Published
8 months agoon
By
Akkare News
ಆಟಿ ತಿಂಗಳಿಗೆ ತುಳುನಾಡಿನಲ್ಲಿ ತನ್ನದೇ ಆದ ವಿಶೇಷತೆ ಇದೆ. ತುಳುವರ ಇಷ್ಟ ಮತ್ತು ಕಷ್ಟದ ತಿಂಗಳು ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಆಟಿ ತಿಂಗಳಲ್ಲಿ ಬರುವ ‘ಅಮಾವಾಸ್ಯೆ’ ಯನ್ನು ‘ ಆಟಿದ ಅಮಾಸೆ’ ಎಂದೇ ಆಚರಿಸಲಾಗುತ್ತದೆ. ತುಳುನಾಡಿನಲ್ಲಿ ವರ್ಷದ ಮೊದಲ ಹಬ್ಬ ಆರಂಭವಾಗುವುದೇ ಈ ಆಟಿಯ ಅಮಾವಾಸ್ಯೆಯ ಮೂಲಕ. ಆಟಿದ ಅಮಾವಾಸ್ಯೆಯ ಬಳಿಕ ಸಾಲು ಸಾಲು ಹಬ್ಬಗಳು ಬರುತ್ತವೆ. ಆಟಿದ ಅಮಾವಾಸ್ಯೆಗೆ ತುಳುನಾಡಿನಲ್ಲಿ ಬಹಳ ವಿಶೇಷ ಸ್ಥಾನಮಾನವಿದೆ. ದೈವಗಳಿಗೆ ಅಗೇಲು ಕೊಡುವ ಕ್ರಮ ಕೂಡ ಈ ದಿನವೇ ನಡೆಯುತ್ತದೆ.
ತುಳುವರು ದೈವರಾಧಕರಾಗಿದ್ದು ಮನೆಯ ದೈವಗಳಿಗೆ ಈ ದಿನ ವಿಶೇಷವಾದ ಅಗೇಲು ಬಡಿಸುವ ಕ್ರಮ ಮಾಡುತ್ತಾರೆ.
ಇದಲ್ಲದೆ ನಮ್ಮನ್ನಗಲಿದ ಮನೆಯ ಸದಸ್ಯರಿಗೆ ಅಂದರೆ ಪ್ರೇತಗಳಿಗೆ ಬಡಿಸುವ ಕ್ರಮವೂ ಇದೇ ಆಟಿಯ ಅಮಾವಾಸ್ಯೆಯ ದಿನ ನಡೆಯುತ್ತದೆ. ತುಳುವರದ್ದು ಕೂಡು ಕುಟುಂಬ ಪದ್ಧತಿ. ಹಾಗಿದ್ದ ಮೇಲೆ ಸಾವು ಇಲ್ಲದ ಮನೆಯನ್ನು ಹುಡುಕುವುದು ಕಷ್ಟ. ಮನುಷ್ಯನ ಆತ್ಮವನ್ನು ತುಳುವರು ಪ್ರೇತ, ಕುಲೆ ಎಂದು ನಂಬುತ್ತಾರೆ. ಮನೆಯಲ್ಲಿ ಮರಣ ಹೊಂದಿದವರಿಗೆ ಆಟಿ ಅಮಾವಾಸ್ಯೆ ದಿನ ವಿಶೇಷ ಅಗೇಲು ಬಡಿಸುವ ಕ್ರಮ ತುಳುನಾಡಿನಲ್ಲಿ ನಡೆಯುತ್ತದೆ.
ಇನ್ನು ಆಟಿ ಅಮಾವಾಸ್ಯೆಯ ಮತ್ತೊಂದು ವಿಶೇಷವೆಂದರೆ ಈ ದಿನ ಹಾಲೆ ಮರದ ರಸ ಅಂದರೆ ‘ಆಟಿದ ಮರ್ದ್’ ಕುಡಿಯುವ ಕ್ರಮ ನಡೆಯುತ್ತದೆ. ಪ್ರತಿ ಮನೆಯಲ್ಲೂ ಈ ಆಟಿದ ಮರ್ದ್ ಕುಡಿಯುವ ಕ್ರಮ ನಡೆದರೆ ಕೆಲವೊಂದು ದೈವಸ್ಥಾನ, ದೇವಸ್ಥಾನಗಳಲ್ಲೂ ಬೆಳಗ್ಗಿನ ಜಾವ ಭಕ್ತರಿಗೆ ಆಟಿದ ಮರ್ದ್(ಹಾಲೆ ಮರದ ಕಷಾಯ) ವಿತರಣೆ ನಡೆಯುತ್ತದೆ. ಕನ್ನಡದಲ್ಲಿ ಹಾಲೆ ಮರ ಕರೆಯುವ ಈ ಮರವನ್ನು ತುಳುವಿನಲ್ಲಿ ಬಲಿಯೇಂದ್ರ ಮರ ಎಂತಲೂ ಇಂಗ್ಲೀಷ್‌ನಲ್ಲಿ ಡೆವಿಲ್ ಟೀ ಎಂದು ಕರೆಯುತ್ತಾರೆ. ಈ ಮರದ ತೊಗಟೆಯ ರಸವನ್ನು ಈ ದಿನ ಕುಡಿಯುತ್ತಾರೆ. ಮುಂಜಾವಿನ ವೇಳೆಗೆ ಹಾಲೆ ಮರದ ಬಳಿ ತೆರಳಿ ಒಂದು ಚೂಪು ಕಲ್ಲಿನಿಂದ ಜಜ್ಜಿ ಮರದ ತೊಗಟೆಯನ್ನು ತೆಗೆಯಲಾಗುತ್ತದೆ. ಇಲ್ಲಿ ಕತ್ತಿ ಸೇರಿದಂತೆ ಕಬ್ಬಿಣದ ವಸ್ತುಗಳನ್ನು ಬಳಸಬಾರದು ಎಂಬುದು ಹಿರಿಯರ ನಿಯಮವಿದೆ. ಏಕೆಂದರೆ ಲೋಹದ ಅಂಶ ಮರಕ್ಕೆ ತಾಗಿದರೆ ಔಷಧೀಯ ಗುಣಗಳು ನಾಶವಾಗುತ್ತದೆ ಎನ್ನಲಾಗಿದೆ