Connect with us

ರಾಜಕೀಯ

ಖರ್ಗೆ ಭಾಷಣ ಸ್ಥಳದ ‘ಶುದ್ಧೀಕರಣ’: ಬಿಜೆಪಿ-RSS, ಸಂಘ ಪರಿವಾರದ ವಿಷಪೂರಿತ ಮನಸ್ಥಿತಿ ಮಾಜಿ ಸಿಎಂ ಸಿದ್ದರಾಮಯ್ಯ

Published

on

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ, ಬಲಪಂಥೀಯ ಸಂಘಟನೆಯೊಂದು ಆ ಮೈದಾನದಲ್ಲಿ ‘ಶುದ್ಧೀಕರಣ’ ಕೈಗೊಂಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕೃತ್ಯವು ಜಾತಿವಾದ ಮತ್ತು ಅಸ್ಪೃಶ್ಯತೆಯ ಮತ್ತೊಂದು ರೂಪವಾಗಿದ್ದು, ಬಿಜೆಪಿ-ಆರ್‌ಎಸ್‌ಎಸ್ ಸಂಘ ಪರಿವಾರದ ವಿಷಪೂರಿತ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ತಮ್ಮ ಸಾಮಾಜಿಕ ಮಾಧ್ಯಗಳ ಮೂಲಕ ಟೀಕಿಸಿದ್ದದಾರೆ.
ಮಾನವ ಘನತೆ ಮತ್ತು ಸಂವಿಧಾನದ ಮೇಲಿನ ದಾಳಿ
ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಸಿದ್ದರಾಮಯ್ಯ, ನಮ್ಮ ಸಂವಿಧಾನದಲ್ಲಿ ಅಸ್ಪೃಶ್ಯತೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಿದ್ದರೂ ಬಲಪಂಥೀಯ ಸಂಘಟನೆಗಳು ಎಸಗಿರುವ ಈ ಕೃತ್ಯವು ಸಮಾನತೆ ಹಾಗೂ ಮಾನವ ಘನತೆಯ ಮೇಲಿನ ನೇರ ದಾಳಿಯಾಗಿದೆ. ಈ ನಾಚಿಕೆಗೇಡಿನ ಶುದ್ಧೀಕರಣ ಘಟನೆಗೆ ಕಾರಣರಾದವರ ವಿರುದ್ಧ ತಕ್ಷಣವೇ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಎಫ್‌ಐಆರ್ (FIR) ದಾಖಲಿಸಬೇಕು,” ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ಅಧ್ಯಕ್ಷರಿಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸುತ್ತಿರುವ ರಾಹುಲ್ ಗಾಂಧಿ ಅವರ ನಿಲುವು ಸಂಪೂರ್ಣವಾಗಿ ಸರಿಯಾಗಿದೆ ಎಂದಿದ್ದಾರೆ.
ಬಿಜೆಪಿ-ಆರ್‌ಎಸ್‌ಎಸ್‌ ಆಳದ ಜಾತಿವಾದಿ ಮನಸ್ಥಿತಿ ಬಹಿರಂಗ
ಉತ್ತರಾಖಂಡ ಬಿಜೆಪಿ ಅಧ್ಯಕ್ಷ ಮಹೇಂದ್ರ ಭಟ್ ಅವರು ಈ ಸೋಕಾಲ್ಡ್ ‘ಶುದ್ಧೀಕರಣ’ ಕೃತ್ಯವನ್ನು ಸಮರ್ಥಿಸಿಕೊಂಡಿರುವುದಕ್ಕೆ ಸಿದ್ದರಾಮಯ್ಯ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ರಾಜ್ಯದ ಆಡಳಿತಾರೂಢ ಪಕ್ಷದ ಅಧ್ಯಕ್ಷರೇ ಇಂತಹ ಜಾತಿವಾದಿ ಕೃತ್ಯದಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿರುವುದನ್ನು ನೋಡಿದರೆ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ರಾಜಕಾರಣದೊಳಗೆ ಆಳವಾಗಿ ಬೇರೂರಿರುವ ಅಸ್ಪೃಶ್ಯತೆ ಮತ್ತು ಜಾತಿಯಾಧಾರಿತ ಮನಸ್ಥಿತಿ ಎಷ್ಟರಮಟ್ಟಿಗೆ ಇದೆ ಎಂಬುದು ಬಯಲಾಗಿದೆ,” ಎಂದು ಝಾಡಿಸಿದ್ದಾರೆ.
ಮೋದಿ ಮೌನಕ್ಕೆ ಸಿದ್ದರಾಮಯ್ಯ ಪ್ರಶ್ನೆ
ಇದು ಕೇವಲ ಮಲ್ಲಿಕಾರ್ಜುನ ಖರ್ಗೆ ಒಬ್ಬರಿಗೆ ಮಾತ್ರ ಸಂಬಂಧಿಸಿದ ವಿಷಯವಲ್ಲ ಎಂದಿರುವ ಅವರು, ದೇಶಾದ್ಯಂತ ದಲಿತರು ಕೇವಲ ತಮ್ಮ ಜಾತಿಯ ಕಾರಣಕ್ಕಾಗಿ ಪ್ರತಿದಿನವೂ ಇಂತಹ ಅವಮಾನ, ತಾರತಮ್ಯ ಮತ್ತು ಅಪಮಾನಗಳನ್ನು ಎದುರಿಸುತ್ತಲೇ ಇದ್ದಾರೆ. ಇಂತಹ ನಿಂದನೀಯ ಕೃತ್ಯಗಳು ನಡೆದಾಗ ಹಾಗೂ ತಮ್ಮದೇ ಪಕ್ಷದ ನಾಯಕರು ಅದನ್ನು ಬಹಿರಂಗವಾಗಿ ಸಮರ್ಥಿಸಿಕೊಂಡಾಗ ಮೌನ ವಹಿಸುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಲು ಯಾವುದೇ ಅರ್ಹತೆ ಇಲ್ಲ, ಎಂದು ಕಿಡಿಕಾರಿದ್ದಾರೆ. ಅಂತಿಮವಾಗಿ, ಅಸ್ಪೃಶ್ಯತೆಯ ಈ ಕೃತ್ಯವನ್ನು ಪ್ರಧಾನಿ ಮೋದಿ ಅವರು ಖಂಡಿಸುತ್ತಾರೆಯೇ ಅಥವಾ ಅದನ್ನು ಸಮರ್ಥಿಸುವವರ ಪರವಾಗಿ ಬಿಜೆಪಿ ನಿಲ್ಲುತ್ತದೆಯೇ ಎಂಬುದನ್ನು ದೇಶದ ಜನರಿಗೆ ಸ್ಪಷ್ಟಪಡಿಸಬೇಕು,” ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

 
 

Continue Reading
Click to comment

Leave a Reply

Your email address will not be published. Required fields are marked *

Advertisement