Published
13 hours agoon
By
Akkare News
ಕದ್ರಿ ಮಲ್ಲಿಕಟ್ಟೆಯಲ್ಲಿರುವ ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ಸಂಸ್ಥೆಯ ಕಚೇರಿಯಲ್ಲಿ ಅವರು ಭಾನುವಾರ ಬೆಳಗ್ಗೆ 8 ಗಂಟೆಗೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಮಂಗಳವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾಗಲಿದೆ. ಈ ಉಪವಾಸದ ಅವಧಿಯಲ್ಲಿ ಅವರು ನೀರು ಸೇವನೆ ಮಾತ್ರ ಮಾಡಲಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿನ ಅಕ್ರಮಗಳು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಹೊಣೆಗಾರಿಕೆ ಮೂಡಿಸುವ ಉದ್ದೇಶದಿಂದ ಈ ಸತ್ಯಾಗ್ರಹ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
“ಶಿಕ್ಷಣ ಮತ್ತು ಆರೋಗ್ಯದಂತಹ ಮೂಲಭೂತ ಕ್ಷೇತ್ರಗಳೇ ಯಾವುದೇ ಸಮಾಜದ ಪ್ರಗತಿಯನ್ನು ನಿರ್ಧರಿಸುತ್ತವೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ದೇಶಾದ್ಯಂತ ಸಾವಿರಾರು ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿದ್ದು, ಇತ್ತೀಚಿನ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸುಮಾರು 22 ಲಕ್ಷ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ನಡೆದಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ” ಎಂದು ನಂದಗೋಪಾಲ್ ಹೇಳಿದರು.
“ಇಂತಹ ಗಂಭೀರ ಬೆಳವಣಿಗೆಗಳ ನಡುವೆಯೂ ಸರ್ಕಾರ ಮೌನ ವಹಿಸಿರುವುದು ಬೇಸರದ ಸಂಗತಿ. ಈ ಹಿನ್ನೆಲೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತರದಾಯಿತ್ವವನ್ನು ಒತ್ತಾಯಿಸಿ ಸಿಜೆಪಿ ನೇತೃತ್ವದಲ್ಲಿ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಹಾಗೂ ಅನಿರ್ದಿಷ್ಟಾವಧಿ ಉಪವಾಸ ನಡೆಸುತ್ತಿರುವ ಸೋನಂ ವಾಂಗ್ಚುಕ್ ಮತ್ತು ವಿದ್ಯಾರ್ಥಿ ಸಂಘಟನೆಗಳ ಹೋರಾಟಕ್ಕೆ ಬೆಂಬಲ ಸೂಚಿಸುವ ಉದ್ದೇಶದಿಂದ ತಾವು ಉಪವಾಸ ಕೈಗೊಂಡಿದ್ದೇವೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ರಾಜೀನಾಮೆ ನೀಡಬೇಕು ಎಂಬುದು ತಮ್ಮ ಪ್ರಮುಖ ಆಗ್ರಹ” ಎಂದರು.
“ಸಂಸತ್ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಲು ದೆಹಲಿಗೆ ತೆರಳುವ ಉದ್ದೇಶವಿದ್ದರೂ ಸಾಧ್ಯವಾಗದ ಕಾರಣ, ಮಂಗಳೂರಿನಲ್ಲೇ ಸಾಂಕೇತಿಕವಾಗಿ 48 ಗಂಟೆಗಳ ಉಪವಾಸ ಸತ್ಯಾಗ್ರಹ ಆರಂಭಿಸಿದ್ದೇನೆ. ಇದು ಯಾವುದೇ ಪ್ರಚಾರಕ್ಕಾಗಿ ಅಲ್ಲ, ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ಹಾಗೂ ಒಂದು ಸಾಮಾಜಿಕ ಉದ್ದೇಶಕ್ಕಾಗಿ ಕೈಗೊಂಡಿರುವ ಹೋರಾಟ” ಎಂದು ಅವರು ಸ್ಪಷ್ಟಪಡಿಸಿದರು.
ತಮ್ಮ ಉಪವಾಸದ ಮೂಲಕ ಯುವಜನತೆಗೆ ಸಂದೇಶ ನೀಡಲು ಬಯಸಿರುವ ನಂದಗೋಪಾಲ್, “ದೇಶದ ಇಂದಿನ ಪರಿಸ್ಥಿತಿಯ ಬಗ್ಗೆ ಯುವಕರು ಗಂಭೀರವಾಗಿ ಚಿಂತನೆ ನಡೆಸಬೇಕು. ನಾಯಕತ್ವದ ಜವಾಬ್ದಾರಿ ಹೊತ್ತು ಸರ್ಕಾರದಿಂದ ಉತ್ತರದಾಯಿತ್ವವನ್ನು ಕೇಳುವ ಸಮಯ ಬಂದಿದೆ. ಧರ್ಮೇಂದ್ರ ಪ್ರಧಾ ಅವರ ರಾಜೀನಾಮೆ ಉತ್ತರದಾಯಿತ್ವದತ್ತ ಮೊದಲ ಹೆಜ್ಜೆಯಾಗಲಿದೆ. ಅದರಿಂದ ಸಮಸ್ಯೆ ಸಂಪೂರ್ಣ ಪರಿಹಾರವಾಗದಿದ್ದರೂ, ವ್ಯವಸ್ಥೆಯಲ್ಲಿ ಹೊಣೆಗಾರಿಕೆ ಮೂಡಿಸುವ ಪ್ರಕ್ರಿಯೆಗೆ ಅದು ಚಾಲನೆ ನೀಡುತ್ತದೆ” ಎಂದು ಹೇಳಿದರು.
“ಶಿಕ್ಷಣ ಕ್ಷೇತ್ರದಲ್ಲಿ ಸಮಗ್ರ ಸುಧಾರಣೆ ತರಬೇಕಾದ ಅಗತ್ಯವಿದ್ದು, ಯುವಕರು ರಾಜಕೀಯ ಹಾಗೂ ಸಾಮಾಜಿಕವಾಗಿ ಹೆಚ್ಚು ಸಕ್ರಿಯವಾಗಿ ಪಾಲ್ಗೊಂಡು ಉತ್ತಮ ಆಡಳಿತಕ್ಕಾಗಿ ಒತ್ತಡ ಗುಂಪುಗಳನ್ನು ನಿರ್ಮಿಸಬೇಕು. ದೇಶದಲ್ಲಿ ಉತ್ತಮ ಬದಲಾವಣೆ ತರಬೇಕಾದರೆ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ” ಎಂದು ನಂದಗೋಪಾಲ್ ಅಭಿಪ್ರಾಯಪಟ್ಟರು.



