Published
1 week agoon
By
Akkare News
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೊಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಗೆ ಎ.16ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರ ಕಿರುವಾಳು ಬರುವಲ್ಲಿ ನಿರ್ವಾಹಣೆಯಿಲ್ಲದ ಹಳೆಯ ಕಟ್ಟಡ ಇದ್ದು, ಇಕ್ಕಾಟದ ದಾರಿಯಲ್ಲಿ ಅಪಾಯವಾಗುವ ಸಾಧ್ಯತೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಸ್ಥಳಕ್ಕೆ ಆಗಮಿಸಿದ ಶಾಸಕರು ಭಾಗಶಃ ಕಟ್ಟಡ ತೆರವು ಮಾಡಿ ದಾರಿ ಅಗಲೀಕರಣ ಮಾಡುವಂತೆ ಸೂಚನೆ ನೀಡಿದ್ದಾರೆ.

ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರ ಸೂಟೆಯ ಬೆಳಕಿನೊಂದಿಗೆ ಕಿರುವಾಳು ಎ.16ರಂದು ರಾತ್ರಿ ಬರುವ ಸಂದರ್ಭ ಸಾವಿರಾರು ಮಂದಿ ಭಕ್ತರು ಉಳ್ಳಾಲ್ತಿ ಕಟ್ಟೆಯ ಬಳಿ ಜಮಾಯಿಸುತ್ತಾರೆ. ಇದರ ಜೊತೆಗೆ ಕಿರಿದಾರ ಕಟ್ಟಡದ ನಡುವಿನ ದಾರಿಯಲ್ಲಿ ನೂಕುನುಗ್ಗಲು ಆಗುತ್ತಿದ್ದುಇದೀಗ ಕಟ್ಟಡವೂ ಹಳೆದಾಗಿದ್ದು ಅಪಾಯ ಸಂಭವಿಸುವ ಮುಂಚಿತವಾಗಿ ಮುಂಜಾಗ್ರತೆ ಕ್ರಮ ಕೈಗೊಳ್ಳುವುದು ಅಗತ್ಯ ಎಂಬುದು ಒಂದು ಕಡೆಯಾದರೆ ಬಲ್ನಾಡು ದೈವಸ್ಥಾನದ ಉತ್ಸವ ಸಮಿತಿಯು ಭಂಡಾರ ಬರುವಾಗ ನಮಗೆ ಕಿರಿದಾದ ದಾರಿಯಲ್ಲಿ ಭಂಡಾರ ತರಲು ಕಷ್ಟ ಸಾಧ್ಯ. ಜೊತೆಗೆ ಸೂಟೆ ಬೆಳಕು (ಬೆಂಕಿ) ಇರುವಾಗ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ತಿಳಿಸಿದ್ದರು. ಇದೇ ವಿಚಾರವಾಗಿ ಎ.14ರಂದು ಶಾಸಕ ಅಶೋಕ್ ಕುಮಾರ್ ರೈ ಮತ್ತು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯ ದಿನೇಶ್ ಪಿ.ವಿ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ಸ್ಥಳಿಯ ಅಂಗಡಿಯವರಲ್ಲಿ ಮಾತುಕತೆ ನಡೆಸಿದರು. ಕೊನೆಗೆ ಕೆಲವರಿಗೆ ಕೋರ್ಟ್ ಸ್ಟೇ ಇರುವ ಹಿನ್ನೆಲೆಯಲ್ಲಿ ಮೂರು ಅಂಗಡಿಗಳನ್ನು ಬಿಟ್ಟು ಕಟ್ಟಡದ ಒಂದು ಬದಿಯ ಕಟ್ಟಡವನ್ನು ತೆರವು ಮಾಡುವ ಕುರಿತು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಿಗೆ ಸೂಚನೆ ನೀಡಿದರು. ಈ ಸಂದರ್ಭ ನಗರಸಭೆ ಆರೋಗ್ಯ ನಿರೀಕ್ಷಕ ರಾಮಚಂದ್ರ ಮತ್ತು ಅಂಗಡಿ ಮಾಲಕರು ಉಪಸ್ಥಿತರಿದ್ದರು.

ಕಾಲಾವಕಾಶ ನೀಡಿ:
ಶಾಸಕರು ಸ್ಥಳಕ್ಕೆ ಆಗಮಿಸಿ ಅಂಗಡಿ ಕಟ್ಟಡ ತೆರವು ಮಾಡುವಂತೆ ತಿಳಿಸಿದಾಗ ಅಂಗಡಿಯ ಮಾಲಕರುಗಳಾದ ಪ್ರಭು ಸ್ಟುಡಿಯೊ ಮಾಲಕ ಶ್ರೀನಿವಾಸ ಪೈ, ಭಾರತ್ ಫ್ಯಾನ್ಸಿ ಮಾಲಕ ರಾಮಚಂದ್ರ ಪೈ, ಭಾರತ್ ಪೂಟ್ವೇರ್ನ ಉಮ್ಮರ್ ಅವರು ನಮ್ಮ ಅಂಗಡಿ ತೆರವು ಮಾಡದಂತೆ ಸ್ಟೇ ಇದೆ. ಆದರೆ ತೆರವು ಮಾಡುವುದಿದ್ದರೂ ಒಂದು ಕಾಲವಕಾಶ ನೀಡಬೇಕಾಗಿತ್ತು. ಏಕಾಏಕಿ ಬಂದು ತೆರವು ಮಾಡಿ ಎಂದರೆ ನಾವು ಎಲ್ಲಿಗೆ ಹೋಗುವುದು ಎಂದು ಶಾಸಕರಿಗೆ ತಿಳಿಸಿದರು. ಬಳಿಕ ಕೆಲ ಹೊತ್ತು ಕೋರ್ಟ್ ಸ್ಟೇ ಆರ್ಡರ್ ಪರಿಶೀಲಿಸಿದ ಶಾಸಕರು ಭಾರತ್ ಫ್ಯಾನ್ಸಿ, ಭಾರತ್ ಪೂಟ್ವೇರ್ ಅಂಗಡಿ ಬಿಟ್ಟು ಉಳಿದ ಅಂಗಡಿಗಳನ್ನು ತೆರವು ಮಾಡುವಂತೆ ಸೂಚನೆ ನೀಡಿದರು. ಕಟ್ಟಡದ ಇನ್ನೊಂದು ಭಾಗದಲ್ಲಿ ಮೊಬೈಲ್ ಶಾಪ್, ಪೊಪ್ಯುಲರ್ ಪತ್ರಿಕಾ ವಿತರಣೆ ಅಂಗಡಿ ಇದೆ. ಅದನ್ನು ಮುಂದಿನ ದಿನ ತೆರವು ಮಾಡಲಾಗುವುದು ಎಂದು ತಿಳಿಸಿದ್ದಾರೆ. ಶ್ರೀನಿವಾಸ ಪ್ರಭು ಅವರಿಗೆ ದೇವಸ್ಥಾನದ ಸಭಾಭವನದ ಕಟ್ಟಡದಲ್ಲಿ ಉಚಿತವಾಗಿ ಅಂಗಡಿ ಕೊಡಲಾಗುವುದು ಎಂದು ತಿಳಿಸಿದ್ದಾರೆ.






