Published
3 months agoon
By
Akkare News
ಟೀಮ್ ಮಂಗಳೂರು, ಹವ್ಯಾಸಿ ಗಾಳಿಪಟ ತಂಡವು ONGC MRPLನ ಪ್ರಾಯೋಜಕತ್ವದಲ್ಲಿ ‘ಕರಾವಳಿ ಉತ್ಸವ’ದ ಅಂಗವಾಗಿ ಜಿಲ್ಲಾಡಳಿತದ ಸಹಕಾರದೊಂದಿಗೆ ಮಂಗಳೂರಿನ ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಿದೆ.
ಜನವರಿ 18 ಮತ್ತು 19 ರಂದು ನಡೆಯುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಟೀಮ್ ಮಂಗಳೂರು ತಂಡದ 8ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವಾಗಿದೆ. ಇಂಗ್ಲೆಂಡ್, ಜರ್ಮನಿ, ನೆದರ್ಲ್ಯಾಂಡ್, ಕ್ಲೋವೆನಿಯಾ, ಇಟೆಲಿ, ಸ್ವೀಡನ್, ಇಂಡೋನೇಶಿಯಾ, ಪೊರ್ಚುಗಲ್ನಿಂದ ವಿದೇಶಿ ಗಾಳಿಪಟ ತಂಡಗಳು ಮತ್ತು ಒಡಿಶಾ, ರಾಜಸ್ತಾನ, ಮಹಾರಾಷ್ಟ್ರ, ತೆಲಂಗಾಣ, ಕೇರಳ, ಗುಜರಾತ್ ರಾಜ್ಯಗಳಿಂದ ಗಾಳಿಪಟ ತಂಡಗಳು ಉತ್ಸವದಲ್ಲಿ ಭಾಗವಹಿಸಿದೆ.
ವಿವಿಧ ಗಾತ್ರ, ಸೂತ್ರ, ವಿನ್ಯಾಸದ ಬಣ್ಣ, ಬಣ್ಣಗಳ ಗಾಳಿಪಟಗಳು ಕಣ್ಣುಗಳಿಗೆ ಹಬ್ಬ ನೀಡುತ್ತಿವೆ. ಟೀಮ್ ಮಂಗಳೂರು ತಂಡವು ಕಥಕ್ಕಳಿ, ಯಕ್ಷಗಾನ, ಪುಷ್ಪಕ ವಿಮಾನ, ಗಜರಾಜ, ಗರುಡ, ಭಾರತೀಯ ದಂಪತಿ ಮುಂತಾದ ಗಾಳಿಪಟಗಳನ್ನು ರಚಿಸಿದ್ದು ಫ್ರಾನ್ಸ್, ಇಟೆಲಿ, ಇಂಗ್ಲೆಂಡ್, ಕೆನಡಾ, ಕೊರಿಯಾ, ಹಾಂಕಾಂಗ್, ದುಬೈ, ಕತಾರ್ ಮುಂತಾದ ದೇಶಗಳ ತಂಡಗಳು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿ ಭಾರತೀಯ ಸಂಸ್ಕೃತಿಯನ್ನು ಪ್ರಚಾರಗೊಳಿಸಿವೆ.
ವಿವಿಧ ಬಗೆಯ ಗಾಳಿಪಟ: ಗಾಳಿಪಟ ಉತ್ಸವದಲ್ಲಿ ನೂರಾರು ಗಾಳಿಪಟ ಹಾರಾಡುತ್ತಿದ್ದು, ಇದರಲ್ಲಿ ಕುದುರೆ, ಐಸ್ ಕ್ರೀಂ, ಮೀನು, ಅಕ್ಟೋಪಸ್, ಹುಲಿ, ಗಣಪತಿ, ಕಥಕ್ಕಳಿ, ಸನ್ ಫ್ಲವರ್, ಏರೋಪ್ಲೇನ್, ಚಿರತೆ, ಟೆಡ್ಡಿಬೇರ್, ಕ್ರಿಕೆಟ್, ಪಿನಾಕಿಯೋ ಗಮನ ಸೆಳೆಯುತ್ತಿದೆ. ಇದರಲ್ಲಿ ಪಿನಾಕಿಯೋ ಕಾರ್ಟೂನ್ ಅತೀ ದೊಡ್ಡದಾಗಿದ್ದು, ಚಿರತೆ, ಕುದುರೆ ಕೂಡ ದೊಡ್ಡದಾಗಿ ಆಕರ್ಷಣೆಗೆ ಪಾತ್ರವಾಗಿದೆ.
ವಿದೇಶಿಯರ ಉತ್ಸಾಹ: ಗಾಳಿಪಟ ಉತ್ಸವದಲ್ಲಿ ಹಲವು ವಿದೇಶಿಯರು ಭಾಗಿಯಾಗಿದ್ದು, ಈಟಿವಿ ಭಾರತ ಜೊತೆ ಮಾತನಾಡಿದ ಇಟಲಿಯ Guilerme Linares ಮತ್ತು Gheno Sandra, ನಾನು ಹಲವಾರು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಭಾಗವಹಿಸಿದ್ದೇನೆ. ನಾನು ಮತ್ತು ಪತ್ನಿ ಗಾಳಿಪಟ ತಯಾರಿಸುವುದು, ಡಿಸೈನ್ ಮಾಡುವುದು, ಹಾರಿಸುವುದನ್ನು ಮಾಡುತ್ತೇವೆ. ನಾವು ಇಲ್ಲಿ ಸನ್ ಫ್ಲವರ್, ಕ್ರಿಕೆಟ್, ಪಿನಾಕಿಯೊ, ಬೌಲ್ ಹಾರಿಸಿದ್ದೇವೆ. ಮಂಗಳೂರಿನಲ್ಲಿ ಗಾಳಿಪಟ ಹಾರಾಟಕ್ಕೆ ಉತ್ತಮ ವಾತಾವರಣವಿದೆ ಎಂದು ಸಂತಸ ವ್ಯಕ್ತಪಡಿಸಿದರು.