Published
1 day agoon
By
Akkare Newsಪುತ್ತೂರು:ಈ ವರ್ಷದ ಮಳೆಗಾಲವು ಪ್ರಾರಂಭದಲ್ಲಿಯೇ ಮೆಸ್ಕಾಂಗೆ ದೊಡ್ಡ ಹಾನಿಯುಂಟುಮಾಡಿದೆ.ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಗಾಳಿ ಮಳೆಯಿಂದಾಗಿ ಮೆಸ್ಕಾಂ ಪುತ್ತೂರು ವಿಭಾಗದ ವ್ಯಾಪ್ತಿಯಲ್ಲಿ 190 ವಿದ್ಯುತ್ ಕಂಬಗಳು ಧರೆಗೆ ಉರುಳಿವೆ.3 ವಿದ್ಯುತ್ ಟ್ರಾನ್ಸ್ ಫಾರ್ಮ‌್ರಗಳು ಮತ್ತು ವಿದ್ಯುತ್ ತಂತಿಗಳಿಗೂ ಹಾನಿಯುಂಟಾಗಿದ್ದು ಅಂದಾಜು ರೂ.32 ಲಕ್ಷ ನಷ್ಟವಾಗಿದೆ.
ಮೆಸ್ಕಾಂ ಪುತ್ತೂರು ವಿಭಾಗದ ಸುಳ್ಯ, ಕಡಬ, ಸುಬ್ರಹ್ಮಣ್ಯ ಹಾಗೂ ಗ್ರಾಮಾಂತರ ಉಪ ವಿಭಾಗಗಳ ವ್ಯಾಪ್ತಿಯಲ್ಲಿ ಬಹುತೇಕ ಹಾನಿಯುಂಟಾಗಿದೆ.ಗಾಳಿ ಸಹಿತ ಮಳೆಯಿಂದಾಗಿ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಒಟ್ಟು 170 ವಿದ್ಯುತ್ ಕಂಬಗಳು ಉರುಳಿಬಿದ್ದಿದೆ. 3 ವಿದ್ಯುತ್ ಟ್ರಾನ್ಸ್ ಫಾರ್ಮ‌್ರಗಳಿಗೆ ಹಾನಿಯುಂಟಾಗಿದೆ. 2 ಕಡೆ ಟ್ರಾನ್ಸ್ ಫಾರ್ಮರ್ ಬುಡ ಸಹಿತ ಕಿತ್ತು ಬಿದ್ದು ಸಂಪೂರ್ಣ ಹಾನಿಯುಂಟಾಗಿದೆ.ಮೇ.26ರಂದು ಒಂದೇ ದಿನ ಉಪ್ಪಿನಂಗಡಿ ಹಾಗೂ ಹಿರೇಬಂಡಾಡಿ ಪರಿಸರದಲ್ಲಿ 20 ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಒಟ್ಟು ರೂ.32 ಲಕ್ಷ ಮೆಸ್ಕಾಂಗೆ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ವಿದ್ಯುತ್ ಕಂಬ, ಟ್ರಾನ್ಸ್ ಫಾರ್ಮರ್ ಹಾಗೂ ತಂತಿಗಳನ್ನು ಶೀಘ್ರವಾಗಿ ದುರಸ್ತಿ ಮಾಡಲಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಮನವಿ:
ನಿರಂತರವಾದ ಮಳೆಗೆ ಎಲ್ಲಾ ಕಡೆಗಳಲ್ಲಿ ಹಾನಿಯುಂಟಾಗುತ್ತಿದ್ದು ವಿದ್ಯುತ್ ಕಡಿತ ಉಂಟಾಗುತ್ತಿದೆ.ಹಾನಿಯಾಗಿರುವ ಎಲ್ಲಾ ಕಡೆಗಳಲ್ಲಿ ದುರಸ್ತಿಪಡಿಸಿಕೊಡಲಾಗಿದೆ.ರಾತ್ರಿ ಹಾನಿಯಾದರೆ ಮರುದಿನ ಸಂಜೆಯ ಒಳಗಾಗಿ ಮರುಸ್ಥಾಪಿಸಿಕೊಡಲಾಗುತ್ತದೆ.ಆದರೆ ಎಲ್ಲಾ ಕಡೆಗಳಲ್ಲಿ ದುರಸ್ತಿ ಕಾರ್ಯಗಳು ನಡೆಯುತ್ತಿದ್ದು ವಿದ್ಯುತ್ ಮರು ಸಂಪರ್ಕ ಕಲ್ಪಿಸಲು ಸ್ವಲ್ಪ ವಿಳಂಬವಾಗುತ್ತಿದೆ. ಮಳೆಯು ಎಡೆಬಿಡದೆ ನಿರಂತರ ಸುರಿಯುತ್ತಿರುವುದರಿಂದ ದುರಸ್ತಿ ಕಾರ್ಯಗಳಿಗೆ ಅಡ್ಡಿಯುಂಟಾಗುತ್ತಿದೆ.
ಮಳೆ, ಗಾಳಿಯ ನಡುವೆಯೂ ಮೆಸ್ಕಾಂ ಸಿಬ್ಬಂದಿ, ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ವಿನಂತಿಸಿದ್ದಾರೆ.