Published
2 hours agoon
By
Akkare News
ಮಂಗಳೂರು: ಕಾಂಗ್ರೆಸ್ ಪಕ್ಷವೆಂದರೆ ಕೇವಲ ರಾಜಕೀಯ ಶಕ್ತಿಯಲ್ಲ, ಅದು ಕೋಟ್ಯಂತರ ಸಾಮಾನ್ಯ ಜನರ ಆಶಯಗಳಿಗೆ ಧ್ವನಿಯಾಗಿರುವ ಮಹಾನ್ ಚಳವಳಿ. ಜನರ ಮುಂದಿನ ಆಶಾಭಾವನೆಯೇ ಕಾಂಗ್ರೆಸ್ ಆಗಿದ್ದು, ಪಕ್ಷಕ್ಕಾಗಿ ತಳಮಟ್ಟದಲ್ಲಿ ದುಡಿಯುವ ಕಟ್ಟಕಡೆಯ ಕಾರ್ಯಕರ್ತನಿಗೂ ಸೂಕ್ತ ಗೌರವ ಮತ್ತು ಶಕ್ತಿ ತುಂಬುವ ಮೂಲಕ ಬೂತ್ ಮಟ್ಟದಿಂದ ಪಕ್ಷವನ್ನು ಮರುಸಂಘಟಿಸಲಾಗುವುದು. ಹಿರಿಯ ನಾಯಕರ ಮಾರ್ಗದರ್ಶನ ಹಾಗೂ ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷದ ಗತವೈಭವವನ್ನು ಮರುಕಳಿಸುವಂತೆ ಶ್ರಮಿಸುತ್ತೇನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಘೋಷಿಸಿದರು. 
ನವೆಂಬರ್ನಲ್ಲಿ ಬೃಹತ್ ಸಮಾವೇಶ: ತಮ್ಮ ಮುಂದಿನ ಕಾರ್ಯಯೋಜನೆಗಳನ್ನು ಹಂಚಿಕೊಂಡ ಪದ್ಮರಾಜ್, ನನ್ನ ಮೇಲೆ ನಂಬಿಕೆಯಿಟ್ಟು ಪಕ್ಷದ ದೊಡ್ಡ ಜವಾಬ್ದಾರಿ ನೀಡಲಾಗಿದೆ. ಕಾರ್ಯಕರ್ತರ ನಿರೀಕ್ಷೆ ಹುಸಿಯಾಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ. ಮುಂದಿನ 8 ದಿನಗಳಲ್ಲಿ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದ ಬೂತ್ಗಳಿಗೆ ಖುದ್ದಾಗಿ ಭೇಟಿ ನೀಡಿ, ಬೂತ್ ಅಧ್ಯಕ್ಷರು ಹಾಗೂ ಸ್ಥಳೀಯ ಕಾರ್ಯಕರ್ತರನ್ನು ನೇರವಾಗಿ ಭೇಟಿಯಾಗಿ ಅವರ ಶ್ರಮವನ್ನು ಗುರುತಿಸಿ ಬೆನ್ನಿಗೆ ನಿಲ್ಲಲಿದ್ದೇನೆ. ಬೂತ್ ಮಟ್ಟದಿಂದ ಜಿಲ್ಲಾ ಮಟ್ಟದವರೆಗಿನ ಎಲ್ಲ ಕಾರ್ಯಕರ್ತರನ್ನು ಒಗ್ಗೂಡಿಸಿ ಸೂಕ್ತ ವೇದಿಕೆ ಕಲ್ಪಿಸಲು ನವೆಂಬರ್ ಮೊದಲ ವಾರದಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗುವುದು, ಎಂದು ತಿಳಿಸಿದರು.

* ಪಕ್ಷದ ಹುದ್ದೆಗಳು ’ವಿಸಿಟಿಂಗ್ ಕಾರ್ಡ್’ಗೆ ಸೀಮಿತವಾಗದಿರಲಿ: ಮಂಜುನಾಥ ಭಂಡಾರಿ ನೂತನ ಅಧ್ಯಕ್ಷರಿಗೆ ಪಕ್ಷದ ಧ್ವಜ ಹಸ್ತಾಂತರಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಸಂಘಟನ್ ಸೃಜನ್ ಅಭಿಯಾನದಡಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಚುನಾವಣೆ ಮೂಲಕ ಪದ್ಮರಾಜ್ ಅವರ ಆಯ್ಕೆ ನಡೆದಿದೆ. ಪಕ್ಷದಲ್ಲಿ ನೀಡಲಾಗುವ ಹುದ್ದೆಗಳು ಕೇವಲ ‘ವಿಸಿಟಿಂಗ್ ಕಾರ್ಡ್’ಗೆ ಸೀಮಿತವಾಗಬಾರದು; ಸಕ್ರಿಯವಾಗಿ ದುಡಿಯುವವರಿಗೆ ಮಾತ್ರ ಜವಾಬ್ದಾರಿ ಹಂಚಿಕೆ ಮಾಡಲಾಗುವುದು. ಕೆಪಿಸಿಸಿಯಲ್ಲಿ ಕಾರ್ಯದರ್ಶಿಗಳು ಹಾಗೂ ಸಂಯೋಜಕರ ನೇಮಕಕ್ಕೆ ಮುಕ್ತ ಅರ್ಜಿ ಆಹ್ವಾನಿಸಲಾಗಿದ್ದು, ಡಾ.ಜಿ. ಪರಮೇಶ್ವರ್ ನೇತೃತ್ವದ ಸಮಿತಿಯು ಸಂದರ್ಶನ ನಡೆಸಿ ಕ್ರಿಯಾಶೀಲರಿಗೆ ಮಾತ್ರ ಹೊಣೆಗಾರಿಕೆ ವಹಿಸಲಿದೆ. ಜಿಲ್ಲೆಯಲ್ಲಿ ಗ್ರಾ.ಪಂ., ತಾ.ಪಂ., ಜಿ.ಪಂ. ಹಾಗೂ ಪಾಲಿಕೆ ಚುನಾವಣೆಗಳು ಬಾಕಿ ಇದ್ದು, ಸುಮಾರು 4,000 ಜನಪ್ರತಿನಿಧಿ ಸ್ಥಾನಗಳು ಖಾಲಿಯಿವೆ. ವಷಾರ್ಂತ್ಯಕ್ಕೆ ಚುನಾವಣೆ ನಡೆಯುವ ಸಾಧ್ಯತೆಯಿರುವುದರಿಂದ ಮುಂದಿನ ಆರು ತಿಂಗಳು ಸಂಘಟನೆಗೆ ಅತ್ಯಂತ ನಿರ್ಣಾಯಕ. ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಎಲ್ಲರೂ ಕಂಕಣಬದ್ಧರಾಗಬೇಕು, ಎಂದರು.
ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಸೇರಿದಂತೆ ಹಲವು ಗಣ್ಯರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಈ ಮಹತ್ವದ ಕ್ಷಣಕ್ಕೆ ಸಾಕ್ಷಿಯಾದರು. ಕಾರ್ಯಕ್ರಮದಲ್ಲಿ ಫಾ.ಗೋಮ್ಸ್ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ರಾಜ್ಯಸಭಾ ಮಾಜಿ ಸದಸ್ಯ ಬಿ. ಇಬ್ರಾಹಿಂ, ಮಾಜಿ ಶಾಸಕರಾದ ಜೆ.ಆರ್. ಲೋಬೊ, ಶಕುಂತಳಾ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಪ್ರಮುಖ ಮುಖಂಡರಾದ ಸಂತೋಷ್ ಕುಮಾರ್ ಶೆಟ್ಟಿ, ಟಿ.ಎಂ. ಶಾಹೀದ್ ತೆಕ್ಕಿಲ್, ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಅಪ್ಪಿ, ಶಶಿಧರ ಹೆಗ್ಡೆ, ಅಶ್ರಫ್ ಕೆ., ಸುರೇಶ್ ಬಲ್ಲಾಳ್, ಕೃಷ್ಣಪ್ಪ, ಎಂ.ಎಸ್. ಮೊಹಮ್ಮದ್, ಸದಾಶಿವ ಉಳ್ಳಾಲ್, ಉಷಾ ಅಂಚನ್, ಶಾಹುಲ್ ಹಮೀದ್, ಈಶ್ವರ್ ಉಳ್ಳಾಲ್, ಮಹಮ್ಮದ್ ಆಲಿ, ಜೋಕಿಂ, ನವಾಝ್, ಎ.ಸಿ. ಭಂಡಾರಿ, ಲಾವಣ್ಯ ಬಲ್ಲಾಳ್, ಯು.ಕೆ. ಮೋನು ಮೊದಲಾದ ನಾಯಕರು ಉಪಸ್ಥಿತರಿದ್ದರು. ನೂತನ ಅಧ್ಯಕ್ಷ ಪದ್ಮರಾಜ್ ಅವರ ತಂದೆ ಎಚ್.ಎಂ. ರಾಮಯ್ಯ ಹಾಗೂ ಸಹೋದರ ಡಾ. ಪುರುಷೋತ್ತಮ್ ಉಪಸ್ಥಿತರಿದ್ದು ಶುಭ ಕೋರಿದರು.

