Published
6 months agoon
By
Akkare Newsಪುತ್ತೂರು : ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧ ವಾಟ್ಸಪ್ ನಲ್ಲಿ ತಪ್ಪು ಸಂದೇಶ ರವಾನಿಸಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೀತಾರಾಮ ರೈ ಕೆದಂಬಾಡಿಗುತ್ತು ಈ ಬಗ್ಗೆ ದೂರು ನೀಡಿದ್ದಾರೆ. ಅಝೀಜ್ ಹಾಗೂ ಇನ್ನೂ ಹಲವರು ಮಾಜಿ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧವಾಗಿ ಸಾಮಾಜಿಕ ಜಾಲತಾಣವಾದ ವಾಟ್ಸಪ್ ನಲ್ಲಿ ತಪ್ಪು ಸಂದೇಶ ರವಾನಿಸುತ್ತಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಮೇ.14ರ ಬೆಳಗ್ಗಿನಿಂದ ವಾಟ್ಸಪ್‌ನಲ್ಲಿ ನಿರಂತರವಾಗಿ ಮಾಜಿ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ವಿರುದ್ಧ ಮಾನಹಾನಿಯಾಗುವಂತೆ ಸ್ಟೇಟಸ್ ಹಾಕುತ್ತಿದ್ದು, ಅಜೀಜ್ ಎಂಬವರು “ಪ್ರವೀಣ್ ನೆಟ್ಟಾರ್ ಹತ್ಯೆಗೆ ಬಿಗ್ ಟ್ವಿಸ್ಟ್ ; ಹಣ ನೀಡಿ ಕೊಲೆ ಮಾಡಿಸಿದ ನಳಿನ್ ಕುಮಾರ್ ಕಟೀಲ್” ಎಂಬಿತ್ಯಾದಿ ಸಂದೇಶಗಳು ಹರಿದಾಡುತ್ತಿದೆ.
ಅಲ್ಲದೆ ಪ್ರಸಾದ್ ಕೆ. ಇವರಿಂದಲೂ ಸದ್ರಿ ವಿಚಾರವು ಪ್ರಚಾರವಾಗುತ್ತಿದೆ. ನಳಿನ್ ಕುಮಾರ್ ಕಟೀಲ್ ಅವರ ತೇಜೋವಧೆ ಮಾಡುವಂತೆ ಹಲವಾರು ಜನರು ಪ್ರಯತ್ನಿಸುತ್ತಿರುವುದು ಕಂಡು ಬರುತ್ತದೆ. ಇದರಿಂದಾಗಿ ಮುಂದಕ್ಕೆ ತೊಂದರೆಯಾಗುವ ಸಂಭವವಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ವಿನಾ ಕಾರಣವಾಗಿ ನಳಿನ್ ಕುಮಾರ್ ಕಟೀಲ್ ರವರ ವಿರುದ್ಧ ಮಾನಹಾನಿಕರವಾದ ಸಂದೇಶಗಳನ್ನು ರವಾನಿಸುತ್ತಿರುವುದರಿಂದ ಅವರ ಅಭಿಮಾನಿ ಬಳಗಕ್ಕೆ ತುಂಬಾ ನೋವುಂಟಾಗಿರುತ್ತದೆ. ಈ ಬಗ್ಗೆ ತಕ್ಷಣ ಪರಿಶೀಲನೆ ಮಾಡಿ ಮಾನಹಾನಿಕರ ಸಂದೇಶಗಳನ್ನು ರವಾನಿಸುವವರ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ.