Published
1 year agoon
By
Akkare Newsಬಡಗನ್ನೂರು: ಇಲ್ಲಿನ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್ ರೈ ಕುದ್ಕಾಡಿ(45ವ.)ರವರು ದಿಢೀರ್ ಅಸ್ವಸ್ಥಗೊಂಡು ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು.
ದ.8ರಂದು ಮೈಂದನಡ್ಕದಲ್ಲಿ ನಡೆದಿದ್ದ ವಾಲಿಬಾಲ್ ಪಂದ್ಯಾಟವೊಂದರಲ್ಲಿ ಭಾಗವಹಿಸಿ ರಾತ್ರಿ ಮನೆಗೆ ಹೋಗಿದ್ದ ಇವರು ದಿಢೀರ್ ರಕ್ತವಾಂತಿ ಮಾಡಲಾರಂಭಿಸಿದ್ದರು. ದ.9ರಂದು ಬೆಳಿಗ್ಗೆ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ 7 ಗಂಟೆ ಸುಮಾರಿಗೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಬಡಗನ್ನೂರು ಗ್ರಾಮ ಪಂಚಾಯತ್‌ನ ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ಒಂದು ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ಇವರು, ಕೋಟಿ ಚೆನ್ನಯ ಯುವಕ ಮಂಡಲ ಸೇರಿದಂತೆ ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು ಚಿರಪರಿಚಿತರಾಗಿದ್ದರು. ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರೂ ಆಗಿದ್ದರು.ಮೃತರು ತಾಯಿ ಕಸ್ತೂರಿ ರೈ, ನಾರಂಪಾಡಿಯಲ್ಲಿ ವಾಸವಿರುವ ಸಹೋದರ ತ್ಯಾಗರಾಜ್, ಮೈಸೂರಿನಲ್ಲಿ ಉದ್ಯೋಗದಲ್ಲಿರುವ ಸಹೋದರಿ ಸೌಮ್ಯ ಮತ್ತು ಬಾವನನ್ನು ಅಗಲಿದ್ದಾರೆ. ಕೆಲ ತಿಂಗಳ ಹಿಂದೆ ಗುರುಪ್ರಸಾದ್ ರೈ ಕುದ್ಕಾಡಿ ಅವರ ಮನೆಗೆ ದರೋಡೆಕೋರರು ನುಗ್ಗಿ ತಾಯಿ,ಮಗನನ್ನು ಕಟ್ಟಿ ಹಾಕಿ ನಗದು, ಚಿನ್ನಾಭರಣ ದರೋಡೆ ಮಾಡಿದ್ದರು.
ದ.10ರಂದು ಅಂತ್ಯಕ್ರಿಯೆ: ಮೃತರ ಅಂತ್ಯಕ್ರಿಯೆ ದ.10ರಂದು ಬೆಳಿಗ್ಗೆ 10 ಗಂಟೆಗೆ ಕುದ್ಕಾಡಿ ಮನೆಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.