Published
3 hours agoon
By
Akkare News
ಜೈಪುರ, ಜೂನ್ 12: ಪ್ರಿ ವೆಡ್ಡಿಂಗ್ ಫೋಟೊಶೂಟ್ವೇಳೆ ಸರೋವರಕ್ಕೆ ಜಾರಿ ಬಿದ್ದು ವರ ಮೃತಪಟ್ಟಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಚಿತ್ತೋರ್‌ಗಢದ ನಿವಾಸಿಯಾದ ಅರ್ಜುನ್ ದಮಾಮಿ ಎಂಬ ಯುವಕನಿಗೆ ಇತ್ತೀಚೆಗಷ್ಟೇ ನಿಶ್ಚಿತಾರ್ಥವಾಗಿತ್ತು. ಮದುವೆಯ ತಯಾರಿಗಳು ಜೋರಾಗಿ ನಡೆಯುತ್ತಿದ್ದವು. ತಮ್ಮ ವಿವಾಹ ಪೂರ್ವ ಫೋಟೋ ಶೂಟ್‌ಗಾಗಿ ಅರ್ಜುನ್, ತನ್ನ ನಿಶ್ಚಿತ ವಧು ಮತ್ತು ಆಕೆಯ ಚಿಕ್ಕಪ್ಪನೊಂದಿಗೆ ಗೋರಿ ಧಾಮ್‌ಗೆ ಭೇಟಿ ನೀಡಿದ್ದರು.
ಬೆಟ್ಟಗಳ ನಡುವೆ ದೇವಾಲಯದ ಆವರಣದ ಬಳಿ ಚಿಕ್ಕಪ್ಪ ವಿಶ್ರಮಿಸುತ್ತಿದ್ದರೆ, ಈ ಜೋಡಿ ಸುಂದರ ಚಿತ್ರಗಳನ್ನು ಕ್ಲಿಕ್ಕಿಸಿಕೊಳ್ಳಲು ಬೆಟ್ಟದ ಕೆಳಗಿನ ಸರೋವರದ ತೀರಕ್ಕೆ ತೆರಳಿದ್ದರು. ಸರೋವರದ ಸೌಂದರ್ಯಕ್ಕೆ ಮನಸೋತ ಅರ್ಜುನ್, ಫೋಟೋ ಶೂಟ್ ನಡುವೆಯೇ ಸ್ನಾನ ಮಾಡಲು ನೀರಿನ ಹತ್ತಿರ ತೆರಳಿದ್ದಾರೆ. ಆದರೆ, ವಿಧಿಯ ಆಟ ಬೇರೆಯೇ ಇತ್ತು. ಕಾಲು ಜಾರಿ ಅವರು ಸರೋವರದ ಆಳವಾದ ಕಂದಕದಂತಹ ನೀರಿಗೆ ಬಿದ್ದಿದ್ದಾರೆ. ಕಣ್ಣೆದುರೇ ತನ್ನ ಭಾವಿ ಪತಿ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಆ ಯುವತಿ ಆಘಾತಕ್ಕೊಳಗಾಗಿ, ಜೋರಾಗಿ ಕೂಗುತ್ತಾ ನೆರವಿಗಾಗಿ ಯತ್ನಿಸಿದ್ದಾರೆ. ಆಕೆಯ ಆಕ್ರಂದನ ಕೇಳಿ ಧಾವಿಸಿದ ಪ್ರವಾಸಿಗರು ತಕ್ಷಣವೇ ಪೊಲೀಸರು ಮತ್ತು ರಕ್ಷಣಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ. 
ಬುಧವಾರ ಮುಂಜಾನೆ, ಎಸ್ಡಿಆರ್ಎಫ್ ಮತ್ತು ರಾಜ್‌ಸಮಂದ್ ನಾಗರಿಕ ರಕ್ಷಣಾ ತಂಡಗಳು ಜಂಟಿಯಾಗಿ ಕಾರ್ಯಾಚರಣೆಯನ್ನು ಪುನರಾರಂಭಿಸಿದವು. ಬೆಟ್ಟದ ಕಡಿದಾದ ಮತ್ತು ದುರ್ಗಮ ಹಾದಿಯಾಗಿದ್ದರಿಂದ ಕಾರ್ಯಾಚರಣೆ ಅತ್ಯಂತ ಸವಾಲಿನದ್ದಾಗಿತ್ತು. ಕೊನೆಗೆ ಹಲವಾರು ಗಂಟೆಗಳ ಕಠಿಣ ಶ್ರಮದ ನಂತರ ಅರ್ಜುನ್ ಅವರ ದೇಹವನ್ನು ನೀರಿನಿಂದ ಹೊರತೆಗೆಯಲಾಯಿತು.

ಫೋಟೋ ಶೂಟ್‌ಗಳ ನೆಪದಲ್ಲಿ ನಿಸರ್ಗದ ಆಕರ್ಷಣೆಗೆ ಒಳಗಾಗುವಾಗ ಸುರಕ್ಷತೆಯನ್ನು ಮರೆಯಬಾರದು ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ. ಮದುವೆಯ ಮಂಟಪ ಏರಬೇಕಾಗಿದ್ದ ಯುವಕನ ಶವಯಾತ್ರೆ ನೋಡುವಂತಾದದ್ದು ವಿಧಿಯ ಕ್ರೂರ ವೈಪರೀತ್ಯ.


