Published
3 weeks agoon
By
Akkare Newsಕಳೆದ ಮೂರು ತಿಂಗಳಿನಿಂದ (ಜೂನ್‌ನಿಂದ) ಸರ್ಕಾರ ಗೌರವಧನ ಬಿಡುಗಡೆ ಮಾಡದೇ ಇರುವುದರಿಂದ ರಾಜ್ಯದ ಅಂಗನವಾಡಿ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಕ್ಕಳಿಗೆ ಅಕ್ಷರ ಕಲಿಸುವ ಜೊತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಹಲವು ಯೋಜನೆಗಳ ಜಾರಿಗೆ ಹಗಲಿರುಳು ಶ್ರಮಿಸುತ್ತಿರುವ ನೌಕರರು ಹಬ್ಬದ ಸಂದರ್ಭದಲ್ಲಿ ಹಣ ಇಲ್ಲದೆ ತೊಂದರೆಗೆ ಒಳಗಾಗಿದ್ದಾರೆ. “ಕೂಡಲೇ ಬಾಕಿ ಬಿಡುಗಡೆ ಮಾಡುವ ಜೊತೆಗೆ, ಪ್ರತಿತಿಂಗಳು ನಿಯಮಿತವಾಗಿ ಗೌರವಧನ ಕೊಡಬೇಕು” ಎಂದು ‘ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ’ದ ರಾಜ್ಯ ಸಮಿತಿ ಆಗ್ರಹಿಸಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ರಾಜ್ಯ ಸಮಿತಿ, “ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್)ಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾವತಿಯಾಧಾರದಲ್ಲಿ ನಡೆಯುತ್ತಿದೆ. 2016 ರವರೆಗೂ ಗೌರವಧನ ನಿಯಮಿತವಾಗಿ ಬರುತ್ತಿರಲಿಲ್ಲ. ಆಗ ರಾಜ್ಯ ಸರ್ಕಾರ ವೇತನಕ್ಕೆ ಬೇಕಾದ ಹಣವನ್ನೊದಗಿಸಿ, ಕೇಂದ್ರದಿಂದ ಬ೦ದಾಗ ತಗೆದುಕೊಳ್ಳುವ ವಿಶೇಷ ತೀರ್ಮಾನವನ್ನು ಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೂ ಅದೇ ರೀತಿ ಪಕ್ರಿಯೆ ಇತ್ತು. 2024 ಜೂನ್‌ನಿಂದ ಪುನಃ ಅ೦ಗನವಾಡಿ ನೌಕರರ ಗೌರವಧನ ಪಾವತಿಯಲ್ಲಿ ವ್ಯತ್ಯಯ ಉಂಟಾಗಿ, ಹಲವು ತಾಲ್ಲೂಕುಗಳಲ್ಲಿ 2 ರಿಂದ 3 ತಿಂಗಳು ಗೌರವಧನ ಬಂದಿಲ್ಲ” ಎಂದು ಸಮಿತಿ ಹೇಳಿದೆ.
“ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರ ಮಾಹಿತಿಯಂತೆ, ಕಚೇರಿಗಳಲ್ಲಿರುವ ಹಣ ಖರ್ಚಾಗದೇ ಇರುವುದರಿಂದ 2024 ಏಪ್ರಿಲ್‌ನಿಂದ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಲ್ಲ. ಆದ್ದರಿಂದ, ಈ ಸಮಸ್ಯೆ ಉದ್ಭವಿಸಿದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ಕೇಂದ್ರ ಕಚೇರಿಯಿಂದ ಅನುದಾನಗಳು ಬಂ೦ದಿಲ್ಲ ಎಂದು ನಿರ್ದೇಶಕರ ಕಚೇರಿಯಲ್ಲಿ ಹೇಳುತ್ತಿದ್ದಾರೆ. ಕೆಲವಡೆ 2 ತಿಂಗಳು, ಕೆಲವಡೆ 3 ತಿಂಗಳು, ಕೆಲವಡೆ ಒಂದೇ ತಾಲ್ಲೂಕಿನಲ್ಲಿ 3-4 ತಿಂಗಳ ವೇತನ ಪಾವತಿಯಿಲ್ಲ. ಇನ್ನು ಕೆಲವಡೆ ಸಹಾಯಕಿಯರಿಗೆ ವೇತನವಾಗಿದೆ. ಆದರೆ, ಕಾರ್ಯಕರ್ತೆಯರಿಗೆ ಬಂದಿಲ್ಲ. ಈ ರೀತಿಯಲ್ಲಿ ಹಲವು ಗೊ೦ದಲದಗೂಡಾಗಿದೆ. ಆದ್ದರಿ೦ದ, ತಾವು ಮಧ್ಯಪ್ರವೇಶಿಸಿ ಪ್ರತಿ ತಿಂಗಳು ಗೌರವಧನ ಸಿಗುವ ಹಾಗೆ ಸೂಕ್ತಕ್ರಮ ವಹಿಸಬೇಕು” ಎಂದು ಅಂಗನವಾಡಿ ನೌಕರರ ಸಂಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಈ ಬಗ್ಗೆ ಮಾತನಾಡಿ ಅಂಗನವಾಡಿ ಕಾರ್ಯಕರ್ತೆ ಎಂ.ಬಿ ಪುಷ್ಪಾ, “ಇದು ಮಹಾಲಯ ಅಮಾವಸ್ಯೆ ತಿಂಗಳು.. ನಮ್ಮಲ್ಲಿ ಈಗ ಆಚರಣೆಗಳು ಹೆಚ್ಚಾಗಿರುತ್ತವೆ. ಕಳೆದ ಎರಡುಮೂರು ತಿಂಗಳಿನಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕರಿಗೆ ಗೌರವಧನ ಬಿಡುಗಡೆಯಾಗಿಲ್ಲ. ಅಧಿಕಾರಿಗಳನ್ನು ಈ ಬಗ್ಗೆ ಪ್ರಶ್ನಿಸಿದರೆ, ‘ಅನುದಾನ ಬಂದರೆ ಮಾಡಿಕೊಡುತ್ತೇವೆ’ ಎನ್ನುತ್ತಿದ್ದಾರೆ. ಮೇಲಾಧಿಕಾರಿಗಳನ್ನು ಕೇಳಿದರೆ ಅನುದಾನ ಕಳಿಸಿದ್ದೇವೆ ಎನ್ನುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ನಾವು ಯಾರನ್ನು ನಂಬಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ. ಅಂಗನವಾಡಿ ನೌಕರರು ಯಾರೂ ಕೂಡ ಆರ್ಥಿಕವಾಗಿ ಸಬಲರಾಗಿರುವುದಿಲ್ಲ. ಇದನ್ನೇ ನಂಬಿಕೊಂಡು ಜೀವನ ಮಾಡುವವರಿಗೆ ಎರಡು ಮೂರು ತಿಂಗಳು ಗೌರವಧನ ನೀಡದೇ ಇದ್ದರೆ ನಮ್ಮ ಬದುಕಿಗೆ ಕಷ್ಟವಾಗುತ್ತದೆ” ಎಂದು ಬೇಸರ ಹೊರಹಾಕಿದರು.
“ಈ ಪರಿಸ್ಥಿತಿಯನ್ನು ನಿರ್ವಹಿಸಲಾಗದೆ ದಾವಣಗೆರೆಯ ಅಂಗನವಾಡಿ ಸಹಾಯಕರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸರ್ಕಾರ ಈವರೆಗೆ ಒಂದು ಸ್ಪಷ್ಟನೆ ನೀಡಿಲ್ಲ.. ಗೌರವಧನ ನೀಡದಿದ್ದರೂ ನಮ್ಮ ಕೆಲಸಗಳು ನಿಂತಿಲ್ಲ. ದಿನದಿಂದ ದಿನಕ್ಕೆ ಕೆಲಸದ ಹೊರೆ ಹೆಚ್ಚುತ್ತಿದೆ. ಸಂಬಳ ಕೊಡದೆ ಕೆಲಸ ಮಾಡಿಸುತ್ತಿರುವುದರಿಂದ ಕಾರ್ಯಕರ್ತರು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಬೆಲೆ ಏರಿಕೆಗೆ ಅನುಗುಣವಾಗಿ ನಮಗೆ ಕನಿಷ್ಠ ವೇತನವನ್ನೂ ಸರ್ಕಾರ ಕೊಡುತ್ತಿಲ್ಲ. ಬರಬೇಕಾದ ಕಡಿಮೆ ಗೌರವಧನವನ್ನೂ ಸಮಯಕ್ಕೆ ಸರಿಯಾಗಿ ಕೊಡುತ್ತಿಲ್ಲ. ನಮಗೆ ಜೀವನ ಮಾಡುವುದು ಕಷ್ಟವಾಗುತ್ತಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಪ್ರತಿ ತಿಂಗಳು ಹಣ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು.
“ಕೆಲವು ತಾಲೂಕುಗಳಲ್ಲಿ ಗೌರವಧನ ಕೊಡದಿದ್ದರೂ ತಮ್ಮದೇ ಹಣದಲ್ಲಿ ಮಕ್ಕಳಿಗೆ ಮೊಟ್ಟೆ ಕೊಡಿ ಎಂದು ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ. ನಮಗೆ ಜೀವನ ಮಾಡುವುದೇ ಕಷ್ಟವಾಗಿರುವಾಗ ಮಕ್ಕಳಿಗೆ ಮೊಟ್ಟೆ ಖರೀದಿ ಮಾಡುವುದು ಹೇಗೆ? ಇದನ್ನೂ ತಡೆಗಟ್ಟಬೇಕು. ಕಾರ್ಯಕರ್ತೆಯರ ಬದುಕು ಚಿಂತಾಜನಕವಾಗಿದೆ. ಸರ್ಕಾರ ಈ ಬಗ್ಗೆ ಗಮನಕೊಟ್ಟು ಪ್ರತಿ ತಿಂಗಳು ಗೌರವಧನ ಕೊಡಬೇಕು” ಎಂದರು.
ಅಂಗನವಾಡಿ ನೌಕರರ ಬೇಡಿಕೆಗಳೇನು?
1. ಸಮಗ್ರ ಶಿಶು ಅಭಿವೃದ್ಧಿ ಯೋಜನೆ 2023 ರ ಆದೇಶದ ಪ್ರಕಾರ ಕೂಡಲೇ ಗ್ರಾಜ್ಯುಟಿ ಹಣವನ್ನು ಕೊಡಬೇಕು.
2. ನಿವೃತ್ತಿಯಾದವರಿಗೆ ಇಡಗ೦ಟು ಅಥವಾ ಎನ್‌ಪಿಎಸ್ ಹಣ ಕೊಡಬೇಕು.
3. 2023 ರ ವಿಧಾನಸಭಾ ಚುನಾವಣೆಯ ಸಂಧರ್ಭದಲ್ಲಿ ಘೋಷಣೆ ಮಾಡಿದ 14 ಸಾವಿರ ರೂಗಳಿಗೆ
ಗೌರವಧನ ಹೆಚ್ಚಿಸಬೇಕು.
4. ಶಿಕ್ಷಣ ಇಲಾಖೆ, ಎಸ್‌ಡಿಎಂಸಿ ಗಳಿಂದ ಪ್ರಾರಂಭ ಮಾಡಿರುವ ಎಲ್‌ಕೆಜಿ-ಯುಕೆಜಿ ನಿಲ್ಲಿಸಿ, ಎಲ್ಲ ಅ೦ಗನವಾಡಿ
ಕೇ೦ದ್ರಗಳನ್ನು ಮೇಲ್ದರ್ಜೆಗೇರಿಸಿ ಅಂಗನವಾಡಿ ಕೇ೦ದ್ರಗಳಲ್ಲಿಯೇ ಎಲ್‌ಕೆಜಿ-ಯುಕೆಜಿ ಪ್ರಾರಂಭಿಸಬೇಕು.
5. ಇಲಾಖಾ ಸಚಿವರು ಒಪ್ಪಿಕೊ೦ಡಂತೆ ಸಾಮೂಹಿಕ ಆರೋಗ್ಯ ವಿಮೆಯನ್ನು ಕೂಡಲೇ
ಜಾರಿಗೊಳಿಸಬೇಕು.
6. ಐಸಿಡಿಎಸ್ ಯೋಜನೆಯನ್ನು ಕಾಯ್ದೆಯನ್ನಾಗಿ ರೂಪಿಸಬೇಕು.
7. ಪೌಷ್ಟಿಕ ಆಹಾರ ಮತ್ತು ಪೂರ್ವಪ್ರಾರ್ಥಮಿಕ ಶಿಕ್ಷಣ ಹಕ್ಕಗಬೇಕು.
8. ಐಸಿಡಿಎಸ್ ಯೋಜನೆಗೆ ಬಜೆಟ್‌ನ್ನು ಹೆಚ್ಚಿಸಬೇಕು.
9. ಅ೦ಗನವಾಡಿ ಕೇಂದ್ರಗಳಿಗೆ ಕೊಡುವ ಪೂರಕ ಪೌಷ್ಟಿಕ ಆಹಾರಕ್ಕೆ ಜಿಎಸ್‌ಟಿ ಹಾಕಬಾರದು.
10. ಐಸಿಡಿಎಸ್ ಯೋಜನೆಗೆ ಪ್ರತ್ಯೇಕ ನಿರ್ದೇಶಾನಾಲಯ ಬೇಕು.
11. 2018 ಸೆಪ್ಟಂಬರ್‌ನಿ೦ದ ಇದುವರೆಗೂ ಅಂಗನವಾಡಿ ನೌಕರರಿಗೆ ಯಾವುದೇ ವೇತನ ಹೆಚ್ಚಿಸಿಲ್ಲ.
ಆದ್ದರಿ೦ದ 26 ಸಾವಿರಕ್ಕೆ ಕನಿಷ್ಠ ವೇತನ ಹೆಚ್ಚಳ ಮಾಡಬೇಕು.
12. 45ನೇ ಐಎಲ್‌ಸಿ ಶಿಫಾರಸ್ಸುಗಳನ್ನು ಜಾರಿ ಮಾಡಬೇಕು.
13. ಕೇಂದ್ರ ಸರ್ಕಾರದ ಪಾಲಿನ ಐಸಿಡಿಎಸ್‌ಗೆ ಕೊಡುವ ಅನುದಾನ ಸಮಯಕ್ಕೆ ಸರಿಯಾಗಿ ಬಿಡುಗಡೆ
ಮಾಡಬೇಕು.
14. ಬೆಲೆಯೇರಿಕೆಯ ಆಧಾರದಲ್ಲಿ ಫಲಾನುಭವಿಗಳ ಘಟಕವೆಚ್ಚವನ್ನು ಹೆಚ್ಚಳಗೊಳಿಸಬೇಕು. 2017 ರಿಂದ
ಘಟಕ ವೆಚ್ಚವನ್ನು ಹೆಚ್ಚಳ ಮಾಡಲಿಲ್ಲ.
15. ನಗರಸಭೆ, ನಗರಪಾಲಿಕೆ, ಮಹಾನಗರ ಪಾಲಿಕೆ, ವಿಧಾನಸಭೆ, ಲೋಕಸಭಾ ಚುನಾವಣೆಗಳು ಅಲ್ಲದೇ
ಉಪಚುನಾವಣೆಗಳಲ್ಲಿ ಮತದಾರರನ್ನು ಗುರ್ತಿಸುವುದು, ಅನರ್ಹಗೊಳಿಸುವುದು, ಚುನಾವಣಾ
ಸಂಧರ್ಭದಲ್ಲಿ ಚೀಟಿ ಹ೦ಚುವುದು, ಬೂತ್‌ಗಳಲ್ಲಿ ಕೆಲಸ ಮಾಡುವ ಮುಂತಾದ ಕೆಲಸಗಳಿಂದ
ಅ೦ಗನವಾಡಿ ಕೇಂದ್ರದ ದಿನನಿತ್ಯದ ಕೆಲಸಗಳಲ್ಲಿ ಅಂಗನವಾಡಿ ನೌಕರರು ತೊಂದರೆ ಅನುಭವಿಸುತ್ತದ್ದಾರೆ.
ಆದ್ದರಿಂದ ಅವರನ್ನು ಚುನಾವಣಾ ಕಲಸಗಳಿ೦ದ ಮುಕ್ತಿಗೊಳಿಸಬೇಕು.