Published
1 day agoon
By
Akkare Newsಪುತ್ತೂರು: ಬಿಲ್ಲವ ಸಮುದಾಯಕ್ಕೆ ಸೇರಿದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಹುತಾತ್ಮರಾದ ಉಪ್ಪಿನಂಗಡಿ ನಿವಾಸಿಯಾಗಿದ್ದ ಮಂಜ ಬೈದ್ಯ ಅವರ ಹೆಸರನ್ನು ಉಪ್ಪಿನಂಗಡಿ ಮುಖ್ಯ ರಸ್ತೆಗೆ ನಾಮಕರಣ ಮಾಡುವ ಮೂಲಕ ಅವರನ್ನು ಗೌರವಿಸಲಾಗುವುದು ಮತ್ತು ಗೆಜ್ಜೆಗಿರಿಯಲ್ಲಿ ಅವರ ಪ್ರತಿಮೆ ಅನಾವರಣ ನಡೆಯಲಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ೧೮೩೭ ಮೇ. ೨೭ ರಂದು ಮಂಜ ಬೈದ್ಯ ಅವರನ್ನು ಬ್ರಿಟೀಷರು ಗಲ್ಲಿಗೇರಿಸಿದ್ದರು. ಗಲ್ಲಿಗೇರಿಸಲ್ಪಟ್ಟ ಮಂಜ ಬೈದ್ಯರು ಕೊಳೆತು ಹೋಗುವ ತನಕ ಅವರನ್ನು ಗಲ್ಲುಗಂಬದಿಂದ ಇಳಿಸದೆ ಬ್ರಿಟೀಷರು ಕ್ರೌರ್ಯ ಮೆರೆದಿದ್ದರು.
ಯಾರು ಈ ಮಂಜ ಬೈದ್ಯ?
ನನ್ನೂರಿನ ಹೆಮ್ಮೆ ಮಂಜಬೈದ್ಯ ಬ್ರಿಟಿಷರ ವಿರುದ್ಧ ಹೋರಾಡಿ ಗಲ್ಲಿಗೇರಿ ೧೮೬ ವರ್ಷಗಳಾದವು. ಮಂಜಬೈದ್ಯನ ನೆನಪಿಗೆ ಒಂದು ರಸ್ತೆ, ಒಂದು ಪ್ರತಿಮೆ ಬಿಡಿ, ಒಂದು ಕಂಬವೂ ಇಲ್ಲ. ಕಲ್ಯಾಣಪ್ಪನ ಕಾಟುಕಾಯಿ ಎಂದು ವಾಡಿಕೆಯಲ್ಲಿ ಕರೆಯಲಾಗುವ ದಕ್ಷಿಣಕನ್ನಡದ ರೈತ ಬಂಡಾಯ ನಡೆದದ್ದು ೧೮೩೭ ರಲ್ಲಿ, ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ಇಪ್ಪತ್ತು ವರ್ಷಗಳಿಗೂ ಮುನ್ನ. ಬ್ರಿಟಿಷರು ಹೇರಿದ ಅಧಿಕ ಕಂದಾಯ,ಕಂದಾಯವನ್ನು ಹಣದ ರೂಪದಲ್ಲೇ ಕೊಡಬೇಕೆಂಬ ಆದೇಶ, ಬೆಳೆ ತೆರಿಗೆ ಈ ಬಂಡಾಯಕ್ಕೆ ಕಾರಣವಾಗಿತ್ತು. ಈ ಬಂಡಾಯದ ನಾಯಕರಲ್ಲೊಬ್ಬ ಕೆದಂಬಾಡಿ ರಾಮಗೌಡ. ಆ ಹೋರಾಟಗಾರನ ಪ್ರತಿಮೆ ಇಂದು ಅನಾವರಣವಾಗುತ್ತಿದೆ. ಈ ಹೊತ್ತಿನಲ್ಲಿ ಇದೇ ಸಂಗ್ರಾಮದಲ್ಲಿ ನನ್ನ ಉಪ್ಪಿನಂಗಡಿಯ ಮಂಜ ಬೈದ್ಯ ಅಗ್ರಣಿಯಾಗಿದ್ದ.ಇಂಗ್ಲಿಷ್ ಭಾಷೆ ಗೊತ್ತಿದ್ದ ಮಂಜ ಬೈದ್ಯ ಉಪ್ಪಿನಂಗಡಿಯಲ್ಲಿ ಖಜಾನೆ ಗುಮಾಸ್ತನಾಗಿದ್ದ. ಕಲ್ಯಾಣಪ್ಪನ ಸೈನ್ಯ ಬಂದ ಸುದ್ದಿ ಕೇಳಿದವನೇ ಉಪ್ಪಿನಂಗಡಿ ತಾಲೂಕು ಕಛೇರಿಯಲ್ಲಿದ್ದವರನ್ನೆಲ್ಲ ಬಂಧಿಸಿದ. ಖಜಾನೆಯ ಬೀಗ ಒಡೆದ. ಅಲ್ಲಿದ್ದ ಸೊತ್ತನ್ನು ಬಾಚಿ, ಸುಮಾರು ಐವತ್ತು ಮಂದಿ ದೇಶಭಕ್ತ ಯುವಕರೊಂದಿಗೆ ಪುತ್ತೂರಿಗೆ ಬಂದು ಕಲ್ಯಾಣಪ್ಪನ ಸೈನ್ಯ ಸೇರಿದ. ತಾನು ತಂದಿದ್ದ ಕಾಣಿಕೆಯನ್ನು ಕಲ್ಯಾಣ ಸ್ವಾಮಿಗೆ ಕೊಟ್ಟ.
ಅಲ್ಲಿಯ ತನಕ ದಂಡಿನ ಉಸ್ತುವಾರಿ ರಾಮಗೌಡನದ್ದೇ ಆಗಿತ್ತು. ಯಾವಾಗ ಇಂಗ್ಲೀಷ್ ಬಲ್ಲವನೂ, ಕಟ್ಟಾಳುವೂ, ವೀರನೂ ಆದ ಉಪ್ಪಿನಂಗಡಿ ಮಂಜ ಬೈದ್ಯ ಬಂದನೋ ಆತನನ್ನು ಉಪದಂಡನಾಯಕನನ್ನಾಗಿ ನೇಮಿಸಲಾಯಿತು. ಅಲ್ಲಿಗೆ ಕಲ್ಯಾಣಪ್ಪನ ದಂಡಿನ ಬಲ ನೂರ್ಮಡಿಯಾಯಿತು. ರಾಜನ ಪೋಷಾಕಿನಲ್ಲಿ ಕಲ್ಯಾಣಪ್ಪ, ದಂಡನಾಯಕರ ಪೋಷಾಕಿನಲ್ಲಿ ಮಂಜ ಬೈದ್ಯ ಮತ್ತು ರಾಮಗೌಡ ಕುದುರೆ ಏರಿದರು. ದಂಡು ಮುಂದೆ ಸಾಗಿತು. ೧೮೩೭ ಎಪ್ರಿಲ್ ೫ ರಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯನ್ನು ತಲುಪಿದ ಕ್ರಾಂತಿವೀರರು, ಬ್ರಿಟಿಷ್ ಧ್ವಜ ಇಳಿಸಿ,ಕ್ರಾಂತಿಕಾರಿ ಧ್ವಜ ಹಾರಿಸಿ,ಭಾರತಮಾತೆಗೆ ಜಯವಾಗಲಿ ಎಂದು ಜಯಘೋಷ ಮೊಳಗಿಸಿದರು. ಹದಿಮೂರು ದಿನಗಳ ಕಾಲ ದಕ್ಷಿಣಕನ್ನಡ ಬ್ರಿಟಿಷ್ ಮುಕ್ತವಾಗಿತ್ತು. ಮುಂದೆ ಈ “ಕೆನರಾ ದಂಗೆ”ಯನ್ನು ಬ್ರಿಟಿಷ್ ಸೇನೆ ಹತ್ತಿಕ್ಕಿತು. ಯುದ್ಧದಲ್ಲಿ ಹಲವರು ಮಡಿದರು.ಹಲವರು ಸೆರೆ ಸಿಕ್ಕರು.
ಬಂಧಿಸಲ್ಪಟ್ಟ ಹೋರಾಟಗಾರರಲ್ಲಿ ಉಪ್ಪಿನಂಗಡಿ ಮಂಜ ಬೈದ್ಯನೂ ಇದ್ದ. ಬ್ರಿಟಿಷ್ ಆಡಳಿತ ಕೋರ್ಟ್ ಮಾರ್ಷಲ್ ನಡೆಸಿ, ಉಪ್ಪಿನಂಗಡಿ ಮಂಜ ಬೈದ್ಯ, ಅಪ್ಪಯ್ಯ ಗೌಡ, ಕಲ್ಯಾಣಸ್ವಾಮಿ ಪುಟ್ಟಬಸಪ್ಪ, ನಂದಾವರ ಲಕ್ಷ್ಮಪ್ಪ ಬಂಗರಸರಿಗೆ ಗಲ್ಲು ಶಿಕ್ಷೆ ವಿಧಿಸಿತು.
೧೮೩೭ ಮೇ ೨೭ ರಂದು ಮಂಗಳೂರಿನಲ್ಲಿ ಉಪ್ಪಿನಂಗಡಿ ಮಂಜ ಬೈದ್ಯನನ್ನು ಬಹಿರಂಗವಾಗಿ ಗಲ್ಲಿಗೇರಿಸಲಾಯಿತು. ಆ ಶವ ಗಲ್ಲುಗಂಬದಲ್ಲೇ ಕೊಳೆತು ಬೀಳುವಂತೆ ನೋಡಿಕೊಳ್ಳಲಾಯಿತು.
ವಿದೇಶಿ ಆಡಳಿತದ ವಿರುದ್ಧ ದೇಶದಲ್ಲೇ ಮೊದಲ ಬಾರಿ ನಡೆದ ರೈತ ದಂಗೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸಾಕ್ಷಿಯಾಗಿದೆ. ಮೊದಲ ಸ್ವಾತಂತ್ರ್ಯ ಸಂಗ್ರಾಮ(೧೮೫೭)ಕ್ಕಿಂತಲೂ ಎರಡು ದಶಕಕ್ಕೂ ಮೊದಲೇಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಹೋರಾಟದ ಕಿಡಿ ಪ್ರಜ್ವಲಿಸಿತ್ತು.
ಈಗಿನ ಬೆಳ್ಳಾರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣ ಬದಿಯ ‘ಬಂಗ್ಲೆಗುಡ್ಡೆ’ಯಲ್ಲಿನ ಕೋಟೆಯ ಮೇಲೆ ಖಜಾನೆ ಇತ್ತು. ೧೮೩೭ರಲ್ಲಿ ರೈತ ದಂಗೆಯ ಮೂಲಕ ಬ್ರಿಟಿಷರಿಂದ ಈ ಖಜಾನೆಯನ್ನು ವಶಪಡಿಸಲಾಗಿದೆ. ಟಿಪ್ಪುವಿನ ಮರಣಾನಂತರ ಬೆಳ್ಳಾರೆ ಮಾಗಣೆ ೩೭ ಗ್ರಾಮಗಳು ದೊಡ್ಡವೀರ ರಾಜೇಂದ್ರರ ವಶಕ್ಕೆ ಬ್ರಿಟಿಷರು ನೀಡಿದ್ದರು. ಕೊಡಗಿನ ಕೊನೆಯ ಅರಸ ಚಿಕ್ಕವೀರ ರಾಜೇಂದ್ರನ ದುರಾಡಳಿತದಿಂದಾಗಿ ೧೮೩೪ರಲ್ಲಿ ಬ್ರಿಟಿಷರು ಅವರನ್ನು ಪದಚ್ಯುತಗೊಳಿಸಿ ಬೆಳ್ಳಾರೆ ಸೇರಿದಂತೆ ಸುಳ್ಯ, ಪಂಜ ಸೀಮೆಯ 110 ಗ್ರಾಮಗಳನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿಸಿದರು.ವಸ್ತು ರೂಪದಲ್ಲಿದ್ದ ಭೂಕಂದಾಯವನ್ನು ಬ್ರಿಟಿಷರು ನಗದು ರೂಪಕ್ಕೆ ಬದಲಾಯಿಸಿದರು. ಇದು ರೈತ ವಿರೋಧಿ ನೀತಿ ಆಗಿತ್ತು. ಇದರ ಪ್ರತಿಫಲವಾಗಿ ಹೋರಾಟ ನಡೆದಿದ್ದು, ಬ್ರಿಟಿಷರು ‘ಕಲ್ಯಾಣಪ್ಪನ ಕಾಟುಕಾಯಿ’ ಎಂದು ಕರೆದರು.ರೈತರೆಲ್ಲ ಕೆದಂಬಾಡಿ ರಾಮೇಗೌಡ, ಕೂಜುಗೋಡು ಮಲ್ಲಪ್ಪ ಗೌಡ ಮೊದಲಾದವರ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದರು. ಪುಟ್ಟ ಬಸಪ್ಪನೆಂಬ ಅವರನ್ನು ‘ಕಲ್ಯಾಣಸ್ವಾಮಿ’ ಎಂದು ಕರೆದು, ಈತ ಕೊಡಗಿನ ಅರಸರ ವಂಶದವನು ಎಂದು ಜನರನ್ನು ನಂಬಿಸಿದರು. ೧೮೩೭ರ ಮಾರ್ಚ್ ೩೦ರಂದು ಬೆಳ್ಳಾರೆಗೆ ಮುತ್ತಿಗೆ ಹಾಕಿದರು. ಮೊದಲಿಗೆ ಬೆಳ್ಳಾರೆ ಖಜಾನೆಯನ್ನು ವಶಪಡಿಸಿಕೊಂಡರು. ಬೆಳ್ಳಾರೆಯ ಕೋಟೆಯಲ್ಲಿ ಕಲ್ಯಾಣಸ್ವಾಮಿಗೆ ಪಟ್ಟ ಕಟ್ಟಿದರು. ಹುಲಿಕಡಿದ ನಂಜಯ್ಯ ಎಂಬಾತ ಈ ದಂಗೆಯ ಮಾಸ್ಟರ್ ಮೈಂಡ್ ಆಗಿದ್ದರು.ಇದು ಅಮರ ಮತ್ತು ಸುಳ್ಯ ಸೀಮೆಗಳ ರೈತರು ಬ್ರಿಟಿಷರ ಕಂದಾಯ ವ್ಯವಸ್ಥೆಯ ವಿರುದ್ಧ ನಡೆಸಿದ ಬಂಡಾಯ. ಪಾಲ್ಗೊಂಡ ಪ್ರಮುಖರಲ್ಲಿ ಸ್ವಾಮಿ ಅಪರಂಪರ, ಕಲ್ಯಾಣಸ್ವಾಮಿ, ಪುಟ್ಟಬಸವ, ಹುಲಿಕಡಿದ ನಂಜಯ್ಯ, ಕೆದಂಬಾಡಿ ರಾಮ ಗೌಡ, ಗುಡ್ಡೆಮನೆ ಅಪ್ಪಯ್ಯ ಮತ್ತು ತಮ್ಮಯ್ಯ, ಕೂಜುಗೋಡು ಮಲ್ಲಪ್ಪ ಮತ್ತು ಅಪ್ಪಯ್ಯ, ಪೆರಾಜೆ ಊಕಣ್ಣ ಮತ್ತು ವೀರಣ್ಣ ಬಂಟ, ಚೆಟ್ಟಿ ಮತ್ತು ಕರ್ತು ಕುಡಿಯ, ಕುಂಚಡ್ಕ ತಿಮ್ಮ ಮತ್ತು ಕುಡೆಕಲ್ಲು ಪುಟ್ಟ, ಅಟ್ಲೂರು ರಾಮಪ್ಪಯ್ಯ ಮೊದಲಾದವರು ಇದ್ದರು. ಹೀಗಾಗಿ ಇದನ್ನು ಅಮರ ಸುಳ್ಯ ಕ್ರಾಂತಿ ಎಂದೂ ಕರೆಯುತ್ತಾರೆ.
ರೈತರು ಬೆಳ್ಳಾರೆಯಿಂದ ಮಂಗಳೂರುವರೆಗೆ ಸಾಗಿ ೧೮೩೭ ಏಪ್ರಿಲ್ ೫ರಂದು ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಕ್ರಾಂತಿ ಧ್ವಜವನ್ನು ಹಾರಿಸಿ ವಸಾಹತುಶಾಹಿ ಆಡಳಿತವನ್ನು ಕೊನೆಗಾಣಿಸಿದರು. ಸುಳ್ಯದಲ್ಲಿ ಕೆಲವೇ ಜನರಿಂದ ಆರಂಭಗೊಂಡ ಹೋರಾಟ ಮಂಗಳೂರು ತಲುಪುವಾಗ ಸಾವಿರರಾರು ಜನ ಸೇರಿಕೊಂಡಿದ್ದರು.
ಆದರೆ, ೧೩ ದಿನಗಳ ಬಳಿಕ ಮುಂಬೈ- ಕಣ್ಣನೂರುಗಳಿಂದ ಬಂದ ಬೃಹತ್ ಬ್ರಿಟಿಷ್ ಪಡೆಯನ್ನು ಎದುರಿಸಲಾಗದೆ ಸೋತು ಹೋದರು. ದಂಗೆಯ ನಾಯಕರುಗಳನ್ನು ಗಲ್ಲು ಶಿಕ್ಷೆ ಅಥವಾ ಕಠಿಣ ಶಿಕ್ಷೆಗೆ ಗುರಿಪಡಿಸಲಾಯಿತು.