Published
1 month agoon
By
Akkare Newsವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವಿರೋಧಿ ಪ್ರತಿಭಟನೆಗಳಿಗೆ ಬೆಂಬಲವಾಗಿ ವಿಪಕ್ಷಗಳ ನಾಯಕರು ಹೊಗೆ ಬಾಂಬ್, ಮೊಟ್ಟೆ, ನೀರಿನ ಬಾಟಲಿಗಳನ್ನು ಎಸೆದ ಪರಿಣಾಮ ಸರ್ಬಿಯಾ ಸಂಸತ್‌ನಲ್ಲಿ ಮಂಗಳವಾರ (ಮಾ.4) ಭಾರೀ ಗದ್ದಲ ಉಂಟಾಗಿದ್ದು, ಹಲವು ಸಂಸದರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸಂಸತ್‌ನಲ್ಲಿ ಆಗಿದ್ದೇನು?
ಮಂಗಳವಾರ ಸಂಸತ್ತಿನ ಅಧಿವೇಶನ ಪ್ರಾರಂಭವಾದಾಗ, ಸರ್ಬಿಯನ್ ಪ್ರೋಗ್ರೆಸ್ಸಿವ್ ಪಾರ್ಟಿ (ಎಸ್‌ಎನ್‌ಎಸ್) ನೇತೃತ್ವದ ಆಡಳಿತ ಪಕ್ಷವು ಕಾರ್ಯಸೂಚಿಯನ್ನು ಅನುಮೋದಿಸಿದ ನಂತರ, ಕೆಲವು ವಿರೋಧ ಪಕ್ಷದ ನಾಯಕರು ತಮ್ಮ ಸ್ಥಾನಗಳಿಂದ ಎದ್ದು ಸ್ಪೀಕರ್ ಕಡೆಗೆ ಓಡಿಹೋಗಿ ಭದ್ರತಾ ಸಿಬ್ಬಂದಿಯೊಂದಿಗೆ ಜಗಳವಾಡಿದ್ದಾರೆ. ಇನ್ನೂ ಕೆಲವರು ಹೊಗೆ ಬಾಂಬ್, ಮೊಟ್ಟೆ, ನೀರಿನ ಬಾಟಲಿ ಎಸೆದಿದ್ದಾರೆ.
ಸರ್ಬಿಯಾದಲ್ಲಿ 1990ರಲ್ಲಿ ಬಹು-ಪಕ್ಷ ಪ್ರಜಾಪ್ರಭುತ್ವವನ್ನು ಪರಿಚಯಿಸಿದ ನಂತರ ಈ ರೀತಿ ಘಟನೆ ನಡೆದಿರುವುದು ಇದೇ ಮೊದಲು ಎಂದು ವರದಿಗಳು ಹೇಳಿವೆ.
ಘಟನೆಯಲ್ಲಿ ಇಬ್ಬರು ಸಂಸದರು ಗಾಯಗೊಂಡಿದ್ದಾರೆ ಮತ್ತು ಎಸ್‌ಎನ್‌ಎಸ್ ಪಕ್ಷದ ಜಾಸ್ಮಿನಾ ಒಬ್ರಡೋವಿಕ್ ಎಂಬುವವರು ಪಾರ್ಶ್ವವಾಯುವಿಗೆ ಒಳಗಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಸ್ಪೀಕರ್ ಅನಾ ಬ್ರನಾಬಿಕ್ ತಿಳಿಸಿದ್ದಾರೆ.
ಸರ್ಕಾರದ ವಿರುದ್ದ ಪ್ರತಿಭಟನೆ
ನವೆಂಬರ್ 1, 2024ರಂದು ಎರಡನೇ ಅತಿದೊಡ್ಡ ನಗರವಾದ ನೋವಿ ಸ್ಯಾಡ್‌ನಲ್ಲಿ ಹೊಸದಾಗಿ ನವೀಕರಿಸಿದ ರೈಲು ನಿಲ್ದಾಣದ ಛಾವಣಿ ಕುಸಿದು 15 ಜನರು ಸಾವನ್ನಪ್ಪಿದರು ಮತ್ತು ಇಬ್ಬರು ತೀವ್ರವಾಗಿ ಗಾಯಗೊಂಡಿದ್ದರು.
ಈ ಘಟನೆಯನ್ನು ಖಂಡಿಸಿ ಸರ್ಕಾರದ ವಿರುದ್ದ ಡಿಸೆಂಬರ್‌ನಲ್ಲಿ ದೇಶದಾದ್ಯಂತ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ಪ್ರಾರಂಭಿಸಿದ್ದರು. ಈಗ ಆ ಪ್ರತಿಭಟನೆಗೆ ಶಿಕ್ಷಕರು, ರೈತರು ಮತ್ತು ಇತರ ಕಾರ್ಮಿಕರು ಕೈ ಜೋಡಿಸಿದ್ದಾರೆ.
ಅಧ್ಯಕ್ಷ ಅಲೆಕ್ಸಾಂಡರ್ ವುಸಿಕ್ ಅವರ ದಶಕದ ಅಧಿಕಾರಾವಧಿಯಲ್ಲಿ ನಡೆದ ಭ್ರಷ್ಟಾಚಾರವೇ ಈ ಛಾವಣಿ ಕುಸಿತ ದುರಂತಕ್ಕೆ ಕಾರಣ ಎಂದು ಪ್ರತಿಭಟನಾ ನಿರತರು ಸೇರಿದಂತೆ ಸರ್ಬಿಯನ್ನರು ಆರೋಪಿಸಿದ್ದಾರೆ.
ಈಗಾಗಲೇ ರಾಷ್ಟ್ರದ ರಾಜಧಾನಿ ಬೆಲ್‌ಗ್ರೇಡ್‌ನಲ್ಲಿ ಮತ್ತು ದೇಶದಾದ್ಯಂತದ ಪಟ್ಟಣಗಳಲ್ಲಿ ನಡೆದ ಪ್ರತಿಭಟನೆಗಳು ಪ್ರಧಾನಿ ಮಿಲೋಸ್ ವುಸೆವಿಕ್ ಮತ್ತು ಇತರ ಇಬ್ಬರು ಮಂತ್ರಿಗಳ ರಾಜೀನಾಮೆಗೆ ಕಾರಣವಾಗಿವೆ.