ನವದೆಹಲಿ, ಮೇ 14: ದೇಶದ ಚುನಾವಣಾ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕ ಹಾಗೂ ನಿಖರಗೊಳಿಸುವ ಉದ್ದೇಶದಿಂದ ಭಾರತ ಚುನಾವಣಾ ಆಯೋಗವು (ECI) ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಮೂರನೇ ಹಂತವನ್ನು ಕರ್ನಾಟಕ ಸೇರಿದಂತೆ 16 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಂತ ಹಂತವಾಗಿ ನಡೆಸಲು ನಿರ್ಧರಿಸಿದೆ.
ಈ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸುಮಾರು 36.73 ಕೋಟಿ ಮತದಾರರನ್ನು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯಲಿದ್ದು, ಇದಕ್ಕಾಗಿ ದೇಶಾದ್ಯಂತ 3.94 ಲಕ್ಷ ಬೂತ್ ಮಟ್ಟದ ಅಧಿಕಾರಿಗಳು (BLOs) ಹಾಗೂ ರಾಜಕೀಯ ಪಕ್ಷಗಳು ನೇಮಕ ಮಾಡಿರುವ 3.42 ಲಕ್ಷ ಬೂತ್ ಮಟ್ಟದ ಪ್ರತಿನಿಧಿಗಳು (BLAs) ಭಾಗವಹಿಸಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಕರ್ನಾಟಕದಲ್ಲಿ ಈ ಪ್ರಕ್ರಿಯೆಯ ಅರ್ಹತಾ ದಿನಾಂಕವನ್ನು 2026ರ ಅಕ್ಟೋಬರ್ 1 ಎಂದು ನಿಗದಿಪಡಿಸಲಾಗಿದೆ. ಕರ್ನಾಟಕ ಸೇರಿದಂತೆ ಮೇಘಾಲಯ, ಮಹಾರಾಷ್ಟ್ರ, ಜಾರ್ಖಂಡ್ ಮತ್ತು ದೆಹಲಿ ರಾಜ್ಯಗಳಲ್ಲಿ ಜೂನ್ 30ರಿಂದ ಜುಲೈ 29ರವರೆಗೆ ಮನೆ ಮನೆ ಭೇಟಿ ಕಾರ್ಯ ನಡೆಯಲಿದೆ. ಬಳಿಕ ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 7ರಂದು ಪ್ರಕಟವಾಗಲಿದೆ.
ಕರ್ನಾಟಕ ರಾಜ್ಯದಲ್ಲಿ ಒಟ್ಟು 59,050 BLOಗಳು, 25,284 BLAs ಕಾರ್ಯ ನಿರ್ವಹಿಸಲಿದ್ದು, ರಾಜ್ಯದಲ್ಲಿ ಪ್ರಸ್ತುತ 5.55 ಕೋಟಿ ಮತದಾರರು ದಾಖಲಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ರಾಜಕೀಯ ಪಕ್ಷಗಳು ಪ್ರತಿಯೊಂದು ಮತಗಟ್ಟೆಗೆ ತಮ್ಮ ಪ್ರತಿನಿಧಿಗಳನ್ನು ನೇಮಿಸುವಂತೆ ಚುನಾವಣಾ ಆಯೋಗ ಮನವಿ ಮಾಡಿದ್ದು, ಈ ಮೂಲಕ ಸಂಪೂರ್ಣ ಪಾರದರ್ಶಕತೆ ಹಾಗೂ ಎಲ್ಲರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ಆಯೋಗ ತಿಳಿಸಿದೆ. ಚಳಿಗಾಲ ಹಾಗೂ ಜನಗಣತಿ ಕಾರ್ಯಗಳ ಹಿನ್ನೆಲೆ ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ ಮತ್ತು ಲಡಾಖ್ ರಾಜ್ಯಗಳಿಗೆ ಸಂಬಂಧಿಸಿದ ವೇಳಾಪಟ್ಟಿಯನ್ನು ನಂತರ ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ