ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಲಾಖಾ ಮಾಹಿತಿ

ನಕಲಿ ಕಾರ್ಡ್‌ ರದ್ದು? ಅರ್ಹ ಬಿಪಿಎಲ್‌ ಅರ್ಜಿದಾರರಿಗೆ ಅವಕಾಶ??

Published

on

ಲೋಕಸಭಾ ಚುನಾವಣೆ ಫ‌ಲಿತಾಂಶದ ಬೆನ್ನಲ್ಲೇ, ಅನರ್ಹ ಬಿಪಿಎಲ್‌ ರೇಶನ್‌ ಕಾರ್ಡ್‌ಗಳ ರದ್ದತಿ ಪ್ರಕ್ರಿಯೆಗೆ ಸರಕಾರ ಕೈಹಾಕಿದೆ. ಹೀಗೆ ರದ್ದುಗೊಳ್ಳುವ ಕಾರ್ಡ್‌ಗಳ ಬದಲಿಗೆ ಬಿಪಿಎಲ್‌ಗಾಗಿ ವರ್ಷದಿಂದ ಕಾಯುತ್ತಿರುವ ಅರ್ಜಿದಾರರಿಗೆ ಅವಕಾಶ ಕಲ್ಪಿಸಲು ಮುಂದಾಗಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ ಈಗಾಗಲೇ ಕೇಂದ್ರ ಸರಕಾರ ನಿಗದಿಪಡಿಸಿರುವ ಆದ್ಯತಾ ಪಡಿತರ ಕುಟುಂಬ (ಬಿಪಿಎಲ್‌)ಗಳು 1.03 ಕೋಟಿ ಹಾಗೂ ಅಂತ್ಯೋದಯ ಕುಟುಂಬಗಳು 10.83 ಲಕ್ಷ ಸೇರಿ 1.14 ಕೋಟಿ ಇರಬೇಕು. ಆದರೆ ರಾಜ್ಯದಲ್ಲಿ ಈಗಾಗಲೇ ಕೇಂದ್ರದ ಮಿತಿ ಮೀರಿ 10.33 ಲಕ್ಷ ಹೆಚ್ಚುವರಿ ಬಿಪಿಎಲ್‌ ಕುಟುಂಬಗಳಿದ್ದು, ಅವುಗಳಿಗೆ ರಾಜ್ಯ ಸರಕಾರವೇ ಪ್ರತಿ ತಿಂಗಳು ಸ್ವಂತ ಖರ್ಚಿನಿಂದ ಪಡಿತರ ಪೂರೈಸುತ್ತಿದೆ. ಈ ಮಧ್ಯೆ ಹೊಸದಾಗಿ ಲಕ್ಷಾಂತರ ಅರ್ಜಿಗಳು ಬಾಕಿ ಇವೆ. ಆದ್ದರಿಂದ ಅನರ್ಹರನ್ನು ಪತ್ತೆಹಚ್ಚುವ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಆರ್ಥಿಕವಾಗಿ ಸಬಲರಾಗಿದ್ದೂ ಬಿಪಿಎಲ್‌ ಕಾರ್ಡ್‌ಗಳನ್ನು ಹೊಂದಿದ್ದರೆ ಅಥವಾ ಈ ಹಿಂದೆ ಬಿಪಿಎಲ್‌ನಲ್ಲಿದ್ದು, ಈಗ ಬಡತನ ರೇಖೆಯಿಂದ ಮೇಲೆ ಬಂದಿರುವವರನ್ನು ಪತ್ತೆ ಮಾಡಲು ಮುಂದಾಗಿದೆ. ಅಲ್ಲದೆ, ಬಿಪಿಎಲ್‌ ಕುಟುಂಬಗಳಲ್ಲಿ ಮೃತಪಟ್ಟವರ ಹೆಸರುಗಳನ್ನೂ ಅಳಿಸಲಾಗಿಲ್ಲ.
ಮೃತಪಟ್ಟವರ ಹೆಸರುಗಳನ್ನು ತೆಗೆದುಹಾಕಿದರೆ ಆಗ ಯೂನಿಟ್‌ಗಳು ಕಡಿಮೆಯಾಗಿ ಹೊರೆ ತಗ್ಗಲಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾಸಿಕ 60 ಕೋಟಿ ರೂ. ಹೆಚ್ಚುವರಿ ವೆಚ್ಚ

ಇಲಾಖೆಯೇ ನೀಡಿದ ಅಂಕಿ-ಅಂಶಗಳ ಪ್ರಕಾರ ಕೇಂದ್ರ ನಿಗದಿಪಡಿಸಿದ ಮಿತಿಗಿಂತ 10.33 ಲಕ್ಷ ಹೆಚ್ಚುವರಿ ಬಿಪಿಎಲ್‌ ಕುಟುಂಬಗಳಿದ್ದು, ಇದರ ಫ‌ಲಾನುಭವಿಗಳ ಸಂಖ್ಯೆ 34.68 ಲಕ್ಷ. ಪ್ರತಿಯೊಬ್ಬರಿಗೂ ತಲಾ 5 ಕೆಜಿ ಅಕ್ಕಿ ವಿತರಿಸಲಾಗುತ್ತದೆ. ಕೆಜಿಗೆ ಖರೀದಿ ವೆಚ್ಚ 34 ರೂ. ಇದ್ದು, ಸರಕಾರ ಇವರಿಗಾಗಿ ಪ್ರತಿ ತಿಂಗಳು ಅಂದಾಜು 60 ಕೋಟಿ ರೂ. ಭರಿಸುತ್ತಿದೆ. ಈಗ ಮತ್ತೆ ವರ್ಷದಿಂದ ಅರ್ಜಿ ಹಾಕಿ 3.05 ಲಕ್ಷ ಕುಟುಂಬ ಬಿಪಿಎಲ್‌ ಕಾರ್ಡ್‌ಗಳಿಗಾಗಿ ಎದುರು ನೋಡುತ್ತಿವೆ. ಅಂದರೆ ಇನ್ನೂ 12ರಿಂದ 13 ಲಕ್ಷ ಜನರ ಹೆಚ್ಚುವರಿ ವೆಚ್ಚ ಭರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಲೆಕ್ಕಹಾಕಿದ್ದಾರೆ.

ಪ್ರತಿ ತಿಂಗಳು ಒಟ್ಟಾರೆ ಬಿಪಿಎಲ್‌ ಕಾರ್ಡ್‌ದಾರರ ಪೈಕಿ ಶೇ. 80-83ರಷ್ಟು ಕುಟುಂಬಗಳು ಮಾತ್ರ ಪಡಿತರ ಪಡೆಯುತ್ತಿವೆ. ಉಳಿದವು ಹಲವಾರು ತಿಂಗಳುಗಳಿಂದ ಅತ್ತ ತಿರುಗಿಯೂ ನೋಡಿಲ್ಲ. ಈ ಹಿನ್ನೆಲೆಯಲ್ಲಿ ಸತತ ಮೂರು ತಿಂಗಳಿಂದ ಪಡಿತರ ತೆಗೆದುಕೊಳ್ಳಲು ಬಾರದ ಕಾರ್ಡ್‌ಗಳನ್ನು ಅಮಾನತುಗೊಳಿಸುವುದು, ಸತತ 6 ತಿಂಗಳು ಬಾರದಿದ್ದರೆ ಸಂಪೂರ್ಣ ರದ್ದುಗೊಳಿಸುವ ಆಯ್ಕೆಯೂ ಇಲಾಖೆ ಮುಂದಿದೆ.
ಈ ಮಧ್ಯೆ ಚುನಾವಣೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಹಲವೆಡೆ ಸ್ಥಳೀಯ ಮಟ್ಟದಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದೆ. ಕಾರ್ಡ್‌ಗಳನ್ನು ಮಾಡಿಸಿಕೊಡುವುದಾಗಿ ಹೇಳಿಕೊಂಡು ಕಮಿಷನ್‌ ಪಡೆಯಲಾಗುತ್ತಿದೆ. ಒಂದೊಂದು ಕಾರ್ಡ್‌ಗೆ ಸಾವಿರಾರು ರೂಪಾಯಿ ಕಮಿಷನ್‌ ಪಡೆಯಲಾಗುತ್ತಿದೆ ಎನ್ನಲಾಗಿದೆ.

ಕತ್ತರಿ ಹಾಕಲು ಚುನಾವಣೆ ಅಡ್ಡಿ?

ಈಗಾಗಲೇ ಬಿಪಿಎಲ್ ಕಾರ್ಡ್‌ ಹೊಂದಿರುವವರನ್ನು ವಿವಿಧ ಮಾನದಂಡಗಳಡಿ ಅನರ್ಹರ ಪಟ್ಟಿಗೆ ಸೇರಿಸುವುದು ಅಥವಾ ರದ್ದುಗೊಳಿಸುವುದು ಸುಲಭದ ಕೆಲಸವೂ ಅಲ್ಲ. ಯಾಕೆಂದರೆ ಮುಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಇದೆ. ಈಗ ಕತ್ತರಿ ಹಾಕಿದರೆ, ಅದು ಚುನಾವಣೆಯಲ್ಲಿ ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರವೂ ಇದೆ ಎಂದು ಮೂಲಗಳು ತಿಳಿಸಿವೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version