Published
3 weeks agoon
By
Akkare News
ದಿನದಿಂದ ದಿನಕ್ಕೆ ನೀರಿನ ಸಂಪರ್ಕಕ್ಕಾಗಿ ಬೇಡಿಕೆ ಹೆಚ್ಚುತ್ತಿರುವ ಪುತ್ತೂರು ನಗರಕ್ಕೆ ನೀರೊದಗಿಸುವ ನೆಕ್ಕಿಲಾಡಿ ಘಟಕಕ್ಕೆ ಎಕ್ಸ್‌ಪ್ರೆಸ್ ಫೀಡರ್‌ಇದ್ದರೂ ಪವರ್‌ಕಟ್‌ನಿಂದ ಪ್ರತೀ ತಿಂಗಳು ಅಂದಾಜು 6.5 ಲಕ್ಷ ರೂ. ಡೀಸೆಲ್‌ಗಾಗಿ ಖರ್ಚು ಮಾಡಬೇಕಾದ ಸ್ಥಿತಿ ಉಂಟಾಗಿದೆ!
ಕಳೆದ ಕೆಲವು ವರ್ಷಗಳಿಂದ ನಗರಸಭೆಯ ನೀರಿನ ಪೂರೈಕೆ ಮೂಲವಾದ ನೆಕ್ಕಿಲಾಡಿಯಲ್ಲಿ ಘಟಕ ಕಾರ್ಯ ನಿರ್ವಹಣೆಗೆ ವಿದ್ಯುತ್ ಅಭಾವದಿಂದ ದೊಡ್ಡ ಮೊತ್ತ ಡೀಸೆಲ್‌ಗಾಗಿ ಖರ್ಚು ಮಾಡಲಾಗುತ್ತಿದೆ. ಅಲ್ಲಿ 24 ತಾಸು ನಿರಂತರ ವಿದ್ಯುತ್ ಪೂರೈಕೆಗೆ ಅಗತ್ಯ ಕ್ರಮಕೈಗೊಳ್ಳಬೇಕು ಎನ್ನುವ ಬೇಡಿಕೆ ವ್ಯಕ್ತವಾಗಿದೆ.
ಜಲಸಿರಿ ಜವಾಬ್ದಾರಿ
ನಗರದಲ್ಲಿ ದಿನದ 24 ತಾಸು ನೀರು ಪೂರೈಸಲು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ(ಕೆಯುಐಡಿಎಫ್‌ಸಿ) ಮೂಲಕ ಜಲಸಿರಿ ಅನುಷ್ಠಾನಗೊಂಡಿದೆ. ಇದಕ್ಕಾಗಿ 118 ಕೋಟಿ ರೂ. ಖರ್ಚು ಮಾಡಲಾಗಿದೆ. ಅದಾಗ್ಯೂ ಇನ್ನೂ ನೀರು ಪೂರ್ಣ ಪ್ರಮಾಣದಲ್ಲಿ ಮನೆ ಬಾಗಿಲಿಗೆ ತಲುಪುತ್ತಿಲ್ಲ. ಕೆಲವು ಝೋನ್‌ಗಳಲ್ಲಿ ಪೈಪ್‌ಲೈನ್ ಸಮಸ್ಯೆ ಹಾಗೆಯೇ ಉಳಿದಿದೆ. ಕಳೆದ ಜನವರಿಯಿಂದ ಪುತ್ತೂರಿನ ಸಮಗ್ರ ನೀರು ಪೂರೈಕೆ ಜಾಲವನ್ನೇ ಜಲಸಿರಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಿದೆ. 8 ವರ್ಷ ಪೂರ್ತಿ ನಿರ್ವಹಣೆ ಅವರದ್ದೇ. ನೀರಿನ ಬಿಲ್ ಸಂಗ್ರಹವೂ ಜಲಸಿರಿ ಮಾಡುತ್ತಿದೆ. ಜಲಸಿರಿ ಪ್ರತ್ಯೇಕ ಕಚೇರಿ ತೆರೆದಿದ್ದು, ವಲಯವಾರು ಎಂಜಿನಿಯರ್‌ಗಳು, ವಾಲ್‌ವುನ್‌ಗಳಿದ್ದಾರೆ. ನೀರಿನ ಬಿಲ್ ಸಂಗ್ರಹಕ್ಕೆ ಪ್ರತ್ಯೇಕ ಖಾತೆ ತೆರೆಯಲಾಗಿದೆ.
ಡೀಸೆಲ್ ಬಿಲ್ ಹೊರೆ
ಪ್ರಸ್ತುತ ನಗರಕ್ಕೆ ನೀರಿನ ಪೂರೈಕೆಯ ಸಂಪೂರ್ಣ ಜವಾಬ್ದಾರಿಯನ್ನು ಜಲಸಿರಿ ವಹಿಸಿಕೊಂಡ ಬಳಿಕ ಕೊಳವೆಬಾವಿ ಬಳಕೆ ಸಂಖ್ಯೆ 58ಕ್ಕೆ ಇಳಿದಿದೆ. ವಿದ್ಯುತ್ ಬಿಲ್ ಹೊರತುಪಡಿಸಿ ಉಳಿದ ಎಲ್ಲದರ ಜವಾಬ್ದಾರಿ ಜಲಸಿರಿಯದ್ದು. ಪ್ರತೀ ದಿನ ನಗರಕ್ಕೆ 9.5 ಎಂ.ಎಲ್. ಡಿ ನೀರನ್ನು ಮನೆ-ಮನೆ ಹಾಗೂ ಇತ್ಯಾದಿ ಅಗತ್ಯಗಳಿಗೆ ವಿತರಿಸಬೇಕು. ವಿದ್ಯುತ್ ಆಧಾರಿತವಾಗಿ ನೀರಿನ ಪೂರೈಕೆ ವ್ಯವಸ್ಥೆ ಇದ್ದರೂ ಪ್ರತೀ ಗುರುವಾರ ವಿದ್ಯುತ್ ಪವರ್‌ಕಟ್ ಇರುವ ಕಾರಣ ಜನರೇಟರ್ ಬಳಸಿ ನೀರೆತ್ತಿ ಶುದ್ಧಿಕರಿಸಬೇಕು. ಜನರೇಟರ್ ಬಳಕೆಗೆ ಡೀಸೆಲ್ ಬೇಕಿದ್ದು ಇದಕ್ಕಾಗಿ ಪ್ರತೀ ತಿಂಗಳಿಗೆ ಇದಕ್ಕಾಗಿ 6.5 ಲಕ್ಷ ರೂ. ಅನ್ನು ನಗರಸಭೆ ವ್ಯಯಿಸಬೇಕು.
ನೀರಿಗೇನೂ ಕೊರತೆ ಇಲ್ಲ
ಫೆಬ್ರವರಿ ಎರಡನೇ ವಾರದಲ್ಲಿ ಕುಮಾರಧಾರಾ ನದಿಗೆ ನೆಕ್ಕಿಲಾಡಿಯಲ್ಲಿ ಕಟ್ಟಲಾಗಿರುವ ಕಿಂಡಿ ಅಣೆಕಟ್ಟಿನಲ್ಲಿ ನೀರು ತುಂಬಿ ತುಳುಕುತ್ತಿತ್ತಲ್ಲದೆ ಹೊರ ಹೋಗುತ್ತಿದೆ ಎನ್ನುತ್ತಾರೆ ಜಲಸಿರಿ ಎಂಜಿನಿಯರ್‌ಮಾದೇಶ. ಸದ್ಯದ ಲೆಕ್ಕಾಚಾರದಲ್ಲಿ ನೀರಿಗೇನೂ ಕೊರತೆ ಇಲ್ಲ. ಆದರೆ, ಕಳೆದ ಕೆಲವು ದಿನಗಳಿಂದ ಬಿಸಿಲಿನ ತಾಪ ಸಾಕಷ್ಟು ಏರಿಕೆ ಕಂಡಿದೆ. ಬಿಸಿಲು ಹೀಗೆ ತೀವ್ರವಾದರೆ ನೀರಿನ ಸಂಗ್ರಹದ ಮೇಲೆ ಪರಿಣಾಮ ಉಂಟುಮಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ನಿರಂತರ ಚರ್ಚೆ
ಡೀಸೆಲ್ ಖರ್ಚನ್ನು ಕಡಿಮೆ ಮಾಡಲು ಪರ್ಯಾಯವಾಗಿ ವಿದ್ಯುತ್ ಪೂರೈಕೆಗೆ ಯಾವ ರೀತಿ ವ್ಯವಸ್ಥೆ ಮಾಡಬಹುದು ಎನ್ನುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.
–ದರ್ಶನ್ ಎಚ್.ವಿ., ಆಡಳಿತಾಧಿಕಾರಿ, ಪುತ್ತೂರು ನಗರಸಭೆ