಮಾಡಿದ್ದೇನೆ (ಐ ಹ್ಯಾವ್ ಡನ್ ಎವೆರಿ ವರ್ಕ್ ಇನ್ ದ ಪಾರ್ಟಿ), ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ನಾನು ಲೈಫ್ ಟೈಮ್ ಕಾರ್ಯಕರ್ತ. ನಾನು ಒಬ್ಬ ವರ್ಕರ್. ಅಧ್ಯಕ್ಷನಾದಾಗಲೂ ಪಕ್ಷದ ಬಾವುಟ ಕಟ್ಟಿದ್ದೇನೆ. ಕಾರ್ಯಕರ್ತನಾದಾಗಲೂ ಬಾವುಟ ಕಟ್ಟಿದ್ದೇನೆ, ಪೋಸ್ಟರ್ ಅಂಟಿಸಿದ್ದೇನೆ, ಕಸ ಗುಡಿಸಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಏನೇನು ಬೇಕೋ ಎಲ್ಲವನ್ನೂ ಮಾಡಿದ್ದೇನೆ ಎಂದರು.
ಶುಕ್ರವಾರದಂದು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಯಿದೆ. ಈ ಸಭೆಯಲ್ಲಿ ಮನರೇಗಾ ಯೋಜನೆಯ ಹೆಸರು ಬದಲಾವಣೆ, ಅನುದಾನದಲ್ಲಿ ರಾಜ್ಯದ ಪಾಲನ್ನು ಶೇ.40ಕ್ಕೆ ಹೆಚ್ಚಿಸಿರುವುದು ಸೇರಿದಂತೆ ರೈತರಿಗೆ ಮಾರಕವಾದಂತಹ ಬದಲಾವಣೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ವಿಚಾರವಾಗಿ ಒಂದು ರಾಜ್ಯದ ಅಧ್ಯಕ್ಷನಾಗಿ ನನ್ನ ಅಭಿಪ್ರಾಯಗಳನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿಳಿಸಿದ್ದೇನೆ. ಅವರ ಜತೆ ಯಾವ ರಾಜಕೀಯ ಮಾತುಕತೆಯೂ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಮನರೇಗಾ ಯೋಜನೆಯಿಂದ ಪಂಚಾಯತಿಗಳಿಗೆ ಅನುಕೂಲವಾಗುತ್ತಿತ್ತು. ಪಂಚಾಯತಿ ಸದಸ್ಯರುಗಳಿಗೆ ಶಕ್ತಿಯಿತ್ತು. ಪ್ರತಿ ಕೂಲಿ ಕಾರ್ಮಿಕರ ಖಾತೆಗೆ ಹಣ ಸಂದಾಯವಾಗಿತ್ತಿತ್ತು. ಪ್ರತಿಯೊಬ್ಬರು ಚರ್ಚೆ ನಡೆಸಿ ತಮ್ಮ ಊರಿಗೆ ಯಾವ ಕೆಲಸಗಳನ್ನು ತೆಗೆದುಕೊಳ್ಳಬೇಕು ಎನ್ನುವ ಅವಕಾಶವಿತ್ತು. ಆದರೆ ಈಗ ಕೇಂದ್ರ ಸರ್ಕಾರವೇ ಯಾವ ಜಿಲ್ಲೆಯಲ್ಲಿ ಯಾವ ಕೆಲಸ ತೆಗೆದುಕೊಳ್ಳಬೇಕು ಎಂದು ತೀರ್ಮಾನ ಮಾಡುತ್ತದಂತೆ ಎಂದು ಹೇಳಿದರು.
ರೈತರು ತಮ್ಮ ಸ್ವಂತ ಜಮೀನಿನಲ್ಲಿ ಕೆಲಸ ಮಾಡಿಕೊಳ್ಳಲು, ಇಂಗುಗುಂಡಿ ತೋಡಿಕೊಳ್ಳಲು, ಕೊಟ್ಟಿಗೆ ಕಟ್ಟಿಕೊಳ್ಳಲು – ಹೀಗೆ ಅನೇಕ ಕೆಲಸಗಳನ್ನು ಮಾಡಿಕೊಳ್ಳಲು ಅನುಕೂಲವಾಗುತ್ತಿತ್ತು. ಇಂತಹ ಅದ್ಬುತವಾದ ಕಾರ್ಯಕ್ರಮವನ್ನು ಸೋನಿಯಾಗಾಂಧಿ ಅವರ ಮಾರ್ಗದರ್ಶನದಲ್ಲಿ ಮನಮೋಹನ್ ಸಿಂಗ್ ಅವರು ನೀಡಿದ್ದರು. ಮುಂದಿನ 2026 ರ ಫೆಬ್ರವರಿ ವೇಳೆಗೆ ಈ ಯೋಜನೆಗೆ 20 ವರ್ಷ ತುಂಬಲಿದೆ. ಆದ ಕಾರಣ ದೊಡ್ಡ ಹೋರಾಟವನ್ನು ಹಮ್ಮಿಕೊಳ್ಳಲು ಆಲೋಚಿಸಲಾಗಿದೆ ಎಂದು ಹೇಳಿದರು.
ಚಿತ್ರದುರ್ಗದ ಹಿರಿಯೂರಿನ ಬಳಿ ರಸ್ತೆ ಅಪಘಾತದಲ್ಲಿ ಬಸ್ ಬೆಂಕಿಗಾಹುತಿಯಾದ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ನನಗೆ ತುಂಬಾ ದುಃಖವಾಗಿದ್ದು, ಏನು ಹೇಳಬೇಕು ಎಂದು ತೋಚದಂತಾಗಿದ್ದೇನೆ. ಕುಟುಂಬಸ್ಥರಿಗೆ ಸಾಂತ್ವಾನ ತಿಳಿಸುತ್ತೇನೆ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ. ಘಟನೆಗೆ ಕಾರಣ ಏನು ಎಂದು ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪರಿಹಾರ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.