Connect with us

ಇತರ

ಕೆದಂಬಾಡಿ: ಮೂಲಭೂತ ಸೌಲಭ್ಯಗಳ ಕೊರತೆಯಿಂದ ಸಂಕಷ್ಟ – ಸನ್ಯಾಸಿಗುಡ್ಡೆ ಜನತಾ ಕಾಲೋನಿ ನಿವಾಸಿಗಳ ಆಕ್ರೋಶ –ಮತದಾನ ಬಹಿಷ್ಕಾರ

Published

on

ಪುತ್ತೂರು: ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮದ 2ನೇ ವಾರ್ಡಿನ 186ನೇ ಬೂತ್ ಗೆ ಸೇರಿದ ಸನ್ಯಾಸಿಗುಡ್ಡೆ ಜನತಾ ಕಾಲೋನಿ ನಿವಾಸಿಗಳು ಹಲವು ವರ್ಷಗಳಿಂದ ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಾಲೋನಿಯಲ್ಲಿ ವಾಸಿಸುವ ಬಹುತೇಕ ಕುಟುಂಬಗಳು ಕೂಲಿ ಕಾರ್ಮಿಕರಾಗಿದ್ದು, ದಿನನಿತ್ಯದ ಬದುಕು ನಡೆಸುವುದೇ ಕಷ್ಟಕರವಾಗಿರುವ ಸ್ಥಿತಿಯಲ್ಲಿ ಸರ್ಕಾರದ ಯಾವುದೇ ಸೌಲಭ್ಯಗಳು ಇದುವರೆಗೂ ತಲುಪಿಲ್ಲ ಎಂದು ಅವರು ಆರೋಪಿಸಿದ್ದು, ಮತದಾನವನ್ನು ಬಹಿಷ್ಕರಿಸಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.


ಜನತಾ ಕಾಲೋನಿಗೆ ಸರಿಯಾದ ರಸ್ತೆ, ಚರಂಡಿ ವ್ಯವಸ್ಥೆ, ಬೀದಿ ದೀಪಗಳು, ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಇಲ್ಲದೆ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಿಶೇಷವಾಗಿ ಮಳೆಗಾಲದಲ್ಲಿ ಕಾಲೋನಿಯ ಸಂಪರ್ಕ ರಸ್ತೆ ಸಂಪೂರ್ಣ ಕೆಸರುಮಯವಾಗಿ ಸಂಚಾರ ಅಸಾಧ್ಯವಾಗುತ್ತದೆ. ಇತ್ತೀಚೆಗೆ ಪಂಚಾಯತ್ ವತಿಯಿಂದ ಇಂಗು ಗುಂಡಿಯ ಪೈಪು ಹಾಕುವ ಸಂದರ್ಭ ಜೆಸಿಬಿ ಯಂತ್ರದಿಂದ ರಸ್ತೆ ಕುಸಿದು ಹಾನಿಯಾಗಿದ್ದು, ಬಳಿಕ ಸುರಿದ ಮಳೆಯಿಂದ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ಇದೇ ರೀತಿ ಮುಂದುವರೆದರೆ ಕಾಲೋನಿಯ ಸಂಪರ್ಕ ರಸ್ತೆ ಸಂಪೂರ್ಣ ಕಡಿತಗೊಳ್ಳುವ ಭೀತಿ ಎದುರಾಗಿದೆ ಎಂದು ನಿವಾಸಿಗಳು ಹೇಳಿದ್ದಾರೆ.

ರಸ್ತೆ ಕುಸಿತದಿಂದ ಕಾಲೋನಿಯ ಮನೆಗಳಿಗೆ ವಾಹನ ಸಂಚಾರ ಸಾಧ್ಯವಾಗುತ್ತಿಲ್ಲ. ರೋಗಿಗಳು, ಗರ್ಭಿಣಿಯರು ಹಾಗೂ ವೃದ್ಧರು ಆಸ್ಪತ್ರೆಗಳಿಗೆ ತೆರಳುವುದಕ್ಕೂ ಕಷ್ಟಪಡುವಂತಾಗಿದೆ. ಈ ಸಮಸ್ಯೆಗೆ ಪರಿಹಾರವಾಗಿ ತಡೆಗೋಡೆ ನಿರ್ಮಿಸಿ ರಸ್ತೆ ಪುನರ್ ನಿರ್ಮಾಣ ಮಾಡುವಂತೆ ಕಳೆದ ಎರಡು ವರ್ಷಗಳಿಂದ ಪಂಚಾಯತ್, ತಹಶೀಲ್ದಾರ್ ಕಚೇರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು ಬಾರಿ ಅರ್ಜಿಗಳನ್ನು ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂಬುದಾಗಿ ಕಾಲೋನಿ ನಿವಾಸಿಗಳು ದೂರಿದ್ದಾರೆ.

ವಾರ್ಡಿನ ಪಂಚಾಯತ್ ಸದಸ್ಯರು, ಕಾಂಗ್ರೆಸ್ ಪಕ್ಷದ ಬೂತ್ ಸಮಿತಿ ಹಾಗೂ ವಲಯ ಸಮಿತಿಯವರು ಚುನಾವಣೆಯ ನಂತರ ತಮ್ಮ ಕಡೆ ಗಮನ ಹರಿಸಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಮತದಾನ ಸಮಯದಲ್ಲಿ ಮನೆ ಮನೆಗೆ ತೆರಳಿ ಬೆಂಬಲ ಕೇಳಿದ ನಾಯಕರು ಇದೀಗ ಸಮಸ್ಯೆ ಹೇಳಲು ಹೋದರೆ ಭೇಟಿಗೂ ಅವಕಾಶ ನೀಡುವುದಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ. ಡಜನ್ ಗಟ್ಟಲೆ ಅರ್ಜಿಗಳು ನೀಡಿದರೂ ಅವುಗಳೆಲ್ಲ ಕಸದ ಬುಟ್ಟಿಗೆ ಸೇರುತ್ತಿವೆ ಎಂಬ ಭಾವನೆ ಜನರಲ್ಲಿ ಮೂಡಿದೆ.

ಇದೇ ಹಿನ್ನೆಲೆಯಲ್ಲಿ, ಒಂದು ತಿಂಗಳೊಳಗೆ ಕಾಲೋನಿಯ ರಸ್ತೆ, ತಡೆಗೋಡೆ, ಬೀದಿ ದೀಪ ಹಾಗೂ ಇತರ ಮೂಲಭೂತ ಸೌಲಭ್ಯಗಳ ಬಗ್ಗೆ ಸ್ಪಷ್ಟ ಪರಿಹಾರ ಒದಗಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಜನತಾ ಕಾಲೋನಿ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ. ಮತದಾನವನ್ನು ಬಹಿಷ್ಕರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಹಕ್ಕುಗಳಿಗಾಗಿ ಒಗ್ಗಟ್ಟಾಗಿ ಹೋರಾಟ ಮುಂದುವರಿಸುವುದಾಗಿ ನಿವಾಸಿಗಳು ಸ್ಪಷ್ಟಪಡಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version