Published
18 hours agoon
By
Akkare News

ಘಟನೆಯ ವಿವರ:
ಕಳೆದ ಎರಡು ವರ್ಷಗಳಿಂದ ಹಕೀಂ ಕೂರ್ನಡ್ಕ ಶಾಸಕರ ವಿರುದ್ಧ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ನಿರಂತರವಾಗಿ ಅಪಪ್ರಚಾರ ಮಾಡುತ್ತಿದ್ದ ಎನ್ನಲಾಗಿದೆ. ಇತ್ತೀಚೆಗೆ ಆತ ಸುದ್ದಿಗೋಷ್ಠಿ ನಡೆಸಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಸಂದೇಶ (ವಾಯ್ಸ್ ಮೆಸೇಜ್) ರವಾನಿಸುವ ಮೂಲಕ ಪಕ್ಷ ಮತ್ತು ಶಾಸಕರಿಗೆ ಮುಜುಗರ ಉಂಟುಮಾಡುತ್ತಿದ್ದ. ಆದರೆ, ಈತನಿಗೆ ಕಾಂಗ್ರೆಸ್ನಲ್ಲಿ ಯಾವುದೇ ಹುದ್ದೆ ಇಲ್ಲ ಹಾಗೂ ಈತ ಪಕ್ಷದ ಕಾರ್ಯಕರ್ತನಲ್ಲ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಈಗಾಗಲೇ ಸ್ಪಷ್ಟನೆ ನೀಡಿತ್ತು.
ಇಂದು ಮಧ್ಯಾಹ್ನ ಹಕೀಂ ಕೂರ್ನಡ್ಕ ಪುತ್ತೂರು ಪ್ರೆಸ್ ಕ್ಲಬ್ಗೆ ಆಗಮಿಸಿದ್ದ ವಿಷಯ ತಿಳಿಯುತ್ತಿದ್ದಂತೆ, ಅಲ್ಲಿಗೆ ಧಾವಿಸಿದ ಶಾಸಕರ ಬೆಂಬಲಿಗರು ಮತ್ತು ಕಾರ್ಯಕರ್ತರು ಆತನ ವಿರುದ್ಧ ಕೂಗಾಡಿದ್ದಾರೆ. ಸ್ಥಳಕ್ಕೆ ಸ್ವತಃ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಆಗಮಿಸಿ ತಮ್ಮ ಕಾರ್ಯಕರ್ತರನ್ನು ಸಮಾಧಾನಪಡಿಸಲು ಯತ್ನಿಸಿದರೂ, ತಾಳ್ಮೆ ಕಳೆದುಕೊಂಡ ಬೆಂಬಲಿಗರು ಹಕೀಂ ವಿರುದ್ಧ ಆಕ್ರೋಶ ಹೊರಹಾಕಿದರು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಹಕೀಂ ತಕ್ಷಣವೇ ರಕ್ಷಣೆಗಾಗಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪುತ್ತೂರು ಪೊಲೀಸರು ಹಕೀಂನನ್ನು ತಮ್ಮ ಜೀಪ್ನಲ್ಲಿ ಸುರಕ್ಷಿತವಾಗಿ ಠಾಣೆಗೆ ಕರೆದೊಯ್ದಿದ್ದಾರೆ.
ಶಾಸಕರು ಹಾಗೂ ಪಕ್ಷದ ಮುಖಂಡರ ಕುರಿತು ನಿಂದನೆ ಮಾಡಿರುವ ಬಗ್ಗೆ ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಈ ಸಂದರ್ಭದಲ್ಲಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಘಟನೆ ಕುರಿತು ಶಾಸಕ ಅಶೋಕ್ ಕುಮಾರ್ ರೈ ಮಾತು:
ಈ ಘಟನೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, “ನಾವು ಕಚೇರಿಯಲ್ಲಿದ್ದಾಗ ಕಾರ್ಯಕರ್ತರು ಇಂದಿರಾ ಕ್ಯಾಂಟೀನ್ ಕಡೆಗೆ ಊಟಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಹಕೀಂ ಕೂರ್ನಡ್ಕ ಎಂಬಾತ ಪ್ರೆಸ್ ಕ್ಲಬ್ ಬಳಿ ಬಂದು ಶಾಸಕರ ಜಾತಕವನ್ನು ಪ್ರೆಸ್ನಲ್ಲಿ ಜಾಹೀರಾತು ಮಾಡುತ್ತೇನೆ, ಬುದ್ಧಿ ಕಲಿಸುತ್ತೇನೆ ಎಂದು ಪ್ರಚೋದನಾಕಾರಿಯಾಗಿ ಮಾತನಾಡಿದ್ದಾನೆ. ಅಲ್ಲದೆ ಶಾಸಕರ ತಂದೆ-ತಾಯಿ, ಹೆಂಡತಿ ಹಾಗೂ ಮಹಿಳಾ ಕಾರ್ಯಕರ್ತರ ವಿರುದ್ಧವೂ ಕೀಳುಮಟ್ಟದ ಮಾತುಗಳನ್ನು ಆಡಿ ನಿಂದಿಸಿದ್ದಾನೆ” ಎಂದು ತಿಳಿಸಿದರು.

ಇದೇ ವೇಳೆ ಸ್ಥಳದಲ್ಲಿದ್ದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರೂ ಕೂಡ ಹಕೀಂ ಕೂರ್ನಡ್ಕ ತಮ್ಮ ವಿರುದ್ಧ ಜಾಲತಾಣಗಳಲ್ಲಿ ಕೀಳುಮಟ್ಟದ ಸಂದೇಶ ಕಳುಹಿಸಿ ನಿಂದನೆ ಮಾಡಿದ್ದಾರೆ ಎಂದು ಮಾಧ್ಯಮಗಳ ಎದುರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

