Published
2 months agoon
By
Akkare Newsಬೆಂಗಳೂರು:ಗ್ರಾಮ ಪಂಚಾಯತ್ ನೌಕರರು ಮತ್ತು ಸದಸ್ಯರ ನ್ಯಾಯಯುತ ಬೇಡಿಕೆಗಳನ್ನು ಅಧ್ಯಯನ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಲು ತಜ್ಞರ ತಂಡ ರಚನೆ ಕುರಿತು ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸುವಂತೆ ಹಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಅವರು ಈ ಕುರಿತು ಸಿಎಂ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಿದ್ದರು.
ಗ್ರಾ.ಪಂ ಸದಸ್ಯರು, ಅಧಿಕಾರಿಗಳ ಸಮಸ್ಯೆಗಳ ಕುರಿತು ಸಿ.ಎಂ ಸಿದ್ದರಾಮಯ್ಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪತ್ರ ಬರೆದಿದ್ದ ದಿನೇಶ್ ಗೂಳಿಗೌಡ, ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದರಲ್ಲದೆ,ಬೇಡಿಕೆಗಳ ಅಧ್ಯಯನಕ್ಕೆ ತಜ್ಞರ ಸಮಿತಿ ರಚನೆಗೆ ಒತ್ತಾಯಿಸಿದ್ದರು.
ಪಂಚಾಯಿತಿ ಒಕ್ಕೂಟಗಳ ಪದಾಧಿಕಾರಿಗಳ ಸಭೆ ನಡೆಸಿದ್ದ ಸಚಿವ ಪ್ರಿಯಾಂಕ್ ಖರ್ಗೆ, ಸಮಸ್ಯೆಗಳ ಅಧ್ಯಯನ ಹಾಗೂ ಇತ್ಯರ್ಥಕ್ಕೆ ತಜ್ಞರ ತಂಡವನ್ನು ರಚನೆ ಮಾಡುವುದಾಗಿ ಭರವಸೆ ನೀಡಿದ್ದರು.ಕಾಲ ಕಾಲಕ್ಕೆ ಅಧಿಕಾರಿ, ಸಿಬ್ಬಂದಿಗಳಿಗೆ ಭಡ್ತಿ ಘೋಷಣೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯತ್ ಅಧಿಕಾರಿ, ನೌಕರರು ಅ.4ರಿಂದ ಅನಿರ್ಧಿಷ್ಟ ಮುಷ್ಕರ ಆರಂಭಿಸಿದ್ದರು.ಗೌರವ ಧನ ಹೆಚ್ಚಳ ಸೇರಿದಂತೆ ಗ್ರಾ.ಪಂ.ಸದಸ್ಯರ ಹಲವು ಬೇಡಿಕೆಗಳನ್ನೂ ಸರಕಾರದ ಮುಂದಿರಿಸಲಾಗಿತ್ತು.ಪ್ರತಿಭಟನೆ ನಿರತರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸುವ ಕುರಿತು ಮತ್ತು ಸಮಸ್ಯೆಗಳ ಅಧ್ಯಯನ ನಡೆಸಿ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ತಜ್ಞರ ತಂಡ ರಚನೆ ಮಾಡುವುದಾಗಿ ಭರವಸೆ ನೀಡಿದ್ದರು. ಬಳಿಕ ಮುಷ್ಕರ ಕೈಬಿಡಲಾಗಿತ್ತು.
ಈ ಮಧ್ಯೆ ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಅವರು, ಗ್ರಾ.ಪಂ. ನೌಕರರು ಮತ್ತು ಸದಸ್ಯರ ಮುಷ್ಕರದ ಕುರಿತು ಸಿಎಂ ಸಿದ್ದರಾಮಯ್ಯ ಮತ್ತು ಸುಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪತ್ರ ಬರೆದು, ಮುಷ್ಕರ ನಿರತರ ಸಮಸ್ಯೆ, ಬೇಡಿಕೆಗಳ ಅಧ್ಯಯನಕ್ಕೆ ತಜ್ಞರ ತಂಡ ರಚನೆ ಮಾಡುವಂತೆ ಮತ್ತು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದರು.