Published
15 hours agoon
By
Akkare News
ತಿರುಮಲ: ರಾಜ್ಯ, ಹೊರ ರಾಜ್ಯಗಳಿಂದಲೂ ಆಗಮಿಸುವ ವಿಶ್ವ ಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಮುಡಿ ಕೊಡುವವರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಇಷ್ಟಾರ್ಥ ಸಿದ್ಧಿಗಾಗಿ, ವರ್ಷಕ್ಕೊಮ್ಮೆ, ಮೂರು ವರ್ಷಕ್ಕೊಮ್ಮೆ ಮುಡಿಕೊಡುವ ಭಕ್ತರು ಸಂಖ್ಯೆ ಅಪಾರ. ಒಂದೇ ತಿಂಗಳಲ್ಲಿ ಸುಮಾರು 12ಲಕ್ಷಕ್ಕೂ ಅಧಿಕ ಭಕ್ತರು ಶ್ರೀ ವೆಂಕಟೇಶ್ವರನಿಗೆ ಮುಡಿ ಅರ್ಪಿಸಿದ್ದಾರೆ. ಈ ಮೂಲಕ ಕಳೆದ ಎರಡು ವರ್ಷದಲ್ಲೇ ಅತ್ಯಧಿಕ ಮಂದಿ ಕೇಶ ಮುಂಡನ ನೀಡಿದಂತಾಗಿದ್ದು, ದಾಖಲೆ ನಿರ್ಮಾಣವಾಗಿದೆ. ಇದರಿಂದ ದೇಗುಲಕ್ಕೆ ಭರ್ಜರಿ ಆದಾಯ ಸಂಗ್ರಹವಾಗಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕ ನಾನಾ ಭಾಗಗಳು ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಭಕ್ತರು ನಿತ್ಯ ಟಿಟಿಗೆ ಅಗಮಿಸುತ್ತಾರೆ. ಅದರಲ್ಲಿ ಅನೇಕರು ಮುಡಿ ಕೊಡುವುದಾಗಿ ದೇವರಿಗೆ ಬೇಡಿಕೊಂಡಿರುತ್ತಾರೆ. ಅಂತಹ ಭಕ್ತರ ಸಂಖ್ಯೆ ಕಳೆದ ಮೇ ತಿಂಗಳಲ್ಲಿ ಏರಿಕೆ ಆಗಿದೆ. ಒಂದೇ ತಿಂಗಳಿನಲ್ಲಿ ಸುಮಾರು 12,43,063 ಭಕ್ತರು ತಮ್ಮ ಕೇಶವನ್ನು ದೇವರಿಗೆ ಅರ್ಪಿಸಿದ್ದಾರೆ
ನಿತ್ಯ 70ಸಾವಿರ ಭಕ್ತರಿಂದ ದೇವರ ದರ್ಶನ ಈ ವರ್ಷ ಬೇಸಿಗೆ ರಜೆ, ವಾರಾಂತ್ಯಗಳ ಕಾರಣದಿಂದಾಗಿ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಬರುವ ಭಕ್ತರ ಪ್ರಮಾಣ ಹೆಚ್ಚಾಗಿತ್ತು. ಇದು ಸಹ ಮುಡಿ ಕೊಡುವವರ ಸಂಖ್ಯೆ ಹೆಚ್ಚಾಗಲು ಕಾರಣ ಎನ್ನಲಾಗಿದೆ. ನಿತ್ಯ ಸುಮಾರು 40ರಿಂದ 50 ಸಾವಿರದ ಆಸುಪಾಸು ಭಕ್ತರು ಮುಡಿ ಕೊಟ್ಟಿದ್ದಾರೆ. ಮತ್ತೊಂದೆಡೆ ಮೇ 18ರಿಂದ ಒಟ್ಟು ಆರು ದಿನಗಳಲ್ಲಿ ಲಕ್ಷಾಂತರ ಭಕ್ತರು ತಿರಪತಿ ದೇವಾಲಯಕ್ಕೆ ಭೇಟಿ ನೀಡಿ ಬಾಲಾಜಿ ದರ್ಶನ ಪಡೆದಿದ್ದಾರೆ. ನಿತ್ಯ ಸುಮಾರು 60-70 ಸಾವಿರದಷ್ಟು ಜನ ತಿರುಪತಿಗೆ ಭೇಟಿ ಕೊಡುತ್ತಾರೆ ಎಂದು ಅಡಳಿತ ಮಂಡಳಿ ಮಾಹಿತಿ ನೀಡಿದೆ.