Published
6 months agoon
By
Akkare Newsಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಹಾಗೂ ವಿವಿಧ ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆಗೆ ಚುನಾವಣೆ ನಡೆದಿದ್ದು, ಮೇಯರ್ ಆಗಿ ಮಾಜಿ ಸಚಿವ ಬಿ.ನಾಗೇಂದ್ರ ಆಪ್ತ ಕಾಂಗ್ರೆಸ್‌ನ ಮುಲ್ಲಂಗಿ ನಂದೀಶ್ ಬಾಬು ಹಾಗೂ ಉಪ ಮೇಯರ್ ಆಗಿ ಡಿ. ಸುಕುಂ ಆಯ್ಕೆಯಾಗಿದ್ದಾರೆ.
ಪಾಲಿಕೆಯ 18ನೇ ವಾರ್ಡ್ ಸದಸ್ಯರಾಗಿರುವ ಮುಲ್ಲಂಗಿ ನಂದೀಶ್, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಮೋತ್ಕರ್ ವಿರುದ್ಧ ಗೆಲುವು ದಾಖಲಿಸಿ ಪಾಲಿಕೆಯ 23ನೇ ಮೇಯರ್ ಹುದ್ದೆಗೇರಿದ್ದಾರೆ.
ಉಪ ಮೇಯರ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಸದ ಹಿನ್ನೆಲೆ, ಕಾಂಗ್ರೆಸ್ ಅಭ್ಯರ್ಥಿ ಡಿ.ಸುಕುಂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೇಯರ್ ಸ್ಥಾನಕ್ಕೆ ತಮ್ಮ ಬೆಂಬಲಿಗರನ್ನು ಕಣಕ್ಕಿಳಿಸಲು ಶಾಸಕರಾದ ಬಿ.ನಾಗೇಂದ್ರ ಮತ್ತು ಭರತ್ ರೆಡ್ಡಿ ನಡುವೆ ಪೈಪೋಟಿ ಇತ್ತು. ಕಾಂಗ್ರೆಸ್ ಹೈಕಮಾಂಡ್ ಮಧ್ಯಸ್ಥಿಕೆಯಿಂದ ನಂದೀಶ್‌ಗೆ ಅವಕಾಶ ದೊರೆತಿದೆ.
ಬಳ್ಳಾರಿ ಮಹಾನಗರ ಪಾಲಿಕೆಯ 39 ಸದಸ್ಯರಲ್ಲಿ ಕಾಂಗ್ರೆಸ್ ಪಕ್ಷ 21 ಸ್ಥಾನಗಳನ್ನು ಹೊಂದಿದೆ. ಐವರು ಪಕ್ಷೇತರರು ಕಾಂಗ್ರೆಸ್ ಬೆಂಬಲಿಸಿರುವ ಹಿನ್ನೆಲೆ, 26 ಸದಸ್ಯರ ಬೆಂಬಲ ದೊರೆತಂತಾಗಿದೆ. ಈ ಹಿನ್ನೆಲೆ ಮೇಯರ್ ಚುನಾವಣೆಯಲ್ಲಿ ಸರಾಗವಾಗಿ ಗೆಲುವು ದಾಖಲಿಸಿದೆ. ಬಿಜೆಪಿ 13 ಸದಸ್ಯರ ಬಲ ಹೊಂದಿದೆ.
ಕಳೆದ ಎರಡು ಬಾರಿ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ಚುನಾವಣೆ ನಿಗದಿ ಮಾಡಿ ನೀತಿ ಸಂಹಿತೆ ಕಾರಣದಿಂದ ಮುಂದೂಡಲಾಗಿತ್ತು. ಅಂತಿಮವಾಗಿ ಇಂದು ಚುನಾವಣೆ ನಡೆದಿದೆ.