Published
3 months agoon
By
Akkare Newsಹೊಸಪೇಟೆ:ಶೃಂಗೇರಿ ಸಂಸ್ಥಾನದ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ನಗರಕ್ಕೆ ಆಗಮಿಸುತ್ತಿದ್ದಾರೆ ಎಂದು ಚಿಂತಾಮಣಿ ಮಠದ ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮೀಜಿ ತಿಳಿಸಿದರು.
ನಗರದ ಚಿಂತಾಮಣಿ ಮಠದಲ್ಲಿ ಮಂಗಳವಾರ ಪತ್ರಿಗೋಷ್ಠಿಯಲ್ಲಿ ಮಾತನಾಡಿ, ಜ.22ರಿಂದ ಜ.24ರ ವರೆಗೆ ಮೂರುದಿನ ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಕ್ತರನ್ನು ಹರಸಲಿದ್ದಾರೆ ಎಂದರು.
ವಿಜಯನಗರ ಸಂಸ್ಥಾನದ ಸ್ಥಾಪಕರಾದ ವಿದ್ಯಾರಣ್ಯರು ಶೃಂಗೇರಿ ಸಂಸ್ಥಾನ 12ನೇ ಪೀಠಾಧಿಪತಿಗಳಾಗಿದ್ದು ಆ ಪರಂಪರೆಗೂ ಪುಣ್ಯಕ್ಷೇತ್ರ ಹಂಪಿ ಹೊಸಪೇಟೆಗೂ ಅವಿನಾಭಾವ ಸಂಬಂಧವಿದೆ, ಈ ಹಿನ್ನೆಲೆಯಲ್ಲಿಯೆ ಶ್ರೀಗಳು ಮೂರುದಿನಗಳ ಪ್ರವಾಸಕ್ಕೆ ಆಗಮಿಸುತ್ತಿದ್ದಾರೆ. ಜ.22ರಂದು ಮಧ್ಯಾಹ್ನ 3.30ಕ್ಕೆ ಕೊಪ್ಪಳದ ಆನೆಗುಂದಿಯ ಚಿಂತಾಮಣಿ ಮಹಾ ಸಂಸ್ಥಾನಕ್ಕೆ ಭೇಟಿ ನೀಡಿ ಕಾಶಿ ವಿಶ್ವೇಶ್ವರ ಸ್ವಾಮಿಗೆ ಅಭಿಷೇಕ ಸಲ್ಲಿಸಲಿದ್ದಾರೆ. 5ಕ್ಕೆ ಹುಲಿಗೆಮ್ಮ ತಾಯಿಯ ದರ್ಶನ ಪಡೆದು 6.30ಕ್ಕೆ ಹೊಸಪೇಟೆ ಪುರ ಪ್ರವೇಶ ಮಾಡಲಿದ್ದಾರೆ. ನಗರದ ವಡಕರಾಯಸ್ವಾಮಿ ದೇಗುಲದಿಂದ ವಾಸವಿ ಕಲ್ಯಾಣ ಮಂಟಪದ ವರೆಗೆ ಪೂರ್ಣಕುಂಭ ಸ್ವಾಗತ ಹಾಗೂ ಶೋಭಾಯಾತ್ರೆ ನಡೆಯಲಿದೆ, ರಾತ್ರಿ 7.30ಕ್ಕೆ ಶ್ರೀಗಳ ಧೂಳಿ ಪಾದಪೂಜೆ, ಮತ್ತು ಫಲ ಮಂತ್ರಾಕ್ಷತೆ ನಡೆಯಲಿದೆ.
ನಂತರ ಚಂದ್ರಮೌಳೇಶ್ವರಸ್ವಾಮಿಯ ಪೂಜೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ. ಎರಡನೇ ದಿನ ಜ.23ರಂದು ಬೆಳಿಗ್ಗೆ ಯಿಂದ ಮಧ್ಯಾಹ್ನದ ವರೆಗೆ ಹಂಪಿ ವಿರೂಪಾಕ್ಷೇಶ್ವರ ಸ್ವಾಮಿಗೆ ವಿಶೇಷ ಪೂಜೆ ನಡೆಯಲಿದೆ. ಸಂಜೆ 6ಕ್ಕೆ ನಗರದ ಚಿಂತಾಮಣಿ ಮಠಕ್ಕೆ ಪ್ರವೇಶ ಮಾಡಲಿದ್ದಾರೆ. ಶೋಭಾಯಾತ್ರೆ, ವೇದಿಕೆಯ ಕಾರ್ಯಕ್ರಮ ಶ್ರೀಗಳ ಆರ್ಶಿವಚನ ಪ್ರಸಾದ ವಿನಿಯೋಗ ನಡೆಯಲಿದೆ. ಮೂರನೇಯ ದಿನ ಚಿತ್ತವಾಡಗಿಯ ದತ್ತಾತ್ರೇಯ ದೇಗುಲ, ಕೋಟೆಯ ಶಂಕರಲಿಂಗ ದೇಗುಲ ಹಾಗೂ ಬಳ್ಳಾರಿ ರಸ್ತೆಯ ಬ್ರಾಹ್ಮಣ ಸಮಾಜದ ಗಾಯತ್ರಿ ದೇಗುಲಗಳಿಗೆ ಭೇಟಿ ನೀಡಲಿದ್ದಾರೆ ಎಂದರು.
ನಮ್ಮ ಸನಾತನ ಸಂಸ್ಕೃತಿಯ ಪ್ರತೀಕ ಹಾಗೂ ವಿಶೇಷ ಮಹತ್ವಹೊಂದಿದ ಶೃಂಗೇರಿ ಶ್ರೀಗಳ ಕಾರ್ಯಕ್ರಮದಲ್ಲಿ ಹೆಚ್ಚು ಹೆಚ್ಚು ಭಕ್ತರು ಜಾತಿಭೇದ ಹೊರತಾಗಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಹಾಗೂ ಗುರುಗಳ ಅನುಗ್ರಹ ಪಡೆಯಬೇಕು ಎಂದರು.
ಮಠದ ಆಡಳಿತಾಧಿಕಾರಿ ಶ್ರೀಕಾಂತ ಸಮಿತಿಯ ಅಧ್ಯಕ್ಷ ಪವನ, ಪ್ರಮುಖರಾದ ಸತ್ಯನಾರಾಯಣ ಜೋಶಿ, ಗಣೇಶ ಗೋಸಾವಿ, ಭರತ್ ಇತರರಿದ್ದರು.