Published
49 minutes agoon
By
Akkare News
ಬೆಂಗಳೂರಿನ ಕೆಂಗೇರಿ ನಿವಾಸಿ ಮಹಮ್ಮದ್ ಅಮೀರ್ ಜರ್ತಾಬ್ (35) ಬಂಧಿತ ಆರೋಪಿ.
ರಾತ್ರಿ ವೇಳೆ ಬಂಟ್ವಾಳ ಗ್ರಾಮಾಂತರ ಉಪನಿರೀಕ್ಷಕ ಮಂಜುನಾಥ ಟಿ, ಯವರು ಹಾಸನ ಕಡೆಯಿಂದ ಮಂಗಳೂರು ಕಡೆಗೆ ಮಾದಕವಸ್ತು ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಬಂದ ಮೇರೆಗೆ, ಸಿಬ್ಬಂದಿಗಳೊಂದಿಗೆ ಅಮೈಯಲ್ಲಿ ತಡರಾತ್ರಿ ಕಾರ್ಯಚರಣೆ ನಡೆಸಿ ಕಾರೊಂದನ್ನು ತಡೆದು ಪರಿಶೀಲನೆ ನಡೆಸಿದಾಗ ಮಾದಕ ವಸ್ತುಗಳನ್ನು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕಾರಿನಲ್ಲಿ ಒಟ್ಟು 538.63 ಗ್ರಾಂ ಎಂಡಿಎಂಎ ಮತ್ತು 99.12 ಗ್ರಾಂ ಕೊಕೈನ್ ಹಾಗೂ ಖಾಲಿ ಪ್ಲಾಸ್ಟಿಕ್ ಡಬ್ಬಿಗಳು, ಡಿಜಿಟಲ್ ತೂಕದ ಯಂತ್ರ, ಸೇರಿದಂತೆ ಇತರೆ ಸೊತ್ತುಗಳು ಪತ್ತೆಯಾಗಿದೆ. ಅವುಗಳನ್ನು ವಶಕ್ಕೆ ಪಡೆಯಲಾಗಿದ್ದು ಎಂಡಿಎಂಎ ಅಂದಾಜು ಮೌಲ್ಯ ರೂ. 53,86,300 ಹಾಗೂ ಕೊಕೈನ್ ಅಂದಾಜು ಮೌಲ್ಯ 49,56,000 ಆಗಿದ್ದು, ಇತರೆ ವಶಪಡಿಸಿಕೊಂಡ ಸ್ವತ್ತುಗಳ ಮೌಲ್ಯ ಸೇರಿದಂತೆ ಒಟ್ಟು ಅಂದಾಜು 1,05,59,450 ಆಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಡ್ರಗ್ಸ್ ಜಾಲದ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಅಗತ್ಯ: ಶಾಸಕ ರಾಜೇಶ್ ನಾಯ್ಕ್ ಬಂಟ್ವಾಳ ಗ್ರಾಮಾಂತರ ಪೊಲೀಸರು ನಡೆಸಿದ ದಿಟ್ಟ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಮಾದಕವಸ್ತು ವಶಪಡಿಸಿಕೊಂಡಿರುವುದು ಶ್ಲಾಘನೀಯ. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ರಾಜೇಶ್ ನಾಯ್ಕ್ ತಿಳಿಸಿದ್ದಾರೆ.
ಯುವಜನತೆಯ ಭವಿಷ್ಯವನ್ನು ಹಾಳುಮಾಡುವ ಡ್ರಗ್ಸ್ ಜಾಲದ ವಿರುದ್ಧ ಯಾವುದೇ ರಾಜಿ ಇರಬಾರದು. ಈ ಪ್ರಕರಣದ ಕುರಿತು ಇನ್ನಷ್ಟು ಆಳವಾದ ತನಿಖೆ ನಡೆಸಿ, ಇದರ ಹಿಂದೆ ಇರುವ ಸಂಪೂರ್ಣ ಜಾಲವನ್ನು ಪತ್ತೆಹಚ್ಚಿ, ಕಾನೂನುಬದ್ಧವಾಗಿ ಸಂಬಂಧಪಟ್ಟ ಪ್ರತಿಯೊಬ್ಬರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು. ಮಾದಕ ವಸ್ತುಗಳ ಮೂಲ, ಪೂರೈಕೆದಾರರು ಹಾಗೂ ಜಾಲದೊಂದಿಗೆ ಸಂಪರ್ಕ ಹೊಂದಿರುವ ಎಲ್ಲರನ್ನು ತನಿಖೆಯ ವ್ಯಾಪ್ತಿಗೆ ತಂದು, ಡ್ರಗ್ಸ್ ಮುಕ್ತ ಸಮಾಜದ ನಿರ್ಮಾಣಕ್ಕೆ ಪೊಲೀಸ್ ಇಲಾಖೆ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿ ಎಂದು ರಾಜೇಶ್ ನಾಯ್ಕ್ ತಿಳಿಸಿದ್ದಾರೆ.



