Published
3 hours agoon
By
Akkare News
ಮಂಗಳೂರು:ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಮೂಡುಬಿದಿರೆ ಹಾಗೂ ಸುಳ್ಯದ ನ್ಯಾಯಾಲಯಗಳ ಆವರಣದಲ್ಲಿ ಮಾ. 14ರಂದು ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ’ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶ ಬಸವರಾಜ ಹೇಳಿದರು.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ 2.0 ಎಂಬ 90 ದಿನಗಳ ವಿಶೇಷ ಮಧ್ಯಸ್ಥಿಕಾ ಅಭಿಯಾನದ ಅಡಿಯಲ್ಲಿ ಜನವರಿ 1ರಿಂದ ಪ್ರಕರಣಗಳ ಗುರುತಿಸುವಿಕೆ ಆರಂಭವಾಗಿದ್ದು, ಜಿಲ್ಲೆಯಲ್ಲಿ 87 ವಕೀಲರು ಮಧ್ಯಸ್ಥಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಫೆಬ್ರುವರಿ 1ಕ್ಕೆ ಗುರುತಿಸಿರುವಂತೆ ಜಿಲ್ಲೆಯಲ್ಲಿ ಒಟ್ಟು 54,677 ಪ್ರಕರಣಗಳು ಬಾಕಿ ಇವೆ. ಅವುಗಳಲ್ಲಿ ಸುಮಾರು 3 ಸಾವಿರ ಪ್ರಕರಣಗಳನ್ನು ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ಬಗೆಹರಿಸಲು ಗುರುತಿಸಲಾಗಿದೆ. ಈಗಾಗಲೇ 220 ಪ್ರಕರಣಗಳು ಇತ್ಯರ್ಥಗೊಂಡಿವೆ. ಮಧ್ಯಸ್ಥಿಕೆ ಅಭಿಯಾನದಡಿ 931 ಪ್ರಕರಣ ಗುರುತಿಸಲಾಗಿದ್ದು, 126 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದರು.
ಕಳೆದ ಡಿಸೆಂಬರ್ 13ರಂದು ನಡೆದ ಲೋಕ್ ಅದಾಲತ್ನಲ್ಲಿ 3,499 ಬಾಕಿ ಪ್ರಕರಣ ಬಗೆಹರಿಸಲಾಗಿದ್ದು, ₹32.54 ಕೋಟಿ ಪರಿಹಾರವನ್ನು ಕಕ್ಷಿದಾರರಿಗೆ ಒದಗಿಸಲಾಗಿದೆ. 2.94 ಲಕ್ಷ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿ, ₹102.94 ಕೋಟಿ ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದರು.
ತ್ಯರ್ಥವಾಗಬಲ್ಲ ಪ್ರಕರಣಗಳು ಯಾವುವು?: ಮೋಟಾರು ವಾಹನ ಅಪಘಾತ ಪ್ರಕರಣ, ಚೆಕ್ ಅಮಾನ್ಯ, ಬ್ಯಾಂಕ್ ಸಾಲ ವಸೂಲಾತಿ ಪ್ರಕರಣ, ಕಾರ್ಮಿಕ ಹಾಗೂ ನಷ್ಟ ಪರಿಹಾರ ವಿವಾದಗಳು, ಅಕ್ರಮ ಮರಳು ಸಾಗಣೆ, ವೈವಾಹಿಕ ಮತ್ತು ಜೀವನಾಂಶ ಪ್ರಕರಣ (ವಿವಾಹ ವಿಚ್ಛೇದನ ಹೊರತುಪಡಿಸಿ), ಗ್ರಾಹಕರ ವಿವಾದ, ವಿದ್ಯುತ್ – ನೀರಿನ ಶುಲ್ಕ, ವೇತನ ಭತ್ಯೆ, ಜನನ ಪ್ರಮಾಣ ಪತ್ರ, ಭೂ ಸ್ವಾಧೀನ ಹಾಗೂ ಭೂ ಸ್ವಾಧೀನ ಪರಿಹಾರ ಹಂಚಿಕೆ, ರಾಜಿ ಯೋಗ್ಯ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ರಾಜಿಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ ಉಪಸ್ಥಿತರಿದ್ದರು.






