ಕಡಬ, ಎ.28: ಕುಮಾರಧಾರಾ ನದಿಗೆ ಇಳಿದಿದ್ದ ಯುವಕನೋರ್ವ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಘಟನೆ ಸೋಮವಾರ ಸಂಜೆ ಸಂಭವಿಸಿದ್ದು, ಬಳಿಕ ಅವರ ಮೃತದೇಹ ಪತ್ತೆಯಾಗಿದೆ. ಮೃತರನ್ನು ಮರ್ಧಾಳ ನಿವಾಸಿ ಮಂಜು ಅವರ ಪುತ್ರ ರಕ್ಷಿತ್ (26) ಎಂದು ಗುರುತಿಸಲಾಗಿದೆ.
ಸೋಮವಾರ ಸಂಜೆ ಸ್ನೇಹಿತರೊಂದಿಗೆ ಐತ್ತೂರು ಗ್ರಾಮದ ಅರಬ್ಬಿ ತೋಡು ಪ್ರದೇಶಕ್ಕೆ ಸ್ನಾನಕ್ಕಾಗಿ ತೆರಳಿದ್ದ ರಕ್ಷಿತ್, ಈಜಲು ತಿಳಿದಿದ್ದರೂ ಅಕಸ್ಮಾತ್ ನೀರಿನ ತೀವ್ರ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆ ತಿಳಿಯುತ್ತಿದ್ದಂತೆಯೇ ಸ್ನೇಹಿತರು ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕಡಬ ಪೊಲೀಸರು ಹಾಗೂ ಪುತ್ತೂರಿನ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಕತ್ತಲಿನಿಂದ ಶೋಧ ಕಾರ್ಯಕ್ಕೆ ತೊಂದರೆ ಉಂಟಾಗಿತ್ತು. ನಂತರ ರಾತ್ರಿ ವೇಳೆ ಈಶ್ವರ್ ಮಲ್ಪೆ ಮತ್ತು ಅವರ ತಂಡ ಸ್ಥಳಕ್ಕೆ ಆಗಮಿಸಿ ಶೋಧ ಮುಂದುವರಿಸಿದ್ದು, ಸುಮಾರು 30 ಅಡಿ ಆಳದಲ್ಲಿ ರಕ್ಷಿತ್ ಅವರ ಮೃತದೇಹವನ್ನು ಪತ್ತೆಹಚ್ಚಲಾಗಿದೆ ಎಂದು ತಿಳಿದುಬಂದಿದೆ. ‘