Published
2 months agoon
By
Akkare News
ಮಂಗಳೂರು ಮೇ 24: ಇಂಧನ ದರ ಏರಿಕೆ, ವಿಮೆ ಮೊತ್ತ ಹಾಗೂ ಬಿಡಿಭಾಗಗಳ ಬೆಲೆ ಹೆಚ್ಚಳದಿಂದಾಗಿ ಖಾಸಗಿ ಬಸ್ ಮಾಲೀಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರಯಾಣ ದರ ಏರಿಕೆ ಮಾಡುವುದು ಅನಿವಾರ್ಯವಾಗಿದ್ದರೂ, ಸದ್ಯದ ಮಟ್ಟಿಗೆ ದರ ಹೆಚ್ಚಳ ಮಾಡದಿರಲು ನಿರ್ಧರಿಸಲಾಗಿದೆ ಎಂದು ದಕ್ಷಿಣ ಕನ್ನಡ ಬಸ್ ಮಾಲೀಕರ ಸಂಘದ ಅಧ್ಯಕ್ಷ ಅಜೀಜ್ ಪರ್ತಿಪಾಡಿ ಶನಿವಾರ ಇಲ್ಲಿ ತಿಳಿಸಿದರು.

ಮಳೆಗಾಲದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗೆ ಸಂಘದಿಂದ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಲಾಗುವುದು ಎಂದ ಅಧ್ಯಕ್ಷರು, ‘ಬಸ್ ಚಾಲಕರು ಹಾಗೂ ನಿರ್ವಾಹಕರು ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳೊಂದಿಗೆ ವಿನಯದಿಂದ ವರ್ತಿಸಬೇಕು. ಮಳೆ ಸಂದರ್ಭದಲ್ಲಿ ಅತ್ಯಂತ ಜಾಗರೂಕತೆಯಿಂದ ವಾಹನ ಚಲಾಯಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ನಿಗದಿತ ಸ್ಥಳಕ್ಕೆ ತಲುಪಿಸಬೇಕು’ ಎಂದು ಸೂಚಿಸಿದರು. ಸಂಚಾರ ದಟ್ಟಣೆ ಸವಾಲು: ನಗರದ ಪ್ರಮುಖ ಜಂಕ್ಷನ್‌ಗಳಾದ ಕೆಪಿಟಿ ಮತ್ತು ನಂತೂರುಗಳಲ್ಲಿ ಇನ್ನೂ ಕೆಲವು ತಾಂತ್ರಿಕ ಸಮಸ್ಯೆಗಳು ಬಾಕಿ ಇವೆ. ಇದರಿಂದಾಗಿ ಈ ಭಾಗದಲ್ಲಿ ತೀವ್ರ ವಾಹನ ದಟ್ಟಣೆ ಉಂಟಾಗುತ್ತಿದ್ದು, ಬಸ್‌ಗಳು ನಿಗದಿತ ವೇಳಾಪಟ್ಟಿಯಂತೆ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇದೇ ರೀತಿಯ ಸಮಸ್ಯೆ ಕುಂಟಿಕಾನ ಜಂಕ್ಷನ್, ಪಿವಿಎಸ್ ಹಾಗೂ ಬಂಟ್ಸ್ ಹಾಸ್ಟೆಲ್ ಭಾಗದಲ್ಲೂ ಎದುರಾಗುತ್ತಿದ್ದು, ಪ್ರಯಾಣಿಕರನ್ನು ಸರಿಯಾದ ಸಮಯಕ್ಕೆ ತಲುಪಿಸಲು ಬಸ್ ಸಿಬ್ಬಂದಿ ಹರಸಾಹಸ ಪಡಬೇಕಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕರ ಗಮನ ಸೆಳೆದರು.




