ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸಿನಿಮಾ

‘ಸಾಕ್ಷಿ’ಗಾಗಿ 3 ಗಂಟೆ ಕಾಲ ಚಿಕ್ಕಣ್ಣ ವಿಚಾರಣೆ, ದರ್ಶನ್‌ ಜತೆಗಿನ ಪಾರ್ಟಿಯ ರಹಸ್ಯ ಕೆದಕಿದ ತನಿಖಾ ತಂಡ

Published

on

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್‌ ಜತೆ ಪಾರ್ಟಿ ಮಾಡಿದ್ದ ನಟ ಚಿಕ್ಕಣ್ಣ ಅವರಿಗೂ ಸಂಕಷ್ಟ ಎದುರಾಗಿದೆ. ದರ್ಶನ್‌ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಚಿಕ್ಕಣ್ಣ ಜೂನ್ 8ರಂದು ಸ್ಟೋನಿ ಬ್ರೂಕ್‌ನಲ್ಲಿ ಪಾರ್ಟಿ ಮಾಡಿದ್ದರು. ಅವರೊಂದಿಗೆ ಊಟಕ್ಕೂ ಜತೆಯಾಗಿದ್ದರು. ಹೀಗಾಗಿ ಕೊಲೆ ಕೇಸ್‌ನ ‘ಸಾಕ್ಷಿದಾರ’ನಾಗಿ ಪೊಲೀಸರು ಅವರನ್ನು ಪರಿಗಣಿಸಿದ್ದು, ಸೋಮವಾರ 3 ಗಂಟೆ ಕಾಲ ವಿಚಾರಣೆ ನಡೆಸಿದ್ದಾರೆ.

ಹೈಲೈಟ್ಸ್‌:

  • ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಚಿಕ್ಕಣ್ಣ ಸಾಕ್ಷಿದಾರ, ಮುಖಕ್ಕೆ ಮಾಸ್ಕ್‌ ಧರಿಸಿ ವಿಚಾರಣೆಗೆ ಬಂದ ಚಿಕ್ಕಣ್ಣ
  • ದರ್ಶನ್‌ ಜತೆ ಪಾರ್ಟಿ ಮಾಡಿದ್ದ ಚಿಕ್ಕಣ್ಣರನ್ನೂ ಮೂರು ಗಂಟೆ ಕಾಲ ವಿಚಾರಣೆ ಮಾಡಿದ ಪೊಲೀಸರು
  • ಸ್ಟೋನಿ ಬ್ರೂಕ್‌ನಲ್ಲಿ ಪಾರ್ಟಿ, ಊಟಕ್ಕೆ ಸಂಬಂಧಿಸಿದಂತೆ ರಹಸ್ಯ ಕೆದಕಿದ ತನಿಖಾ ತಂಡ
  • ಇನ್ನೊಂದೆಡೆ ಪೊಲೀಸರ ಎದುರು ದರ್ಶನ್‌ ಗೋಳಾಟ, ಏನೋ ನಡೆದೋಯ್ತು ಬಿಟ್ಟುಬಿಡುವಂತೆ ಮನವಿ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಆರೋಪಿ ನಟ ದರ್ಶನ್‌ ಜತೆ ಪಾರ್ಟಿ ಮಾಡಿದ್ದ ನಟ ಚಿಕ್ಕಣ್ಣ ಸಹ ಸಂಕಷ್ಟದಲ್ಲಿ ಸಿಲುಕಿದ್ದಾರೆ.ದರ್ಶನ್‌ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಚಿಕ್ಕಣ್ಣ ಜೂನ್ 8ರಂದು ಸ್ಟೋನಿ ಬ್ರೂಕ್‌ನಲ್ಲಿ ಪಾರ್ಟಿ, ಊಟಕ್ಕೆ ಜತೆಯಾಗಿದ್ದರು. ಹೀಗಾಗಿ ಕೊಲೆ ಕೇಸ್‌ನ ‘ಸಾಕ್ಷಿದಾರ’ನಾಗಿ ಪೊಲೀಸರು ಪರಿಗಣಿಸಿದ್ದಾರೆ.

ನೋಟಿಸ್‌ ಜಾರಿ ಹಿನ್ನೆಲೆಯಲ್ಲಿ ಸೋಮವಾರ ವಿಚಾರಣೆಗೆ ಹಾಜರಾಗಿದ್ದ ನಟ ಚಿಕ್ಕಣ್ಣ ಅವರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಸುಮಾರು ಮೂರು ಗಂಟೆ ವಿಚಾರಣೆ ನಡೆಸಿದ ಪೊಲೀಸರು, ರೆಸ್ಟೋರೆಂಟ್‌ನಲ್ಲಿ ನಡೆದ ಬೆಳವಣಿಗೆಗಳ ಮಾಹಿತಿ ಪಡೆದಿದ್ದಾರೆ. ಅಗತ್ಯ ಬಿದ್ದರೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆಯೂ ಸೂಚಿಸಿ ಬಿಟ್ಟು ಕಳುಹಿಸಿದ್ದಾರೆ.

ಸ್ಟೋನಿ ಬ್ರೂಕ್‌ನ ಪಾರ್ಟಿಯಲ್ಲಿ ಏನೇನು ನಡೆಯಿತು, ದರ್ಶನ್‌ ಜತೆ ಯಾರು ಯಾರು ಇದ್ದರು? ರೇಣುಕಾಸ್ವಾಮಿ ಅಪಹರಣ, ಪಟ್ಟಣಗೆರೆ ಶೆಡ್‌ಗೆ ಕರೆತಂದಿರುವ ಬಗ್ಗೆ ನಿಮಗೆ ಮಾಹಿತಿ ಇತ್ತೇ? ಈ ಕೊಲೆ ವಿಚಾರ ಆರೋಪಿಗಳು ನಿಮ್ಮ ಬಳಿ ಚರ್ಚಿಸಿದ್ದರೇ? ಕೊಲೆಯಾಗಿದೆ ಎಂಬುದು ನಿಮ್ಮ ಗಮನಕ್ಕೆ ಯಾವಾಗ ಬಂದಿತ್ತು ಎಂಬುದೂ ಸೇರಿ ಹಲವು ಪ್ರಶ್ನೆಗಳನ್ನು ಕೇಳಿ ಪೊಲೀಸರು ಚಿಕ್ಕಣ್ಣನಿಂದ ಉತ್ತರ ಪಡೆದಿದ್ದಾರೆ. ಚಿಕ್ಕಣ್ಣನನ್ನು ಪ್ರಕರಣದ ಸಾಕ್ಷಿದಾರನನ್ನಾಗಿ ಪರಿಗಣಿಸಿ ವಿಚಾರಣೆಗೆ ಕರೆಸಲಾಗಿತ್ತು ಎಂದು ತನಿಖಾ ಮೂಲಗಳು ಹೇಳಿವೆ.

ಚಿಕ್ಕಣ್ಣ ಹೇಳಿದ್ದೇನು?

ಆಪ್ತರಾಗಿರುವ ದರ್ಶನ್‌ ಜತೆ ಸ್ಟೋನಿ ಬ್ರೂಕ್‌ನಲ್ಲಿ ಸ್ನೇಹಿತರ ಜತೆ ಆಗಾಗ್ಗೆ ಊಟಕ್ಕೆ ಸೇರುತ್ತೇವೆ. ಜೂನ್ 8ರಂದು ಊಟಕ್ಕೆ ಸೇರಿದ್ದು ಸಾಯಂಕಾಲದ ಬಳಿಕ ದರ್ಶನ್‌ ಸ್ವಲ್ಪ ಕೆಲಸವಿದೆ ಎಂದು ಹೋಗಿದ್ದರು. ಬಳಿಕ ಏನು ನಡೆದಿದೆ ಎಂಬುದು ನನಗೆ ಗೊತ್ತಿಲ್ಲ. ಮಾಧ್ಯಮಗಳ ಮುಖಾಂತರವೇ ರೇಣುಕಾಸ್ವಾಮಿ ಕೊಲೆ, ದರ್ಶನ್‌ ಬಂಧನ ಗೊತ್ತಾಯಿತು. ನನಗೆ ಈ ಪ್ರಕರಣದಲ್ಲಿ ಯಾವುದೇ ಸಂಬಂಧವಿಲ್ಲ ಎಂದು ಚಿಕ್ಕಣ್ಣ ವಿಚಾರಣೆ ವೇಳೆ ಉತ್ತರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದರ್ಶನ್‌ ಜತೆ ಚಿಕ್ಕಣ್ಣ ಹೊರತುಪಡಿಸಿ ಮತ್ತೊಬ್ಬ ನಟನೂ ಪಾರ್ಟಿಯಲ್ಲಿ ಭಾಗಿಯಾಗಿದ್ದರ ಬಗ್ಗೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿದೆ. ಹೀಗಾಗಿ, ದರ್ಶನ್‌ ಜತೆ ಜೂನ್ 8ರಂದು ಸೇರಿದ್ದ ಎಲ್ಲರನ್ನೂ ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಸ್ಟೋನಿ ಬ್ರೂಕ್‌ನಲ್ಲಿ ಮಹಜರು

ಡಿ.ಗ್ಯಾಂಗ್‌ನ ಪಾರ್ಟಿಯ ಅಡ್ಡೆಯಾಗಿದ್ದ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ನಲ್ಲಿ ರೇಣುಕಾಸ್ವಾಮಿ ಹತ್ಯೆಗೂ ಮುನ್ನ ಮತ್ತು ನಂತರ ನಟ ದರ್ಶನ್‌ ಸಹ ಆರೋಪಿಗಳ ಜತೆ ಇದೇ ರೆಸ್ಟೋರೆಂಟ್‌ನಲ್ಲಿ ಕೃತ್ಯದ ಕುರಿತು ಸಂಚು, ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಹೀಗಾಗಿ ಆರೋಪಿಗಳಾದ ದರ್ಶನ್‌, ವಿನಯ್‌ ಹಾಗೂ ನಟ ಚಿಕ್ಕಣ್ಣ ಅವರ ಸಮ್ಮುಖದಲ್ಲಿ ಪೊಲೀಸರು ಮಹಜರು ಪ್ರಕ್ರಿಯೆ ನಡೆಸಿ, ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಹೊಸ ಬಟ್ಟೆ ಖರೀದಿ, ದೇವರಿಗೆ ನಮಸ್ಕಾರ

ರೇಣುಕಾಸ್ವಾಮಿ ಮೃತಪಟ್ಟಿರುವುದು ಖಚಿತವಾಗುತ್ತಿದ್ದಂತೆ ಆರೋಪಿಗಳಾದ ನಾಗರಾಜು ಹಾಗೂ ಲಕ್ಷ್ಮಣ್‌ ಆರ್‌ಆರ್‌ ನಗರದ ಟ್ರೆಂಡ್ಸ್‌ ಮಳಿಗೆಗೆ ತೆರಳಿ ಹೊಸ ಬಟ್ಟೆ ಖರೀದಿಸಿದ್ದರು. ಅಲ್ಲದೆ, ಲಕ್ಷ್ಮೇವೆಂಕಟೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಪಾಪನಿವೇದನೆ ಮಾಡಿಕೊಂಡಿದ್ದರು ಎಂಬ ವಿಚಾರವೂ ತನಿಖೆಯಿಂದ ಹೊರಬಿದ್ದಿದೆ. ಹೀಗಾಗಿ ಪೊಲೀಸರು ಇಬ್ಬರೂ ಆರೋಪಿಗಳನ್ನು ಕರೆದೊಯ್ದು ಬಟ್ಟೆ ಮಳಿಗೆ ಹಾಗೂ ದೇವಾಲಯದಲ್ಲಿ ಮಹಜರು ನಡೆಸಿದರು. ಜತೆಗೆ, ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದರು.

ಕಸ್ಟಡಿಯಲ್ಲಿ ದರ್ಶನ್‌ ಗೋಳಾಟ

ಪೊಲೀಸರ ವಿಚಾರಣೆ ವೇಳೆ ನಟ ದರ್ಶನ್‌ ಹೈಡ್ರಾಮಾ ಮುಂದುವರಿದಿದೆ. ಏಳು ದಿನಗಳ ಕಸ್ಟಡಿ ಬಳಿಕವೂ ಕೃತ್ಯದ ಬಗ್ಗೆ ದರ್ಶನ್‌ ಬಾಯ್ಬಿಡುತ್ತಿಲ್ಲ. ಪಶ್ಚಾತ್ತಾಪದಿಂದ ಕನಲಿ ಹೋಗಿರುವ ದರ್ಶನ್‌, ತನಿಖಾಧಿಕಾರಿಗಳು ಏನು ಕೇಳಿದರೂ ಸ್ಪಷ್ಟ ಉತ್ತರ ನೀಡದೆ ಗೋಳಾಡುತ್ತಿದ್ದಾರೆ. ‘ನನಗೇನೂ ಗೊತ್ತಿಲ್ಲ ಸಾರ್‌, ನಡೆದು ಹೋಗಿದೆ ನನ್ನ ಬಿಟ್ಟು ಬಿಡಿ’ ಎಂದು ಅಂಗಲಾಚುತ್ತಿದ್ದಾರೆ. ಕೃತ್ಯದ ಕುರಿತು ಸಹ ಆರೋಪಿಗಳ ಹೇಳಿಕೆ ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಮುಂದಿಟ್ಟು ಪ್ರಶ್ನಿಸಿದರೂ ಭಾವುಕರಾಗುವ ದರ್ಶನ್‌, ಮೊಂಡಾಟ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.

7 ಜನರಿಗೆ ದರ್ಶನ್‌ ಪರಿಚಯವೇ ಇಲ್ಲ

ರೇಣುಕಾಸ್ವಾಮಿ ಅಪಹರಿಸಿಕೊಂಡು ಬಂದು,ಹತ್ಯೆಯಲ್ಲಿ ಭಾಗಿಯಾದ ರವಿಶಂಕರ್‌, ಅನುಕುಮಾರ್‌, ಜಗದೀಶ್‌ ಅಲಿಯಾಸ್‌ ಜಗ್ಗು ಹಾಗೂ ಮೃತದೇಹ ವಿಲೇವಾರಿ ಮಾಡಿದ್ದ, ಶರಣಾಗತಿಯಾಗಿದ್ದ ಗಿರಿನಗರದ ನಿಖಿಲ್‌ ನಾಯಕ್‌, ಕಾರ್ತಿಕ್‌, ಕೇಶವಮೂರ್ತಿಗೆ ದರ್ಶನ್‌ ಪರಿಚಯ ಇರಲಿಲ್ಲ. ಈ ಹಿಂದೆ ಒಮ್ಮೆಯೂ ಭೇಟಿಯಾಗಿರಲಿಲ್ಲ. ಠಾಣೆಯಲ್ಲಿಯೇ ಮೊದಲ ಬಾರಿ ದರ್ಶನ್‌ರನ್ನು ಮುಖಾಮುಖಿಯಾಗಿದ್ದಾರೆ ಎನ್ನಲಾಗಿದೆ. ಕೇವಲ ನಟ ದರ್ಶನ್‌ ಹೆಸರು, ಅವರ ಜತೆ ಸಂಪರ್ಕ ಬೆಳೆಯಲಿದೆ ಎಂಬ ಕಾರಣಕ್ಕೆ ಅಪರಾಧದಲ್ಲಿ ಭಾಗಿಯಾಗಿ ಈಗ ಕಾನೂನು ಕುಣಿಗೆಗೆ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version