Connect with us

ಇತರ

ಸೌಹಾರ್ದಯುತವಾಗಿ ಕಾವೇರಿ ನೀರು ಹಂಚಿಕೆಯ ಸಮಸ್ಯೆ ಬಗೆಹರಿಸಲು ಆದ್ಯತೆ : ಡಿ.ಕೆ.ಶಿವಕುಮಾರ್

Published

on

ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸರ್ವಪಕ್ಷಗಳ ಸಭೆ ನಡೆಸಿ ಹಲವು ಮಹತ್ವದ ವಿಷಯಗಳ ಕುರಿತು ಮಾತನಾಡಿದರು ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ ವಿಚಾರದೊಂದಿಗೆ ನಾವೆಲ್ಲರೂ ಬೆಳೆದಿದ್ದೇವೆ. ರಾಜ್ಯದ ಹಿತಾಸಕ್ತಿ ವಿಚಾರ ಬಂದಾಗ ರಾಜಕೀಯವನ್ನು ಪಕ್ಕಕ್ಕಿಟ್ಟು, ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ರಾಜ್ಯದ ಪರ ನಿಂತಿರುವ ಹೆಮ್ಮೆಯ ಪರಂಪರೆ ನಮ್ಮ ರಾಜ್ಯಕ್ಕಿದೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು ಎಂಬುದು ನಮ್ಮ ಸರ್ಕಾರದ ಸ್ಪಷ್ಟ ನಿಲುವಾಗಿದೆ.

ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಹಾಗೂ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಸಭೆಗಳಿಗೂ ಮುನ್ನವೇ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ.ಆರ್. ಪಾಟೀಲ್, ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್‌ ಜೋಶಿ ಹಾಗೂ ಶ್ರೀ ವಿ. ಸೋಮಣ್ಣ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಮತ್ತು ಶ್ರೀ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿ ರಾಜ್ಯದ ನಿಲುವನ್ನು ಮನವರಿಕೆ ಮಾಡಿಕೊಟ್ಟಿದ್ದೆ. ಪಕ್ಷಭೇದ ಮರೆತು ರಾಜ್ಯದ ಪರವಾಗಿ ಕೇಂದ್ರದ ಮಟ್ಟದಲ್ಲಿ ಧ್ವನಿಯೆತ್ತಿದ ಎಲ್ಲ ನಾಯಕರಿಗೂ ಹಾಗೂ ಎಲ್ಲ ಪಕ್ಷಗಳ ಸಂಸದರಿಗೂ ಧನ್ಯವಾದಗಳು. ನೀರು ಹಂಚಿಕೆ ವಿಚಾರದಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳುವುದೇ ನಮ್ಮ ಆದ್ಯತೆಯಾಗಿದೆ. ರಾಜ್ಯದಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆ ಉಂಟಾಗದಂತೆ ಅಗತ್ಯ ಪ್ರಮಾಣದ ನೀರನ್ನು ಸಂಗ್ರಹಿಸಿಟ್ಟಿದ್ದೇವೆ. ಕಬಿನಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಹೆಚ್ಚುವರಿ ಒಳಹರಿವನ್ನು ಸಂಗ್ರಹಿಸಿಡಲು ಸಾಧ್ಯವಾಗದ ಕಾರಣ ಸಹಜ ಹರಿವು ಮುಂದುವರಿದಿದೆ. ಕಾವೇರಿ ನೀರಿನ ವಿಚಾರದಲ್ಲಿ ಎಲ್ಲರಿಗೂ ಸಂಪೂರ್ಣ ಅರಿವಿದೆ. ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇರುವುದನ್ನು ಪರಿಗಣಿಸದೆ ತಮಿಳುನಾಡು 9.9 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಮನವಿ ಮಾಡಿತ್ತು. ಈ ಬಗ್ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಕೂಡ ಸೂಚನೆ ನೀಡಿತ್ತು. ಆದರೆ ರಾಜ್ಯದ ಹಿತವನ್ನು ಗಮನದಲ್ಲಿಟ್ಟುಕೊಂಡು ನಾವು ಅದರ ವಿರುದ್ಧ ಈಗಾಗಲೇ ಮೇಲ್ಮನವಿ ಸಲ್ಲಿಸಿದ್ದೇವೆ. ವರುಣನ ಕೃಪೆಯಿಂದ ಕೊಡಗಿನ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಈಗಾಗಲೇ ನಮ್ಮಲ್ಲಿ 57 ಟಿಎಂಸಿ ಲಭ್ಯವಿದ್ದು, ನೀರಿನ ಒಳ ಹರಿವು ಹೆಚ್ಚಾಗಿದೆ. ನಿತ್ಯ 3500 ಕ್ಯೂಸೆಕ್ ಕಾವೇರಿ ಬಿಡಲು ಆದೇಶವಾಗಿದ್ದು, ಈಗಾಗಲೇ ನೀರಿನ ಒಳ ಹರಿವು ಹೆಚ್ಚಾಗಿರುವ ಕಾರಣ ಅಣೆಕಟ್ಟು ತುಂಬಿ ನೀರು ಹರಿದು ಹೋಗುತ್ತಿದೆ. ನೀರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ರಾಜ್ಯದ ಕುಡಿಯುವ ನೀರಿನ ಅಗತ್ಯವನ್ನು ಭದ್ರಪಡಿಸುವುದರ ಜೊತೆಗೆ ರೈತರ ಹಿತವನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರ ಕ್ರಮ ಕೈಗೊಂಡಿದೆ. ಈಗಾಗಲೇ ರೈತರು ಬಿತ್ತಿರುವ ಬೆಳೆಗಳ ರಕ್ಷಣೆಯ ಉದ್ದೇಶದಿಂದ ಕೆ.ಆರ್.ಎಸ್. ಹಾಗೂ ಕಬಿನಿ ನಾಲೆಗಳಿಗೆ ನೀರು ಹರಿಸಲಾಗಿದ್ದು, ಇದರಿಂದ ರೈತರಿಗೆ ಅನುಕೂಲವಾಗಿದೆ. ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ, ಶ್ರೀ ಹೆಚ್.ಡಿ.ಕುಮಾರಸ್ವಾಮಿ, ಶ್ರೀ ಸದಾನಂದಗೌಡ, ಶ್ರೀ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಶ್ರೀ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಉಪಮುಖ್ಯಮಂತ್ರಿಗಳಾದ ಡಾ. ಜಿ.ಪರಮೇಶ್ವರ, ಸಚಿವರಾದ ಶ್ರೀ ರಾಮಲಿಂಗಾ ರೆಡ್ಡಿ, ಶ್ರೀ ಕೃಷ್ಣ ಬೈರೇಗೌಡ, ಶ್ರೀ ಎಂ.ಬಿ.ಪಾಟೀಲ್, ಶ್ರೀ ಕೆ.ಜೆ.ಜಾರ್ಜ್, ನವದೆಹಲಿಯ ಕರ್ನಾಟಕದ ವಿಶೇಷ ಪ್ರತಿನಿಧಿ ಶ್ರೀ ಟಿ.ಬಿ.ಜಯಚಂದ್ರ, ಸಂಸತ್ ಸದಸ್ಯ ಶ್ರೀ ಗೋವಿಂದ ಕಾರಜೋಳ, ವಿರೋಧ ಪಕ್ಷದ ನಾಯಕ ಶ್ರೀ ಆರ್‌. ಅಶೋಕ್, ಶ್ರೀ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಶ್ರೀ ಹೆಚ್.ಕೆ.ಪಾಟೀಲ್, ಶ್ರೀ ಬಿ.ಕೆ.ಹರಿಪ್ರಸಾದ್, ನಿವೃತ್ತ ನ್ಯಾಯಾಧೀಶರಾದ ನಾಗಮೋಹನದಾಸ್, ಅಡ್ವೋಕೇಟ್‌ ಜನರಲ್ ಶಶಿಕಿರಣ್ ಶೆಟ್ಟಿ, ಮುಖ್ಯಮಂತ್ರಿಯವರ ವಿಶೇಷ ಸಲಹೆಗಾರ ಜಿ.ಸಿ.ಚಂದ್ರಶೇಖರ್, ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ಅಪರ ಮುಖ್ಯಕಾರ್ಯದರ್ಶಿ ತುಷಾರ್ ಗಿರಿನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

 
 

Continue Reading
Click to comment

Leave a Reply

Your email address will not be published. Required fields are marked *

Advertisement