Published
3 weeks agoon
By
Akkare News
ಪುತ್ತೂರು: ಕೆದಂಬಾಡಿ ಗ್ರಾಮದ ಸನ್ಯಾಸಿಗುಡ್ಡೆ ಜನತಾ ಕಾಲೋನಿ ನಿವಾಸಿಗಳ ಮೂಲಭೂತ ಸಮಸ್ಯೆಗಳ ಕುರಿತು ಇತ್ತೀಚೆಗೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಈ ಕುರಿತು ಸುದ್ದಿ ವೆಬ್‌ಸೈಟ್‌ನಲ್ಲಿ ವರದಿ ಪ್ರಕಟವಾಗಿತ್ತು. ಈ ವರದಿಯ ಫಲಶ್ರುತಿಯಾಗಿ ಕಾಲೋನಿಯ ರಸ್ತೆ ಹಾಗೂ ಒಳಚರಂಡಿ ವ್ಯವಸ್ಥೆ ಸುಧಾರಣೆಗೆ ಒಟ್ಟು 15 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಪಂಚಾಯತಿ ಚುನಾವಣೆಗೆ ಮುನ್ನವೇ ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಭರವಸೆ ನೀಡಿದ್ದಾರೆ.
ಸನ್ಯಾಸಿಗುಡ್ಡೆ ಜನತಾ ಕಾಲೋನಿಯಲ್ಲಿ ವಾಸಿಸುವ ಬಹುತೇಕ ಕುಟುಂಬಗಳು ಕೂಲಿ ಕಾರ್ಮಿಕರಾಗಿದ್ದು, ಸರಿಯಾದ ರಸ್ತೆ, ಚರಂಡಿ ವ್ಯವಸ್ಥೆ, ಬೀದಿ ದೀಪಗಳು ಹಾಗೂ ಕುಡಿಯುವ ನೀರಿನ ಕೊರತೆಯಿಂದ ದಿನನಿತ್ಯದ ಬದುಕು ಕಷ್ಟಕರವಾಗಿತ್ತು. ಮಳೆಗಾಲದಲ್ಲಿ ಸಂಪರ್ಕ ರಸ್ತೆ ಸಂಪೂರ್ಣ ಕೆಸರುಮಯವಾಗಿ ಸಂಚಾರ ಅಸಾಧ್ಯವಾಗುತ್ತಿತ್ತು. ಇತ್ತೀಚೆಗೆ ಇಂಗು ಗುಂಡಿಯ ಪೈಪು ಅಳವಡಿಸುವ ಸಂದರ್ಭ ಜೆಸಿಬಿ ಯಂತ್ರದಿಂದ ರಸ್ತೆ ಕುಸಿದು ಹಾನಿಯಾಗಿದ್ದು, ಮಳೆಯಿಂದ ಪರಿಸ್ಥಿತಿ ಇನ್ನಷ್ಟು ಗಂಭೀರಗೊಂಡಿತ್ತು. ಇದರಿಂದ ರೋಗಿಗಳು, ಗರ್ಭಿಣಿಯರು ಹಾಗೂ ವೃದ್ಧರಿಗೆ ಆಸ್ಪತ್ರೆಗಳಿಗೆ ತೆರಳುವುದಕ್ಕೂ ತೀವ್ರ ತೊಂದರೆಯಾಗಿತ್ತು. ಈ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ನಿವಾಸಿಗಳು ಹಲವು ಬಾರಿ ಪಂಚಾಯಿತಿ ಹಾಗೂ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರೂ ಸ್ಪಂದನೆ ಸಿಗದೆ ಅಸಮಾಧಾನಗೊಂಡಿದ್ದರು. ಇದರಿಂದ ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಸಮಸ್ಯೆ ಬಗೆಹರಿಯದಿದ್ದರೆ ಮತದಾನ ಬಹಿಷ್ಕಾರಕ್ಕೂ ಮುಂದಾಗುವುದಾಗಿ ಗ್ರಾಮಸ್ಥರು ತಿಳಿಸಿದ್ದರು..
ಈ ಹಿನ್ನೆಲೆಯಲ್ಲಿ ಇದೀಗ ಸನ್ಯಾಸಿಗುಡ್ಡೆ ಜನತಾ ಕಾಲೋನಿ ರಸ್ತೆ ಕಾಮಗಾರಿಗೆ ₹5 ಲಕ್ಷ ಮತ್ತು ₹10 ಲಕ್ಷ ತಲಾ ಒಟ್ಟು ₹15 ಲಕ್ಷ ಅನುದಾನ ಹಾಗೂ ಒಳಚರಂಡಿ ಮೋರಿ ವ್ಯವಸ್ಥೆಗೆ ಪಂಚಾಯಿತಿ ವತಿಯಿಂದಲೂ ಅನುದಾನ ಒದಗಿಸಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.
ಶಾಸಕರ ನಿರ್ದೇಶನದ ಮೇರೆಗೆ ಪಕ್ಷದ ಪದಾಧಿಕಾರಿಗಳಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ವಲಯ ಅಧ್ಯಕ್ಷ ಪುರಂದರ ರೈ ಕೋರಿಕ್ಕಾರ್ ಹಾಗೂ ಬೂತ್ ಅಧ್ಯಕ್ಷ ಹೈದರ್ ಗಟ್ಟಮನೆ ಸ್ಥಳಕ್ಕೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದ್ದು, ಪರಿಹಾರ ಒದಗಿಸುವುದಾಗಿಯೂ ಪಂಚಾಯಿತಿ ಚುನಾವಣೆಗೆ ಮುನ್ನ ಕಾಮಗಾರಿಗಳನ್ನು ಆರಂಭಿಸುವುದಾಗಿಯೂ ಭರವಸೆ ನೀಡಿದ್ದಾರೆ.
ಈ ಅನುದಾನದಿಂದ ರಸ್ತೆಯ ಗುಣಮಟ್ಟ ಸುಧಾರಣೆ ಹಾಗೂ ಒಳಚರಂಡಿ ವ್ಯವಸ್ಥೆ ಬಲಗೊಳ್ಳಲಿದೆ ಎಂಬ ನಿರೀಕ್ಷೆ ಸ್ಥಳೀಯರಲ್ಲಿ ಮೂಡಿದೆ. ಇದರಿಂದ ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಜನತಾ ಕಾಲೋನಿಗೆ ಮೂಲಭೂತ ಸೌಲಭ್ಯಗಳ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಇಟ್ಟಂತಾಗಿದೆ ಎಂದು ನಿವಾಸಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.