Published
1 hour agoon
By
Akkare News
ಮಂಗಳೂರು:- ರಾಜ್ಯ ಸರ್ಕಾರದ ಮುಂದಿನ ಸಚಿವ ಸಂಪುಟ ಸಭೆಯನ್ನು ಕರಾವಳಿಯ ರಾಜಧಾನಿಯಾದ ಮಂಗಳೂರಿನಲ್ಲಿ ನಡೆಸಲು ಕರ್ನಾಟಕದ ಮುಖ್ಯಮಂತ್ರಿಗಳಾದ ಗೌರವಾನ್ವಿತ ಡಿ.ಕೆ. ಶಿವಕುಮಾರ್ ಅವರು ತೆಗೆದುಕೊಂಡಿರುವ ನಿರ್ಧಾರವನ್ನು ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಸ್ವಾಗತಿಸಿದ್ದಾರೆ. ಆಡಳಿತ ಯಂತ್ರವನ್ನು ಜನಸಾಮಾನ್ಯರ ಬಾಗಿಲಿಗೆ ತಲುಪಿಸುವ ಈ ಕ್ರಮವು, ಪ್ರಾದೇಶಿಕ ಅಸಮತೋಲನವನ್ನು ನಿವಾರಿಸುವ ದಿಕ್ಕಿನಲ್ಲಿ ಒಂದು ಧನಾತ್ಮಕ ಹೆಜ್ಜೆಯಾಗಲಿ ಎಂದು ಅವರು ಹಾರೈಸಿದ್ದಾರೆ.
ಮುಖ್ಯಮಂತ್ರಿಗಳ ನೇತೃತ್ವದ ಈ ಮಹತ್ವದ ಸಂಪುಟ ಸಭೆಯು ಕೇವಲ ಔಪಚಾರಿಕ ಸಭೆಯಾಗದೆ, ಈ ಭಾಗದ ಜನರ ಬಹುಕಾಲದ ಬೇಡಿಕೆಗಳನ್ನು ಈಡೇರಿಸುವ ವೇದಿಕೆಯಾಗಲಿ ಎಂದು ನಾವು ಆಶಿಸುತ್ತೇವೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕುರಿತಂತೆ ಕಳೆದ ಹಲವು ವರ್ಷಗಳಿಂದ ಸರ್ಕಾರಗಳು ತೋರುತ್ತಿರುವ ಮಲತಾಯಿ ಧೋರಣೆಯು ಕರಾವಳಿಯ ಜನತೆಯಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಈ ಹಿಂದೆ ಜಿಲ್ಲೆಯ ಇಬ್ಬರು ನಾಯಕರು ಮುಖ್ಯಮಂತ್ರಿಗಳಾಗಿದ್ದರೂ, ಜಿಲ್ಲೆಯ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿಯೇ ಉಳಿದಿರುವುದು ದುರದೃಷ್ಟಕರ ಎಂದಿದ್ದಾರೆ. ಮಂಗಳೂರಿನಲ್ಲಿ ಆಯೋಜಿಸಲಿರುವ ಸಂಪುಟ ಸಭೆಯು ಕೇವಲ ಔಪಚಾರಿಕವಾಗದೆ, ಕರಾವಳಿಯ ವಿಶೇಷ ಪರಿಗಣನೆಗೆ ಅಡಿಗಲ್ಲು ಹಾಕುವ ಗಂಭೀರ ಸಭೆಯಾಗಬೇಕು ಮತ್ತು ಕರಾವಳಿಯ ಜನರ ಭವಿಷ್ಯ ರೂಪಿಸುವ ತೀರ್ಮಾನಗಳನ್ನು ಕೈಗೊಳ್ಳಬೇಕು ಎಂದು ಪಕ್ಷವು ಆಗ್ರಹಿಸುತ್ತದೆ.

ರಸ್ತೆ ಅಭಿವೃದ್ಧಿ: ಜಿಲ್ಲೆಯ ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ಮರಣಮೂಲಗಳಾಗಿ ಪರಿಣಮಿಸಿವೆ. ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ಅವ್ಯವಸ್ಥೆ ಮತ್ತು ಗ್ರಾಮೀಣ ಸಂಪರ್ಕ ರಸ್ತೆಗಳ ದುಸ್ಥಿತಿಯಿಂದ ಜನಸಾಮಾನ್ಯರು ಅನುಭವಿಸುತ್ತಿರುವ ಸಂಕಷ್ಟಗಳಿಗೆ ಈ ಸಭೆಯಲ್ಲಿ ಶಾಶ್ವತ ಪರಿಹಾರ ಸಿಗಬೇಕು. ವೈಜ್ಞಾನಿಕ ರಸ್ತೆ ನಿರ್ಮಾಣ ಮತ್ತು ತುರ್ತು ದುರಸ್ತಿಗೆ ಸರ್ಕಾರ ತಕ್ಷಣವೇ ಆದ್ಯತೆ ನೀಡಬೇಕು. ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪನೆ: ಕರಾವಳಿಯ ಜನಸಂಖ್ಯೆಯಲ್ಲಿ ಸುಮಾರು ನಲವತ್ತು ಶೇಕಡಾ ಹಾಗೂ ಜಗತ್ತಿನಾದ್ಯಂತ ಸುಮಾರು ಇಪ್ಪತ್ತು ಲಕ್ಷ ಜನಸಂಖ್ಯೆ ಇರುವ ಬ್ಯಾರಿ ಜನಾಂಗದ ಬಹುಕಾಲದ ಬೇಡಿಕೆಯಾದ ‘ಬ್ಯಾರಿ ಅಭಿವೃದ್ಧಿ ನಿಗಮ’ ಸ್ಥಾಪನೆ ಬಗ್ಗೆ ಸದ್ರಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಕಾರ್ಯರೂಪಕ್ಕೆ ತರಬೇಕು. ಆ ಮೂಲಕ ಬ್ಯಾರಿ ಜನಾಂಗದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯನ್ನು ಮೇಲೇತ್ತಲು ಸರ್ಕಾರ ಪ್ರಯತ್ನಿಸಬೇಕು. 

ಸಂಪನ್ಮೂಲ ಮತ್ತು ಉದ್ಯೋಗ ಸೃಷ್ಟಿ:
ಕೆಂಪು ಕಲ್ಲು ಮತ್ತು ಮರಳು ನೀತಿಯಲ್ಲಿನ ಗೊಂದಲಗಳನ್ನು ನಿವಾರಿಸಬೇಕು. ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯಾಗುವ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳೂರಿನಲ್ಲಿ ಸಭೆ ನಡೆಸುವ ಮೂಲಕ ಕರಾವಳಿಯ ನಾಡಿಮಿಡಿತವನ್ನು ಅರ್ಥಮಾಡಿಕೊಂಡು, ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯವಿರುವ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ ಎಂಬುದು ಜಿಲ್ಲೆಯ ಜನರ ವಿಶ್ವಾಸವಾಗಿದೆ. ಈ ಅವಕಾಶವನ್ನು ಬಳಸಿಕೊಂಡು ಕರಾವಳಿಯ ಸಮಗ್ರ ಅಭಿವೃದ್ಧಿಗೆ ಸರ್ಕಾರವು ಬದ್ಧತೆಯನ್ನು ಪ್ರದರ್ಶಿಸಲಿ ಎಂದು ಅನ್ವರ್ ಸಾದತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


