ಉಪ್ಪಿನಂಗಡಿ: ಉಪ್ಪಿನಂಗಡಿ ಬಳಿಯ ಕೂಟೇಲು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಂಟೈನರ್ ಲಾರಿಯೊಂದು ಹೆದ್ದಾರಿ ಬದಿಯ ಚರಂಡಿಗೆ ಬಿದ್ದಿದ್ದು, ಲಾರಿಯ ಕಂಟೈನರ್ ಹೆದ್ದಾರಿಯಲ್ಲಿ ಅಡ್ಡಲಾಗಿ ತಿರುಗಿ ನಿಂತ ಘಟನೆ ಮಂಗಳವಾರ ನಡೆದಿದೆ.
ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಂಟೈನರ್ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಸಾಗಿ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ.
ಈ ಸಂದರ್ಭ ಲಾರಿಯ ಹಿಂದಿನ ಕಂಟೈನರ್ ರಸ್ತೆಗೆ ಅಡ್ಡಲಾಗಿ ತಿರುಗಿ ನಿಂತಿದೆ. ಕೆಲ ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಲಾರಿ ಚಾಲಕ ಆಸಿಫ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಉಪ್ಪಿನಂಗಡಿ ಪೊಲೀಸರು ಹಾಗೂ ಪುತ್ತೂರು ಸಂಚಾರ ಪೊಲೀಸರು ಕ್ರೇನ್ ಮೂಲಕ ಲಾರಿಯನ್ನು ಮೇಲೆತ್ತಿಸಿದ್ದಾರೆ. ಈ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.