Published
3 hours agoon
By
Akkare News
ನವದೆಹಲಿ: ನೀಟ್ ಪೇಪರ್ ಸೋರಿಕೆ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ಡಿಪ್ಕೆ ನೇತೃತ್ವದಲ್ಲಿ ಬೆಂಬಲಿಗರು ನವದೆಹಲಿಯ ಜಂತರ್ ಮಂತರ್‌ನಲ್ಲಿ ರಾತ್ರಿಪೂರ್ತಿ ತಮ್ಮ ಧರಣಿಯನ್ನು ಮುಂದುವರಿಸಿದ್ದಾರೆ. ಭಾನುವಾರವೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಅವರು ಕರೆ ನೀಡಿದ್ದಾರೆ. 

ಪೊಲೀಸರ ಸೂಚನೆ ಧಿಕ್ಕರಿಸಿ ರಾತ್ರಿಪೂರ್ತಿ ಧರಣಿ
ಶನಿವಾರ ಸಂಜೆ 5 ಗಂಟೆಗೆ ಜಂತರ್ ಮಂತರ್ ಪ್ರತಿಭಟನೆಗೆ ನೀಡಲಾಗಿದ್ದ ಅನುಮತಿ ಮುಕ್ತಾಯಗೊಂಡಿದೆ ಮತ್ತು ಸ್ಥಳವನ್ನು ತೆರವುಗೊಳಿಸುವಂತೆ ದೆಹಲಿ ಪೊಲೀಸರು ಪ್ರತಿಭಟನಾಕಾರರಿಗೆ ಸೂಚಿಸಿದ್ದರು. ಆದಾಗ್ಯೂ, ಪ್ರತಿಭಟನೆ ನಿರಂತರವಾಗಿ ಮುಂದುವರಿದಿದೆ. ಪ್ರತಿಭಟನೆಗೆ ಬೇರೆ ಸ್ಥಳವನ್ನು ನಿಯೋಜಿಸುವಂತೆ ಪೊಲೀಸರನ್ನು ಡಿಪ್ಕೆ ಕೋರಿದ್ದಾರೆ, ಆದರೆ ಅಲ್ಲಿಯವರೆಗೆ ಜಂತರ್ ಮಂತರ್‌ನಲ್ಲಿಯೇ ತಮ್ಮ ಧರಣಿ ಮುಂದುವರಿಸುವುದಾಗಿ ಅವರು ಪಟ್ಟು ಹಿಡಿದಿದ್ದಾರೆ. ಪೊಲೀಸರು ಜನರನ್ನು ಜಂತರ್ ಮಂತರ್‌ಗೆ ಬರದಂತೆ ತಡೆಯಬಾರದು. ನಾವು ಯಾವುದೇ ತಪ್ಪು ಮಾಡುತ್ತಿಲ್ಲ, ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ನ್ಯಾಯ ಕೇಳುತ್ತಿದ್ದೇವೆ ಎಂದು ಡಿಪ್ಕೆ ಎಕ್ಸ್ ಖಾತೆಯಲ್ಲಿ ಸರಣಿ ಪೋಸ್ಟ್‌ಗಳ ಮೂಲಕ ಮನವಿ ಮಾಡಿದ್ದಾರೆ. ಶನಿವಾರ ರಾತ್ರಿಯಿಂದ ಸಾರ್ವಜನಿಕ ಶೌಚಾಲಯಗಳಿಗೆ ನೀರಿನ ಪೂರೈಕೆ ಸ್ಥಗಿತಗೊಂಡಿದೆ ಎಂದು ಆರೋಪಿಸಿರುವ ಅವರು, ತಕ್ಷಣ ನೀರಿನ ಸೌಲಭ್ಯವನ್ನು ಪುನರಾರಂಭಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.






