Connect with us

ಸ್ಥಳೀಯ

ಮಂಗಳೂರು: ಗುತ್ತಿಗೆ ಸಂಸ್ಥೆ ವ್ಯಾಜ್ಯ ಲೋಕ್ ಅದಾಲತ್‌ನಲ್ಲಿ ಇತ್ಯರ್ಥ

Published

on

ದಕ್ಷಿಣ ಕನ್ನಡ ಜಿಲ್ಲೆಯ ನಿರ್ಮಿತಿ ಕೇಂದ್ರ ಹಾಗೂ ಗುತ್ತಿಗೆ ಸಂಸ್ಥೆಯೊಂದರ ನಡುವಿನ ವ್ಯಾಜ್ಯ ಇಲ್ಲಿನ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಇತ್ಯರ್ಥಗೊಂಡಿತು. ಬಿಲ್‌ ಬಾಕಿ ವಿಚಾರದಲ್ಲಿ ದಾವೆ ಹೂಡಿದ್ದ ಗುತ್ತಿಗೆದಾರ ಸಂಸ್ಥೆಗೆ ₹ 1.83 ಕೋಟಿಯ ಚೆಕ್ ಅನ್ನು ಹಸ್ತಾಂತರಿಸುವ ಮೂಲಕ ವ್ಯಾಜ್ಯವನ್ನು ಸಂಧಾನದ ಮೂಲಕ ಬಗೆಹರಿಸಲಾಯಿತು.
ಲೇಡಿಗೋಷನ್ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಎಂಆರ್‌ಪಿಎಲ್‌ ಸಂಸ್ಥೆ ಕಾರ್ಪೊರೇಟ್ ಸಮಾಜಿಕ ಹೊಣೆಗಾರಿಕೆ ನಿಧಿಯಡಿ ₹ 21 ಕೋಟಿ ಅನುದಾನ ಮಂಜೂರು ಮಾಡಿತ್ತು. ಅನುದಾನವನ್ನು ಎಂಆರ್‌ಪಿಎಲ್‌ ಮುಂಗಡ ನೀಡದ ಕಾರಣ ನಿರ್ಮಿತಿ ಕೇಂದ್ರದ ಮೂಲಕ ಕಾಮಗಾರಿ ನಡೆಸಲು ಅಂದಿನ ಜಿಲ್ಲಾ ಮಟ್ಟದ ಸಮಿತಿ ನಿರ್ಧರಿಸಿತ್ತು. ಟೆಂಡರ್ ಮೂಲಕ ಗುತ್ತಿಗೆ ಸಂಸ್ಥೆಯನ್ನು ಆಯ್ಕೆ ಮಾಡಲಾಗಿತ್ತು.

 

ಕಟ್ಟಡ ಕಾಮಗಾರಿಯನ್ನು ಆರಂಭಿಸಿದ್ದ ಗುತ್ತಿಗೆ ಸಂಸ್ಥೆ, ಅದನ್ನು ಮೂರು ವರ್ಷ ಕಳೆದರೂ ಪೂರ್ಣಗೊಳಿಸಲಿಲ್ಲ. ಕಾಮಗಾರಿ ವಿಳಂಬವಾಗಿದ್ದರಿಂದ ಆ ಗುತ್ತಿಗೆ ದಾರರ ಬದಲು ಬೇರೊಂದು ಗುತ್ತಿಗೆ ಸಂಸ್ಥೆ ಮೂಲಕ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿತ್ತು. ಮೂಲ ಗುತ್ತಿಗೆದಾರ ಸಂಸ್ಥೆಗೆ ₹ 1.77 ಕೋಟಿ ದಂಡ ವಿಧಿಸಿ ಬಿಲ್‌ ಪಾವತಿಸಲಾಗಿತ್ತು. ಇದನ್ನು ಗುತ್ತಿಗೆದಾರ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಗುತ್ತಿಗೆದಾರ ಸಂಸ್ಥೆಗೆ ಬಾಕಿ ಹಣವನ್ನು ಬಡ್ಡಿ ಸಮೇತ (ಸುಮಾರು ₹ 4 ಕೋಟಿ) ನೀಡಬೇಕು ಎಂದು ನ್ಯಾಯಾಲಯ ಆದೇಶ ಮಾಡಿತ್ತು. ಬಡ್ಡಿ ನೀಡಲು ಹಣವಿಲ್ಲ ಎಂದು ನಿರ್ಮಿತಿ ಕೇಂದ್ರವು ನ್ಯಾಯಾಲಯದ ಮೊರೆ ಹೋಗಿತ್ತು, 1996ರ ಮಧ್ಯಸ್ಥಿಕೆ ಮತ್ತು ಸಂಧಾನ ಕಾಯ್ದೆಯ ಸೆಕ್ಷನ್‌ 34ರ ಅಡಿ ಪ್ರಕರಣವನ್ನು ಇತ್ಯರ್ಥವಾಯಿತು.

 

ಎರಡೂ ಕಡೆಯವರು ರಾಜೀ ಸಂಧಾನಕ್ಕೆ ಒಪ್ಪಿದ್ದು, ಪ್ರಕರಣ ಬಗೆಹರಿದೆ. ಸರ್ಕಾರದ ಹಣವೂ ಉಳಿತಾಯವಾಗಿದೆ. ಲೋಕ್ ಅದಾಲತ್‌ನಲ್ಲಿ ಇತ್ಯರ್ಥಗೊಂಡ ವಿಶೇಷ ಪ್ರಕರಣವಿದು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಬಸವರಾಜ ಅವರು ಸುದ್ದಿಗಾರರಿಗೆ ತಿಳಿಸಿದರು.

‘ಗುತ್ತಿಗೆದಾರರಿಗೆ ಸುಮಾರು ₹4 ಕೋಟಿಯನ್ನು ನಿರ್ಮಿತಿ ಕೇಂದ್ರದವರು ನೀಡಬೇಕಿತ್ತು. ಅಂತಿಮವಾಗೊ ತೆರಿಗೆ ಕಳೆದು ₹1.83 ಕೋಟಿಯ ಚೆಕ್‌ ಅನ್ನು ಗುತ್ತಿಗೆದಾರರಿಗೆ ನಿರ್ಮಿತಿ ಕೇಂದ್ರದವರು ಹಸ್ತಾಂತರಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರೂ ಸಂಧಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ’ ಎಂದು ನಾಲ್ಕನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಶ್ರೀಧರ್ ಗೋಪಾಲಕೃಷ್ಣ ಭಟ್ ತಿಳಿಸಿದರು.


ನಗರದ ಸಂಸ್ಥೆಯೊಂದರ ಟ್ರೇಡ್ ಮಾರ್ಕ್‌ ಬಳಕೆಗೆ ಸಂಬಂಧಿಸಿ, ಕುಟುಂಬದ ಸದಸ್ಯರ ನಡುವಿನ ವಿವಾದವೂ ಲೋಕ್ ಅದಾಲತ್‌ನಲ್ಲಿ ಇತ್ಯರ್ಥಗೊಂಡಿತು.

ಚೆಕ್ ಬೌನ್ಸ್ ಪ್ರಕರಣ, ಅಪಘಾತ ವಿಮೆ ಪ್ರಕರಣ ಸೇರಿದಂತೆ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಮೂಡುಬಿದಿರೆ ಹಾಗೂ ಸುಳ್ಯ ನ್ಯಾಯಾಲಯಗಳ ಆವರಣದಲ್ಲಿ ರಾಜಿ ಮಾಡಬಹುದಾದ ಸುಮಾರು 4 ಸಾವಿರದಷ್ಟು ಪ್ರಕರಣಗಳು ಲೋಕ ಅದಾಲತ್‌ ಮುಂದಿದ್ದವು. ಅವುಗಳಲ್ಲಿ ಸುಮಾರು 3200 ಪ್ರಕರಣಗಳನ್ನು ವಿಲೇ ಮಾಡಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿರುವ ನ್ಯಾಯಾ ಧೀಶರಾದ ಜೈಬುನ್ನಿಸಾ  ತಿಳಿಸಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement