Published
9 hours agoon
By
Akkare News

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ದಸರಾ ರಜೆಯನ್ನು ಮತ್ತೊಂದು ದಿನ ಅಂದರೆ ಅಕ್ಟೋಬರ್ 22ರ ವರೆಗೆ ವಿಸ್ತರಿಸಲಾಗಿದೆ. ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಅಧಿಕೃತ ಆದೇಶ ಹೊರಡಿಸಿದ್ದಾರೆ. 
ಅಕ್ಟೋಬರ್ 21ರಂದು ಮಂಗಳೂರಿನ ದಸರಾ ಹಬ್ಬದ ಪೂಜೆ ಮತ್ತು ಮೆರವಣಿಗೆಯ ಅಂತಿಮ ದಿನವಾಗಿದ್ದು, ರಾತ್ರಿ ವೇಳೆ ವಿಜೃಂಭಣೆಯ ಮೆರವಣಿಗೆ ನಡೆಯಲಿದೆ. ಈ ಶೋಭಾಯಾತ್ರೆಗೆ ಅಪಾರ ಸಂಖ್ಯೆಯಲ್ಲಿ ಮಕ್ಕಳು ಹಾಗೂ ಪೋಷಕರು ಭಾಗವಹಿಸಲಿದ್ದಾರೆ. ಅಲ್ಲದೆ, ದೂರದ ಊರುಗಳಿಗೆ ತೆರಳಿರುವ ಕುಟುಂಬಗಳು ಹಿಂತಿರುಗಲು ತಡವಾಗುವುದರಿಂದ, ಮರುದಿನವೇ (ಅ.22) ಶಾಲೆಗೆ ಹಾಜರಾಗುವುದು ಕಷ್ಟವಾಗುತ್ತದೆ ಎಂಬ ಮನವಿಯನ್ನು ಸಾರ್ವಜನಿಕರು, ಪೋಷಕರು ಹಾಗೂ ಜನಪ್ರತಿನಿಧಿಗಳು ಇಲಾಖೆಗೆ ಸಲ್ಲಿಸಿದ್ದರು. ಈ ಕುರಿತು ಸಾರ್ವಜನಿಕರ ವಿನಂತಿಯನ್ನು ಪರಿಶೀಲಿಸಿದ ಇಲಾಖೆಯು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಅಕ್ಟೋಬರ್ 22ರಂದು ರಜೆ ಘೋಷಿಸುವ ತೀರ್ಮಾನ ತೆಗೆದುಕೊಂಡಿದೆ.
ಈಗಾಗಲೇ ದಿನಾಂಕ 03/10/2026 ರಿಂದ 21/10/2026 ರವರೆಗೆ ದಸರಾ ರಜೆ ನೀಡಲಾಗಿತ್ತು. ಇದೀಗ ವಿಸ್ತರಿಸಲಾದ ಒಂದು ದಿನದ ರಜೆಯಿಂದ ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಸರಿದೂಗಿಸಲು, ಮುಖ್ಯ ಶಿಕ್ಷಕರ ವಿವೇಚನಾ ಅಧಿಕಾರದಲ್ಲಿರುವ 4 ಸ್ಥಳೀಯ ರಜೆಗಳಲ್ಲಿ 1 ರಜೆಯನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ. ಈ ಆದೇಶವನ್ನು ತಾಲೂಕಿನ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ತಕ್ಷಣವೇ ತಲುಪಿಸುವಂತೆ ಸೂಚಿಸಲಾಗಿದೆ.






