Published
2 months agoon
By
Akkare News
ಪುತ್ತೂರು: ಹಾರಾಡಿ ಸರಕಾರಿ ಹಿ ಪ್ರಾ ಶಾಲಾ ವಿದ್ಯಾರ್ಥಿಯೊಬ್ಬನ ತಂದೆ ಶಾಲಾ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಪೋಷಕರಿಗೆ ಕಿರುಕುಳ,ಜೀವ ಬೆದರಿಕೆಯೊಡ್ಡಿ ಧಮ್ಕಿ ಹಾಕುತ್ತಿರುವ ಬಗ್ಗೆ ಶಿಕ್ಷಕರು ಹಾಗೂ ಪೋಷಕರು ಶಾಸಕ ಅಶೋಕ್ ರೈ ಬಳಿ ನ್ಯಾಯ ನೀಡುವಂತೆ ಮನವಿ ಮಾಡಿದ್ದಾರೆ.
ನೀಲ್ ನಿಖಿಲ್ ಎಂಬ ವಿದ್ಯಾರ್ಥಿಯಾದ ನಾನು ಸ.ಮಾ.ಉ.ಹಿ.ಪ್ರ. ಶಾಲೆ ಹಾರಾಡಿ ಶಾಲೆಯ 7ನೇ ಬಿ ತರಗತಿಯಲ್ಲಿ ಕಲಿಯುತ್ತಿದ್ದೇನೆ. ನನ್ನ ತರಗತಿಯ ವಿದ್ಯಾರ್ಥಿಯಾದ ಯಶಸ್ ಎಂಬಾತ ಕಾರಣವಿಲ್ಲದೆ ನನ್ನ ಜೊತೆ ಜಗಳ ತೆಗೆಯುತ್ತಿದ್ದಾನೆ. ನಾನು ಅವನ ಜೊತೆ ಯಾವುದೇ ರೀತಿಯ ಜಗಳ ಮಾಡಿರುವುದಿಲ್ಲ. ಹೀಗಿದ್ದರೂ ಆತನ ತಂದೆಯಾದ ಅಣ್ಣು ಎಂಬವರು ತರಗತಿ ಬಿಡುವ ಸಮಯದಲ್ಲಿ ಶಾಲಾ ಸಮೀಪ ಕಾದು ಕುಳಿತು ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ “ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ನಿನ್ನನ್ನು ಕೊಲೆ ಮಾಡುತ್ತೇನೆ” ಎಂದು ಬೆದರಿಕೆ ಹಾಕಿರುತ್ತಾನೆ. ಇದರಿಂದ ನಾನು ಮಾನಸಿಕವಾಗಿ ಕುಗ್ಗಿದ್ದು ಶಾಲೆಯ ಕಡೆಗೆ ಹೋಗಲು ಮನಸ್ಸಿರುವುದಿಲ್ಲ. ನನ್ನ ಪೋಷಕರು ಇವನ ಚಿತ್ರಹಿಂಸೆ ತಾಳಲಾರದೆ ಮನೆಯನ್ನು ಕೂಡಾ ಬದಲಾಯಿಸಿರುತ್ತಾರೆ.
ಆಗಸ್ಟ್ 15/2025ರಂದು ಸ್ವಾತಂತ್ರೋತ್ಸವ ಕಾರ್ಯಕ್ರಮದಂದು ನನ್ನ ತಾಯಿಯ ಬಳಿ ನಾನು ಯಾರಿಗೂ ಹೆದರುವುದಿಲ್ಲ, ನಿಮ್ಮ ಮಗನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವರಿಗೂ ಕೂಡಾ ಶಾಲೆಯಲ್ಲಿಯೇ ಬೆದರಿಕೆ ಹಾಕಿರುತ್ತಾನೆ. ನನ್ನ ತಂದೆ ತಾಯಿ ಕೂಲಿ ಮಾಡಿ ಮಗನ ವಿದ್ಯೆಗೋಸ್ಕರ ಸರಕಾರಿ ಶಾಲೆಯನ್ನೇ ಆಶ್ರಯಿಸಬೇಕಾಗಿರುವುದು ಅನಿವಾರ್ಯವಾಗಿದೆ. ಆದ್ದರಿಂದ ನನ್ನ ಪೋಷಕರು ಹಾಗೂ ನನಗೂ ಶಾಲೆಗೆ ಬರಲು ತುಂಬಾ ಭಯವಾಗುತ್ತಿದೆ. ಬೇರೆ ವಿದ್ಯಾರ್ಥಿಗಳೊಡನೆ ಸುಮ್ಮನೆ ಜಗಳ ತೆಗೆದು ನನ್ನನ್ನೇ ಟಾರ್ಗೆಟ್ ಮಾಡಿ ಅವರಲ್ಲಿಯೂ “ಅವನನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಹೇಳಿರುತ್ತಾರೆ.
ಹಾಗೆಯೇ ಶಾಲಾ ಇತರ ಮಕ್ಕಳಲ್ಲಿಯೂ ಟೀಚರ್ ಗಳ ಹೆಸರು, ವಿಳಾಸ, ಮೊಬೈಲ್ ನಂಬರುಗಳನ್ನು ಕೇಳುವುದು. ಎಲ್ಲರನ್ನು ದುರುಗುಟ್ಟಿಕೊಂಡು ನೋಡುವುದು, ಅಪ್ಪಣೆಯಿಲ್ಲದೆ ನೇರವಾಗಿ ತರಗತಿಗೆ ಬಂದು ಮಕ್ಕಳಲ್ಲಿ ಪ್ರಶ್ನಿಸುವುದು ಹೀಗೆಲ್ಲಾ ಮಾಡುವಾಗ ನನಗೆ ಹೆದರಿಕೆಯಾಗುತ್ತದೆ. ನಾನು ಒಳ್ಳೆಯ ರೀತಿಯಲ್ಲಿ ಕಲಿತು ನನ್ನ ಪೋಷಕರ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದ್ದು ಇದೇ ರೀತಿ ಮುಂದುವರಿದರೆ ನನ್ನ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಬೇಕಾಗಬಹುದು ಎಂಬ ಆತಂಕ ಎದುರಾಗಿದೆ. ಇದರಿಂದಾಗಿ ನನ್ನ ಭವಿಷ್ಯವೇ ಹಾಳಾಗಬಹುದು. ನನಗೆ ಮತ್ತು ನನ್ನ ಮನೆಯವರ ಜೀವಕ್ಕೆ ತೊಂದರೆ ಏನಾದರೂ ಆದರೆ ಅದಕ್ಕೆ ನೇರ ಹೊಣೆ ಅಣ್ಣು ಅವರೇ ಆಗಿರುತ್ತಾರೆ. ಆದ್ದರಿಂದ ಅವರನ್ನು ಸಮಗ್ರವಾಗಿ ವಿಚಾರಿಸಿ ನನಗೆ ನ್ಯಾಯವನ್ನು, ಸೂಕ್ತ ಭದ್ರತೆಯನ್ನು ಹಾಗೂ ನನ್ನ ಶಿಕ್ಷಣವನ್ನು ಮುಂದುವರಿಸಲು ನನಗೆ ಶಾಲೆಯಲ್ಲಿ ಕಲಿಕೆಗೆ ಉತ್ತಮ ವಾತಾವರಣವನ್ನು ಕಲ್ಪಿಸಿ ಕೊಡಬೇಕಾಗಿ ತಮ್ಮಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತೇನೆ ಎಂದು ಶಾಸಕರಿಗೆ ನೀಡಿದ ಮನವಿಯಲ್ಲಿ ತಿಳಿಸಲಾಗಿದೆ.
ಕಾನೂನು ಕ್ರಮಕ್ಕೆ ಶಾಸಕರ ಸೂಚನೆ:
ಘಟನೆಯ ಬಗ್ಗೆ ಶಾಸಕರು ಮಹಿಳಾ ಠಾಣೆಯ ಇನ್ಸ್ ಪೆಕ್ಟರ್ ಸುನಿಲ್ ರವರಿಗೆ ಕರೆ ಮಾಡಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಬೇಕು. ಬೆದರಿಕೆ ಹಾಕಿದವರು ಸರಕಾರಿ ಕಚೇರಿಯಲ್ಲಿ ನೌಕರನಾಗಿದ್ದಾನೆ ಎಂಬ ವಿಚಾರವನ್ನು ತಿಳಿಸಿದ್ದಾರೆ. ಆರೋಪಿ ವಿರುದ್ಧ ಏನು ಕಾನೂನು ಕ್ರಮಕೈಗೊಳ್ಳಲು ಸಾಧ್ಯವೋ ಅದನ್ನು ತಕ್ಷಣ ಕೈಗೊಳ್ಳಿ ಎಂದು ಶಾಸಕರು ಸೂಚನೆ ನೀಡಿದ್ದಾರೆ.
ಮಕ್ಕಳು ಶಾಲೆಗೆ ಬರಲು ಭಯ ಪಡುತ್ತಾರೆ:
ಎಸ್ ಡಿ ಎಂ ಸಿ ಅಧ್ಯಕ್ಷೆ.
ಘಟನೆಯ ಬಗ್ಗೆ ಅಧ್ಯಕ್ಷೆ ಸುಲೋಚಿನಿಯವರು ಮಾತನಾಡುತ್ತಾ, ಈ ವ್ಯಕ್ತಿ ಪದೇ ಪದೇ ಶಾಲೆಗೆ ಬಂದು ಮಕ್ಕಳಿಗೆ, ಶಿಕ್ಷಕರಿಗೆ ಹಾಗೂ ಪೋಷಕರಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಪುತ್ತೂರು ಲೋಕೋಪಯೋಗಿ ಇಲಾಖೆಯಲ್ಲಿ ನೌಕರನಾಗಿರುವ ಇವರು ನಮಗೆ ಹಿಂಸೆಯನ್ನು ನೀಡುತ್ತಿದ್ದಾರೆ. ದಾರಿಯಲ್ಲಿ ಓಡಾಡುವಾಗಲೂ ಅಡ್ಡ ನಿಂತು ಜೀವ ಬೆದರಿಕೆ ಹಾಕುತ್ತಿದ್ದಾರೆ. ಇವನ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದೇವೆ. ಆದರೆ ಇದುವರೆಗೂ ಯಾವುದೇ ಕಾನೂನು ಕ್ರಮ ಜರಗಿಸಿಲ್ಲ ಎಂದು ಶಾಸಕರಲ್ಲಿ ಬಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಪೊಲೀಸರು ಕ್ರಮಕೈಗೊಳ್ಳಬೇಕು: ಮುಖ್ಯ ಶಿಕ್ಷಕ ಕೆ ಕೆ ಮಾಸ್ಟರ್
ಪೊಲೀಸರು ದೂರನ್ನು ಗಂಭೀರವಾಗಿ ಪರಿಗಣಿಸಿ ಆತನಿಂದ ಶಾಲೆಗೆ ಆಗುತ್ತಿರುವ ತೊಂದರೆಯನ್ನು ಪರಿಹರಿಸಬೇಕಿದೆ. ವಿನಾ ಕಾರಣ ಮಕ್ಕಳಲ್ಲಿ ಭಯ ಹುಟ್ಟಿಸುವ ಕೆಲಸ ಆತ ಮಾಡುತ್ತಿದ್ದು ನ್ಯಾಯಕ್ಕಾಗಿ ಶಾಸಕ ಅಶೋಕ್ ರೈ ಬಳಿ ಬಂದಿದ್ದೇವೆ ಎಂದು ತಿಳಿಸಿದ್ದಾರೆ.