Published
3 months agoon
By
Akkare Newsಶ್ರೀಲಂಕಾ ನೌಕಾಪಡೆಯಿಂದ ಬಂಧನಕ್ಕೊಳಗಾಗಿದ್ದ ತಮಿಳುನಾಡಿನ ಮೀನುಗಾರರ ಗುಂಪೊಂದು ಬಿಡುಗಡೆಗೊಂಡು ಮನೆಗೆ ಮರಳಿದೆ. ಆದರೆ, ಅವರ ತಲೆಯನ್ನು ಬಲವಂತವಾಗಿ ಬೋಳಿಸಿರುವುದು ಕಂಡು ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ.
ಆಗಸ್ಟ್ 27 ರಂದು, ಎಂಟು ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯು ಮೀನುಗಾರಿಕೆ ಮಾಡುವಾಗ ಕಡಲ ಗಡಿ ದಾಟಿದ ಆರೋಪದ ಮೇಲೆ ಬಂಧಿಸಿತ್ತು. ಅವರ ದೋಣಿಯನ್ನೂ ಕೂಡ ವಶಪಡಿಸಿಕೊಳ್ಳಲಾಗಿದೆ.
ಸೆಪ್ಟೆಂಬರ್ 5 ರಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಶ್ರೀಲಂಕಾದ ಕರೆನ್ಸಿಯಲ್ಲಿ 50,000 ರೂ.ಗಳ ದಂಡವನ್ನು ಪಾವತಿಸಿದ ನಂತರ ಐದು ಮೀನುಗಾರರನ್ನು ಬಿಡುಗಡೆ ಮಾಡಲು ಆದೇಶಿಸಿತು. ಆದರೆ, ಇತರ ಮೂವರನ್ನು ಎರಡನೇ ಬಾರಿಗೆ ಬಂಧಿಸಿದ್ದರಿಂದ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಯಿತು.
ಐವರು ಮೀನುಗಾರರ ಕುಟುಂಬಗಳು ಸಾಲ ಮಾಡಿ ದಂಡ ಕಟ್ಟಿದ್ದರಿಂದ ಸೆ.7ರಂದು ಬಿಡುಗಡೆ ಹೊಂದಿದ್ದಾರೆ. ಮೀನುಗಾರರು ಮನೆಗೆ ಮರಳಿದಾಗ ತಲೆ ಬೋಳಿಸಿಕೊಂಡಿರುವುದನ್ನು ಕಂಡು ಕುಟುಂಬಸ್ಥರು ಕಂಗಾಲಾಗಿದ್ದಾರೆ. ಸೆಪ್ಟೆಂಬರ್ 6 ರೊಳಗೆ ದಂಡವನ್ನು ಪಾವತಿಸದ ಕಾರಣ ಅವರಿಗೆ ಕೈಕೋಳ ಹಾಕಿ, ಬಲವಂತವಾಗಿ ತಲೆ ಬೋಳಿಸಲಾಗಿದೆ ಮತ್ತು ಚಿತ್ರಹಿಂಸೆ ನೀಡಲಾಯಿತು ಎಂದು ಬಿಡುಗಡೆಯಾದ ಮೀನುಗಾರರು ನೋವು ತೋಡಿಕೊಂಡಿದ್ದಾರೆ.
‘ನಮ್ಮನ್ನು ಬಲವಂತವಾಗಿ ಕರೆದೊಯ್ದು ತಲೆ ಬೋಳಿಸಲಾಗಿದೆ, ನಾಲ್ಕು ತಿಂಗಳು ಜೈಲು ಶಿಕ್ಷೆಯಾಗಿದೆ ಎಂದು ಹೇಳಿ ಜೈಲು ಪ್ರದೇಶವನ್ನು ಸ್ವಚ್ಛಗೊಳಿಸಿಕೊಂಡಿದ್ದಾರೆ’ ಎಂದು ಮೀನುಗಾರರಲ್ಲಿ ಒಬ್ಬರಾದ ರಾಜಾ ಹೇಳಿದರು.
“ನಾವು ಭಾರತೀಯರು ಎಂದು ತಿಳಿದಾಗ ಅವರು ಕೋಪಗೊಂಡರು. ನಾವು ಅಪರಾಧಿಗಳಲ್ಲ; ನಾವು ಜೀವನೋಪಾಯಕ್ಕಾಗಿ ಮೀನುಗಾರಿಕೆ ಮಾಡುತ್ತಿದ್ದೆವು. ಅವರು ನಮ್ಮನ್ನು ಮೂರು ದಿನಗಳವರೆಗೆ ಜೈಲು ಮತ್ತು ಒಳಚರಂಡಿಯನ್ನು ಸ್ವಚ್ಛಗೊಳಿಸಲು ಒತ್ತಾಯಿಸಿದರು” ಎಂದು ಮತ್ತೊಬ್ಬ ಮೀನುಗಾರ ಕಿಂಗ್ಸನ್ ವಿವರಿಸಿದರು.