Connect with us

ಇತರ

ಇಂದು ರಾತ್ರಿಯಿಂದಲೇ 108 ಆ್ಯಂಬುಲೆನ್ಸ್ ಬಂದ್ ಆಗುತ್ತಾ? ತುರ್ತು ಚಿಕಿತ್ಸೆಗೆ ಹೋಗುವ ರೋಗಿಗಳಿಗೆ ಎದುರಾಯ್ತು ಆತಂಕ!

Published

on

ಬೆಂಗಳೂರು (ಸೆ.22): ವೇತನ ಪರಿಷ್ಕರಣೆ ಸೇರಿ ತಮ್ಮ ವಿವಿಧ ಬೇಡಿಕೆಗಳನ್ನು ಮಂಗಳವಾರ ರಾತ್ರಿ 8 ಗಂಟೆಯೊಳಗೆ ಈಡೇರಿಸದಿದ್ದರೆ ಎಸ್ಮಾ ಸೇರಿ ಯಾವ ಕ್ರಮವನ್ನೂ ಲೆಕ್ಕಿಸದೆ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಆರೋಗ್ಯ ಕವಚ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ 108 ಆ್ಯಂಬುಲೆನ್ಸ್‌ ನೌಕರರು ಎಚ್ಚರಿಕೆ ನೀಡಿದ್ದಾರೆ.

108 ಆ್ಯಂಬುಲೆನ್ಸ್ ನೌಕರರು ಸಾಮೂಹಿಕ ರಾಜೀನಾಮೆ ನೀಡಿದರೆ ಮುಂದೇನು?

ಒಂದೊಮ್ಮೆ ಆರೋಗ್ಯ ಕವಚ ನೌಕರರು ಸಾಮೂಹಿಕ ರಾಜೀನಾಮೆ ನೀಡಿದರೆ ಮಂಗಳವಾರ ರಾತ್ರಿಯಿಂದ 108 ಆ್ಯಂಬುಲೆನ್ಸ್‌ ಸೇವೆಯಲ್ಲಿ ತೀವ್ರ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದೆ.
.
ವೇತನ ಪರಿಷ್ಕರಣೆ, ದೈನಂದಿನ ಕರ್ತವ್ಯದ ವೇಳಾಪಟ್ಟಿ ಬದಲಾವಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಕ್ಕೆ 15 ದಿನಗಳ ಗಡುವು ನೀಡಲಾಗಿತ್ತು. ಸರ್ಕಾರಕ್ಕೆ ನೀಡಿದ್ದ ಗಡುವು ಸೆ.21ಕ್ಕೆ ಮುಗಿದಿದ್ದು, ಮಂಗಳವಾರ ರಾತ್ರಿ 8 ಗಂಟೆಯೊಳಗೆ ಬೇಡಿಕೆ ಈಡೇರಿಸದಿದ್ದರೆ ಸಾಮೂಹಿಕ ರಾಜಿನಾಮೆ ನೀಡುವುದಾಗಿ ಕರ್ನಾಟಕ ರಾಜ್ಯ ಆರೋಗ್ಯ ಕವಚ (108) ನೌಕರರ ಸಂಘದ ಅಧ್ಯಕ್ಷ ಪರಮಶಿವಯ್ಯ ಹೇಳಿದ್ದಾರೆ.
ಸೋಮವಾರ ಆರೋಗ್ಯ ಸಚಿವ ಯು.ಟಿ.ಖಾದರ್ ಹಾಗೂ ಜವಿಕೆ ಇಎಂಆರ್‌ಯ ಕಂಪನಿಗೆ ಮುಖ್ಯಸ್ಥರನ್ನು ಭೇಟಿ ಮಾಡಿದ ಪರಮಶಿವಯ್ಯ ನೇತೃತ್ವದ ನಿಯೋಗವು ನೌಕರರ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಪರಮಶಿವಯ್ಯ, ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿವಿಕೆ ಇಎಂಆರ್‌ಯ ಕಂಪನಿಗೆ ಮನವಿ ಸಲ್ಲಿಸಿ 15 ದಿನಗಳು ಕಳೆದಿವೆ. ಆದರೆ ಕಂಪನಿಯು ವೇತನ ಹೆಚ್ಚಿಸುವುದಿಲ್ಲ, ನೌಕರಿಗೆ ಗೈರಾಗುವುದನ್ನು ತಡೆಯಲು ಎಸ್ಮಾ ಜಾರಿಗೊಳಿಸಿ ಕ್ರಮ ವಹಿಸುತ್ತೇವೆ ಎಂದು ಹೇಳುತ್ತಿದೆ. 30 ಸಾವಿರ ರು. ಇದ್ದ ವೇತನವನ್ನು ಪಾಳಿಯ ಹೆಸರಿನಲ್ಲಿ 12-15 ಸಾವಿರ ರು.ಗೆ ಇಳಿಸಿ ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆ ಬರಬೇಕು ಎಂದು ಹೇಳುತ್ತಿದ್ದಾರೆ. ನೌಕರರೇನು ಇಲ್ಲಿ ಜೀತಕ್ಕೆ ಬಂದಿಲ್ಲ. ಹೀಗಾಗಿ ಕಠಿಣ ನಿರ್ಧಾರಕ್ಕೆ ಬಂದಿದ್ದೇವೆ ಎಂದರು.

ರಾಜ್ಯದಲ್ಲಿ 3,200 ‘108 ಆ್ಯಂಬುಲೆನ್ಸ್’ ಸಿಬ್ಬಂದಿ:

ರಾಜ್ಯದಲ್ಲಿ 108 ರಲ್ಲಿ ಚಾಲಕರು, ಸ್ಟಾಫ್ ನರ್ಸ್ ಸೇರಿ 3200 ಸಿಬ್ಬಂದಿ ಇದ್ದು, ಎಲ್ಲರೂ ರಾಜೀನಾಮೆ ನೀಡಿ ಪರ್ಯಾಯ ಕೆಲಸ ನೋಡಿಕೊಳ್ಳುತ್ತೇವೆ. 108 ಆಂಬ್ಯುಲೆನ್ಸ್ ಇಲ್ಲದೆ ಸಾರ್ವಜನಿಕರಿಗೆ ತೊಂದರೆಯಾದರೆ ನಾವು ಜವಾಬ್ದಾರರಲ್ಲ. ಬದಲಿಗೆ ಗುತ್ತಿಗೆ ವಹಿಸಿಕೊಂಡಿರುವ ಜಿವಿಕೆ ಇಎಂಆರ್‌ಯ ಕಂಪನಿ ಹಾಗೂ ಸರ್ಕಾರವೇ ಹೊಣೆಯಾಗಲಿದೆ ಎಂದು ಹೇಳಿದರು.

108 ಆ್ಯಂಬುಲೆನ್ಸ್ ಸಿಬ್ಬಂದಿ ಬೇಡಿಕೆಗಳೇನು?:

2017 ರಿಂದ 2022ರವರೆಗೆ ಯಾವುದೇ ವೇತನ ಹೆಚ್ಚಳ ಆಗಿಲ್ಲ. ಹೀಗಾಗಿ ಪ್ರತಿ ವರ್ಷ 108 ಆ್ಯಂಬುಲೆನ್ಸ್ ನೌಕರರ ವೇತನ ಪರಿಷ್ಕರಣೆ ಮಾಡಬೇಕು, 3 ಪಾಳಿಯಲ್ಲಿ ಆ್ಯಂಬುಲೆನ್ಸ್​ ವಾಹನದ ಸೌಕರ್ಯ ಮಾಡಬೇಕು. ⁠ವಲಯವಾರು ವಿಂಗಡಣೆ ಮಾಡಿ ನಿಗದಿ ಮಾಡಿರೋ ವೇತನ ರದ್ದು ಪಡಿಸಿ ಏಕರೂಪ ವಲಯವಾಗಿ ಬದಲಾವಣೆ ಮಾಡಬೇಕು. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 50 ಲಕ್ಷ ರು. ಪರಿಹಾರ, ಜೇಷ್ಠತೆ ಆಧಾರದ ಮೇಲೆ ಸಿಬ್ಬಂದಿಗೆ ವೇತನ ನಿಗದಿ ಮಾಡಬೇಕು.ಕಾರ್ಮಿಕ ಇಲಾಖೆ ಪ್ರಕಾರ ಪ್ರತಿ ತಿಂಗಳು 7ರ ಒಳಗೆ ವೇತನ ನೀಡಬೇಕು. ಎಲ್ಲಾ ಕೆಲಸದ ಸ್ಥಳಗಳಲ್ಲಿ ಕಾರ್ಮಿಕರಿಗೆ ಶೌಚಾಲಯ, ವಿಶ್ರಾಂತಿ ಕೊಠಡಿ, ಆ್ಯಂಬುಲೆನ್ಸ್ ಸ್ವಚ್ಛಗೊಳಿಸಲು ನೀರಿನ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement