Connect with us

ಇತರ

ಕಾರ್ತಿಕ್ ಸುವರ್ಣ ಮೇರ್ಲ ಕೊಲೆ ಪ್ರಕರಣ: ಇಬ್ಬರಿಗೆ ಜೀವಾವಧಿ ಶಿಕ್ಷೆತಲಾ ₹3 ಲಕ್ಷ ದಂಡ; ₹5.90 ಲಕ್ಷ ಪರಿಹಾರ ಮೃತರ ತಾಯಿಗೆ ನೀಡಲು ಆದೇಶ

Published

on

ಪುತ್ತೂರು, ಸೆ.22: ಹಿಂದೂ ಜಾಗರಣ ವೇದಿಕೆಯ ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿದ್ದ ಕಾರ್ತಿಕ್ ಸುವರ್ಣ ಮೇರ್ಲ (27) ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.ಅಲ್ಲದೆ ಇಬ್ಬರಿಗೂ ತಲಾ ₹3 ಲಕ್ಷ ದಂಡ ವಿಧಿಸಲಾಗಿದ್ದು, ಸಂಗ್ರಹವಾಗುವ ದಂಡದ ಮೊತ್ತದಲ್ಲಿ ₹5.90 ಲಕ್ಷವನ್ನು ಮೃತ ಕಾರ್ತಿಕ್ ಅವರ ತಾಯಿ ಹೇಮಾವತಿ ಅವರಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಮತ್ತೊಬ್ಬ ಆರೋಪಿ ಮಂಗಳೂರಿನ ಅತ್ತಾವರದ ಸ್ಟೀವನ್ ಮೊಂತೆರೊ ವಿರುದ್ಧ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿದೆ. ಪ್ರಕರಣದಲ್ಲಿ ಕಿರಣ್ ರೈ ಅವರ ಸಹೋದರ ಚರಣ್ ರಾಜ್ ರೈ ಕೂಡ ಆರೋಪಿಯಾಗಿದ್ದು, ವಿಚಾರಣೆ ವೇಳೆ ಜಾಮೀನಿನಲ್ಲಿದ್ದ ಅವರು 2022ರಲ್ಲಿ ಹತ್ಯೆಯಾಗಿದ್ದರು.
.
ಯಕ್ಷಗಾನ ವೀಕ್ಷಿಸುತ್ತಿದ್ದ ವೇಳೆ ಕೊಲೆಕಾರ್ತಿಕ್ ಅವರು ಗಣೇಶೋತ್ಸವದ ಅಂಗವಾಗಿ ಸೆ.3ರಂದು ರಾತ್ರಿ ಸಂಪ್ಯದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶೋಭಾಯಾತ್ರೆಯ ಬಳಿಕ ಗಣೇಶೋತ್ಸವದ ಪೆಂಡಾಲ್ ಬಳಿ ನಡೆಯುತ್ತಿದ್ದ ಯಕ್ಷಗಾನ ವೀಕ್ಷಿಸುತ್ತಿದ್ದ ವೇಳೆ ಆರೋಪಿಗಳಾದ ಚರಣ್ ರಾಜ್ ರೈ, ಕಿರಣ್ ರೈ ಹಾಗೂ ಅವರ ವಾಹನ ಚಾಲಕ ಪ್ರೀತೇಶ್ ಶೆಟ್ಟಿ ಅಲ್ಲಿಗೆ ಬಂದಿದ್ದರು.ಯಾವುದೋ ವಿಚಾರಕ್ಕೆ ಸಂಬಂಧಿಸಿ ಕಾರ್ತಿಕ್ ಹಾಗೂ ಆರೋಪಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಅದು ವಿಕೋಪಕ್ಕೆ ತಿರುಗಿತ್ತು. 
ಚರಣ್ ರಾಜ್ ರೈ ಹಾಗೂ ಕಿರಣ್ ರೈ ಕಾರ್ತಿಕ್ ಅವರ ಕೈಗಳನ್ನು ಹಿಡಿದಿದ್ದ ವೇಳೆ ಪ್ರೀತೇಶ್ ಶೆಟ್ಟಿ ಹರಿತವಾದ ಆಯುಧದಿಂದ ಕಾರ್ತಿಕ್ ಅವರ ಎದೆಯ ಕೆಳಭಾಗಕ್ಕೆ ಇರಿದಿದ್ದಾನೆ ಎಂದು ಪೊಲೀಸರು ತನಿಖೆಯಲ್ಲಿ ತಿಳಿಸಿದ್ದಾರೆ.ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದ ಕಾರ್ತಿಕ್ ಅವರನ್ನು ಪೊಲೀಸರು ಹಾಗೂ ಸಾರ್ವಜನಿಕರು ರಿಕ್ಷಾದಲ್ಲಿ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ದರಾದರೂ, ಅದಾಗಲೇ ಅವರು ಮೃತಪಟ್ಟಿದ್ದರು.ಘಟನೆಗೆ ಸಂಬಂಧಿಸಿ ಮೃತರ ಚಿಕ್ಕಪ್ಪ ಕೇಶವ ಸುವರ್ಣ ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಪತ್ತೆಗಾಗಿ ಎರಡು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.ಆರೋಪಿಗಳ ಪೈಕಿ ಪ್ರೀತೇಶ್ ಶೆಟ್ಟಿ ಚೂರಿಯಿಂದ ಇರಿದಿದ್ದಾನೆ ಎಂದು ಪೊಲೀಸರು ತನಿಖೆಯಲ್ಲಿ ತಿಳಿಸಿದ್ದರು. ಆತ ಕಾಸರಗೋಡು ಜಿಲ್ಲೆಯ ಉಪ್ಪಳ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದು, ಕೇರಳದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದರು.ಪ್ರಕರಣದ ವಿಚಾರಣೆಯಲ್ಲಿ ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ಜಯಂತಿ ಸತೀಶ್ ಭಟ್ ವಾದ ಮಂಡಿಸಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement