Connect with us

ಇತರ

ಉಡುಪಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ ಶಿಶು ಕಳ್ಳಸಾಗಣೆ ಮತ್ತು ಅಕ್ರಮ ದತ್ತು ಜಾಲ ಖ್ಯಾತ ವೈದ್ಯರೊಬ್ಬರು ಸೇರಿದಂತೆ ಇಬ್ಬರ ಬಂಧನ.

Published

on

​ಉಡುಪಿ, : ಉಡುಪಿಯಲ್ಲಿ ಶಿಶು ಅಕ್ರಮ ಹಸ್ತಾಂತರ ಹಾಗೂ ನಕಲಿ ದಾಖಲೆ ಸೃಷ್ಟಿಸಿ ಕಾನೂನುಬಾಹಿರವಾಗಿ ಮಗುವನ್ನು ನೀಡಿದ ಗಂಭೀರ ಪ್ರಕರಣ ಬೆಳಕಿಗೆ ಬಂದಿದ್ದು, ಖ್ಯಾತ ವೈದ್ಯರೊಬ್ಬರು ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣವು ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದ್ದು, ಶಿಶು ಕಳ್ಳಸಾಗಣೆ ಮತ್ತು ಅಕ್ರಮ ದತ್ತು ಜಾಲದ ಕುರಿತು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಜೂನ್ 19ರಂದು ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ವಲಯ ಮೇಲ್ವಿಚಾರಕರು ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದು, ಉಡುಪಿ ತಾಲೂಕಿನ ಸಂತೆಕಟ್ಟೆ-ನೇಜಾರು ನಿವಾಸಿಗಳಾದ ಪ್ರಕಾಶ್ ಹಾಗೂ ಪೂರ್ಣಿಮಾ ದಂಪತಿ ಸುಮಾರು ಒಂದು ತಿಂಗಳ ಹೆಣ್ಣು ಮಗುವನ್ನು ಯಾವುದೇ ಕಾನೂನಾತ್ಮಕ ಪ್ರಕ್ರಿಯೆ ಇಲ್ಲದೆ ಸಾಕುತ್ತಿದ್ದಾರೆ ಎಂದು ತಿಳಿಸಿದ್ದರು.

ಈ ಮಾಹಿತಿಯ ಆಧಾರದಲ್ಲಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ಸಂತೆಕಟ್ಟೆಯ ಸುಬ್ರಮಣ್ಯ ನಗರದ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ದಂಪತಿ, ಮಗು ಹಾಗೂ ಪೂರ್ಣಿಮಾ ಅವರ ಸಹೋದರಿ ಲಕ್ಷ್ಮಿ ಮನೆಯಲ್ಲಿ ಹಾಜರಿದ್ದು, ವಿಚಾರಣೆ ವೇಳೆ ಹಲವು ಅನುಮಾನಾಸ್ಪದ ಸಂಗತಿಗಳು ಬೆಳಕಿಗೆ ಬಂದಿವೆ.

ಪರಿಶೀಲನೆ ವೇಳೆ, ಮದುವೆಯಾಗಿ 11 ವರ್ಷಗಳಾದರೂ ಮಕ್ಕಳಾಗದ ಕಾರಣ ಪ್ರಕಾಶ್ ಮತ್ತು ಪೂರ್ಣಿಮಾ ಉಡುಪಿಯ ಕಾಮತ್ ನರ್ಸಿಂಗ್ ಹೋಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂಬ ಮಾಹಿತಿ ಲಭಿಸಿದೆ. ಇದೇ ವೇಳೆ ಲಕ್ಷ್ಮಿ ಅವರ ಸ್ನೇಹಿತರ ಮೂಲಕ ಆಸ್ಪತ್ರೆಯಲ್ಲಿ ಮಗು ಇರುವ ವಿಚಾರ ತಿಳಿದು, ವೈದ್ಯ ಡಾ. ಕೆ. ಸುರೇಂದ್ರ ಕಾಮತ್ ಅವರನ್ನು ಸಂಪರ್ಕಿಸಿ ಮಗುವನ್ನು ನೀಡುವಂತೆ ಮನವಿ ಮಾಡಲಾಗಿದೆ ಎನ್ನಲಾಗಿದೆ.

ಆರೋಪದ ಪ್ರಕಾರ, ಡಾ. ಸುರೇಂದ್ರ ಕಾಮತ್ ಅವರು ಸುಮಾರು ಒಂದು ತಿಂಗಳ ಹಿಂದೆ ಹೆಣ್ಣು ಮಗುವನ್ನು ದಂಪತಿಗೆ ಹಸ್ತಾಂತರಿಸಿದ್ದು ಮಾತ್ರವಲ್ಲದೆ, ಮಗುವಿನ ಜನನ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ನೀಡಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ. ಅಚ್ಚರಿಯ ಸಂಗತಿಯೆಂದರೆ, ಮಗುವಿನ ಜೈವಿಕ ಪೋಷಕರು ಯಾರು ಎಂಬ ಮಾಹಿತಿ ದಂಪತಿಗೂ ತಿಳಿದಿಲ್ಲ ಎಂದು ಅಧಿಕಾರಿಗಳ ವಿಚಾರಣೆಯಲ್ಲಿ ಬಹಿರಂಗವಾಗಿದೆ.

ಪ್ರಕರಣದ ತನಿಖೆಯಲ್ಲಿ, ಆರೋಪಿಗಳು ಅಕ್ರಮ ಲಾಭದ ಉದ್ದೇಶದಿಂದ ಒಳಸಂಚು ರೂಪಿಸಿ, ಮಗುವಿನ ಪೋಷಕರ ಕುರಿತು ನಕಲಿ ದಾಖಲೆಗಳನ್ನು ಸೃಷ್ಟಿಸಿ ಶಿಶು ಕಳ್ಳಸಾಗಣೆ ಹಾಗೂ ಅಕ್ರಮ ಮಾರಾಟದಲ್ಲಿ ತೊಡಗಿರುವ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 41/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯ ಕಲಂ 143(4), 61, 318(2), 3(5) ಹಾಗೂ ಜುವೆನೈಲ್ ಜಸ್ಟಿಸ್ ಕಾಯ್ದೆಯ ಕಲಂ 81ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಕಾಮತ್ ನರ್ಸಿಂಗ್ ಹೋಮ್‌ನ ವೈದ್ಯ ಡಾ. ಕೆ. ಸುರೇಂದ್ರ ಕಾಮತ್ (76) ಹಾಗೂ ನೇಜಾರು ಸಂತೆಕಟ್ಟೆ ನಿವಾಸಿ ಎಸ್. ಪ್ರಕಾಶ್ (50) ಅವರನ್ನು ಪೊಲೀಸರು ಬಂಧಿಸಿದ್ದು, ಉಳಿದ ಇಬ್ಬರು ಆರೋಪಿಗಳ ಪತ್ತೆ ಮತ್ತು ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

ಈ ಪ್ರಕರಣವು ಜಿಲ್ಲೆಯಲ್ಲೇ ಅಕ್ರಮ ದತ್ತು ಮತ್ತು ಶಿಶು ಹಸ್ತಾಂತರ ಜಾಲದ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹೊರಬರಲು ಪೊಲೀಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement