Published
2 months agoon
By
Akkare Newsಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ನಿಧಿ ದುರ್ಬಳಕೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ನ್ಯಾಯಾಲಯ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.
ಎರಡು ಲಕ್ಷ ಬಾಂಡ್ ಮತ್ತು ಇಬ್ಬರ ಶೂರಿಟಿ ಮೇರೆಗೆ ಬೆಂಗಳೂರಿನ 82ನೇ ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಜಾಮೀನು ಮಂಜೂರು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ನಿಧಿ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ ಅವರನ್ನು ಜುಲೈ 12ರಂದು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು.
ಕಳೆದ ಬುಧವಾರ ಇಡಿ ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಪ್ರಾಸಿಕ್ಯೂಷನ್ ದೂರು ಅಥವಾ ಆರೋಪ ಪಟ್ಟಿಯನ್ನು ಸಲ್ಲಿಸಿದೆ.
ವರದಿಗಳ ಪ್ರಕಾರ, ವಾಲ್ಮೀಕಿ ನಿಗಮದ ನಿಧಿ ದುರ್ಬಳಕೆ ಪ್ರಕರಣ ಅಥವಾ ಬಹುಕೋಟಿ ಹಗರಣದ ಸೂತ್ರದಾರ ಬಿ.ನಾಗೇಂದ್ರ ಎಂದು ಇಡಿ ದೂರಿನಲ್ಲಿ ವಿವರಿಸಿದೆ.
ನಿಗಮವು ಬೇರೆ ಬೇರೆ ಬ್ಯಾಂಕ್ ಖಾತೆಗಳಲ್ಲಿ ಹೊಂದಿದ್ದ ಠೇವಣಿಯನ್ನು ಅನಧಿಕೃತವಾಗಿ ಬೆಂಗಳೂರಿನ ಎಂ.ಜಿ ರಸ್ತೆಯ ಬ್ಯಾಂಕ್ ಖಾತೆಯೊಂದಕ್ಕೆ ವರ್ಗಾಯಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದ 43.33 ಕೋಟಿ ರೂಪಾಯಿಯನ್ನು ಖಜಾನೆಯಿಂದ ಅಕ್ರಮವಾಗಿ ವರ್ಗಾಯಿಸಿಕೊಳ್ಳಲಾಗಿದೆ ಎಂದು ಆರೋಪಿಸಿದೆ.
ಅಕ್ರಮವಾಗಿ ವರ್ಗಾವಣೆ ಮಾಡಲಾದ ರೂ. 89.62 ಕೋಟಿಯಲ್ಲಿ, ರೂ.20.19 ಕೋಟಿಯನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಬಳಸಿಕೊಳ್ಳಲಾಗಿದೆ. ಇದಕ್ಕೆ ನಾಗೇಂದ್ರ ಅವರ ಆಪ್ತ ವಿಜಯ್ ಕುಮಾರ್ ಅವರ ಮೊಬೈಲ್‌ನಲ್ಲಿ ಸಾಕ್ಷ್ಯಗಳು ಲಭ್ಯವಾಗಿದೆ ಎಂದು ವಿವರಿಸಿದೆ.
ಶಾಸಕ ನಾಗೇಂದ್ರ ಜೊತೆ ಸತ್ಯನಾರಾಯಣ ವರ್ಮ, ಎಟಕಾರಿ ಸತ್ಯನಾರಾಯಣ, ಜೆಜಿ ಪದ್ಮನಾಭ, ನಾಗೇಶ್ವರ್ ರಾವ್, ನೆಕ್ಕಂಟಿ ನಾಗರಾಜ್, ವಿಜಯ್ ಕುಮಾರ್ ಗೌಡ ಹಾಗೂ ಇನ್ನೂ 18 ಆರೋಪಿಗಳ ಹೆಸರನ್ನು ಇಡಿ ತನ್ನ ದೂರಿನಲ್ಲಿ ಉಲ್ಲೇಖಿಸಿದೆ ಎಂದು ತಿಳಿದು ಬಂದಿದೆ