Published
18 hours agoon
By
Akkare Newsಪುತ್ತೂರು ಎಪ್ರಿಲ್ 17: ಇತಿಹಾಸ ಪ್ರಸಿದ್ದ ಪುತ್ತೂರು ಸೀಮೆಯ ಮಹತೋಭಾರ ಮಹಾಲಿಂಗೇಶ್ವರ ದೇವಳದಲ್ಲಿ ಗುರುವಾರ ರಾತ್ರಿ ಬ್ರಹ್ಮರಥೋತ್ಸವ ಭಕ್ತಿ ಸಂಭ್ರಮದೊಂದಿಗೆ ವೈಭವದಿಂದ ನಡೆಯಿತು. ಈ ಕ್ಷಣವನ್ನು ಕಣ್ಣುಂಬಿಕೊಳ್ಳಲು ಭಕ್ತ ಜನಸಾಗರವೇ ದೇವಳದ ಗದ್ದೆಗೆ ಹರಿದು ಬಂದಿತ್ತು. ಇದರೊಂದಿಗೆ ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ಸಂಪನ್ನಗೊಂಡಿದೆ.
ರಾತ್ರಿ 7.30ರ ಬಳಿಕ ದೇವರ ಉತ್ಸವ ಆರಂಭಗೊಂಡಿತು. ಬ್ರಹ್ಮವಾಹಕರು ಉತ್ಸವ ಮೂರ್ತಿಯನ್ನು ಹೊತ್ತುಕೊಂಡು ಚೆಂಡೆ ಮೇಳ, ಮಂಗಳವಾದ್ಯ, ಬ್ಯಾಂಡ್ ವಾಲಗ, ಶಂಖ ಜಾಗಟೆ, ಮಂಗಳಕರ ನಿನಾದದೊಂದಿಗೆ ರಥಬೀದಿಯಲ್ಲಿ ಅಲಂಕರಿಸಿ ನಿಲ್ಲಿಸಿದ್ದ 20 ಅಡಿ ಎತ್ತರದ ಬ್ರಹ್ಮರಥದ ಬಳಿಗೆ ಸಾಗಿದರು. ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂರ್ವ ಸಂಪ್ರದಾಯದಂತೆ ಬ್ರಹ್ಮರಥದ ಬಳಿ ಕಾಜುಕುಜುಂಬ ದೈವದ ನುಡಿಗಟ್ಟು ನಡೆಯಿತು. ಬಳಿಕ ದೇವರು ರಥಾರೂಢರಾದರು.
ಬ್ರಹ್ಮರಥದಲ್ಲಿ ವಿರಾಜಮಾನರಾದ ದೇವರಿಗೆ ಪೂಜೆ ನೆರವೇರಿಸಲಾಯಿತು. ಈ ದೃಶ್ಯವನ್ನು ಕಣ್ಣುಂಬಿಕೊಂಡ ಭಕ್ತ ಸಾಗರದ ಜಯಘೋಷ ಮುಗಿಲು ಮುಟ್ಟಿತು. ಬಳಿಕ ಸಿಡಿಮದ್ದು ಪ್ರದರ್ಶನದ ರೋಚಕತೆ. ರಥಬೀದಿಯಲ್ಲಿ ಬ್ರಹ್ಮರಥವನ್ನು ಎಳೆಯುವ ಬ್ರಹ್ಮರಥೋತ್ಸವ ವೈಭವ ವಿಜೃಂಭಿಸಿತು. ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆದ ಬ್ರಹ್ಮರಥೋತ್ಸವದಲ್ಲಿ ಆರಂಭದಲ್ಲಿ ಬ್ರಹ್ಮರಥ ಸೇವೆ ನೀಡಿದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಈ ಬಾರಿ ದಾಖಲೆಯ ರಥೋತ್ಸವ ಸೇವೆ ನಡೆದಿದ್ದು, 200 ಕ್ಕೂ ಮಿಕ್ಕಿದ ಬ್ರಹ್ಮರಥ ಸೇವೆ ನಡೆದಿದೆ. ಪ್ರತೀ ಪೂಜೆಗೆ ದೇವಸ್ಥಾನದ ವತಿಯಿಂದ 25 ಸಾವಿರ ರೂಪಾಯಿ ನಿಗದಿಯಾಗಿದ್ದು, ಬ್ರಹ್ಮರಥ ಪೂಜೆಯೊಂದರಿಂದಲೇ ದೇವಸ್ಥಾನಕ್ಕೆ ಸುಮಾರು 50 ಲಕ್ಷ ರೂಪಾಯಿ ಆದಾಯ ಬಂದಿದೆ ಎಂದು ಹೇಳಲಾಗಿದೆ. ಅಲ್ಲದೆ ಇದೇ ಮೊದಲ ಬಾರಿಗೆ 200 ಬ್ರಹ್ಮರಥ ಸೇವೆ ಕ್ಷೇತ್ರದಲ್ಲಿ ನಡೆದಿದೆ. ‘ಪುತ್ತೂರು ಬೆಡಿ’ ಖ್ಯಾತಿಯ ಸಿಡಿಮದ್ದು ಪ್ರದರ್ಶನ ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸಿ ಭಕ್ತರ ಕಣ್ಮನ ಸೆಳೆಯಿತು.