Published
4 months agoon
By
Akkare News
ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವಾರ್ಷಿಕ ಚಂಪಾಷಷ್ಠಿ ಜಾತ್ರೋತ್ಸವವು ಕಾರ್ತಿಕ ಬಹುಳ ದ್ವಾದಶಿಯ ಪವಿತ್ರ ದಿನವಾದ ಇಂದು (ನ.16) ಬೆಳಗ್ಗೆ 8.10ಕ್ಕೆ ವೃಶ್ಚಿಕ ಲಗ್ನ ಸುಮಹೂರ್ತದಲ್ಲಿ ಕೊಪ್ಪರಿಗೆ ಏರುವ ಆಚರಣೆಯೊಂದಿಗೆ ಆರಂಭವಾಗಿದೆ.*

ಪ್ರತಿ ವರ್ಷವೂ ಕೊಪ್ಪರಿಗೆ ಏರುವ ಮೂಲಕ ಜಾತ್ರೆ ಆರಂಭವಾಗುವುದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ವೈಶಿಷ್ಟ್ಯ. ಸಾಮಾನ್ಯವಾಗಿ ಅನೇಕ ದೇವಸ್ಥಾನಗಳಲ್ಲಿ ಧ್ವಜಾರೋಹಣ (ಕೊಡಿ ಏರಿಕೆ)ದ ಮೂಲಕ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಆದರೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಶತಮಾನಗಳ ಸಂಪ್ರದಾಯವಾದ ಅನ್ನದ ಕೊಪ್ಪರಿಗೆ ಏರಿಸುವುದೇ ಜಾತ್ರೆಯ ಆರಂಭ. ದೇವಳದ ಒಳಾಂಗಣದಲ್ಲಿ ಇರುವ ಎರಡು ದೊಡ್ಡ ಒಲೆಗಳ ಮೇಲೆ ರಾಮ – ಲಕ್ಷ್ಮಣ ಎಂಬ ಜೋಡಿ ಕೊಪ್ಪರಿಗೆಗಳನ್ನು ಏರಿಸಲಾಗುತ್ತದೆ.
ಜಾತ್ರೆಗೂ ಮುನ್ನ ದೇವಳದ ಸಿಬ್ಬಂದಿಯು ಈ ದೊಡ್ಡ ಅನ್ನದ ಪಾತ್ರೆಗಳನ್ನು ದರ್ಪಣತೀರ್ಥದಲ್ಲಿ ಶುದ್ಧೀಕರಿಸಿದ ಬಳಿಕ, ಅರ್ಚಕರು ಇದಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಾರೆ.
ರಾಮ ಮತ್ತು ಲಕ್ಷ್ಮಣ ಎಂದು ಹೆಸರಿಸಲ್ಪಟ್ಟಿರುವ ಈ ಜೋಡಿ ಕೊಪ್ಪರಿಗೆಗಳು ಅನ್ನದಾನ ಪರಂಪರೆಯ ಸಂಕೇತವೂ ಆಗಿವೆ. ಕೇವಲ ಹಬ್ಬದ ದಿನಗಳಲ್ಲಿ ಮಾತ್ರವಲ್ಲದೆ, ನಿರಂತರವಾಗಿ ಅನ್ನದಾನದ ಮೂಲಕ ಕುಕ್ಕೆ ಸುಬ್ರಹ್ಮಣ್ಯವು ದಾನಕ್ಷೇತ್ರವಾಗಿಯೂ ಪ್ರಸಿದ್ಧವಾಗಿದೆ.

ಜಾತ್ರೆ ಸಂದರ್ಭದಲ್ಲಿ ವಿಶೇಷವಾಗಿ ಪ್ರತಿದಿನವೂ ಸಾವಿರಾರು ಭಕ್ತರಿಗೆ ವಿಶೇಷ ಅನ್ನಸಂತರ್ಪಣೆ ನಡೆಯುವುದು ಅನಾದಿಕಾಲದಿಂದಲೂ ನಡೆಯುವ ಆಚರಣೆಯಾಗಿದೆ. ಅದರ ಸಂಕೇತವಾಗಿ ಅನ್ನದ ಕೊಪ್ಪರಿಗೆ ಏರಿಸುವ ಮೂಲಕ ಜಾತ್ರೆ ಆರಂಭಿಸುವ ಸಂಪ್ರದಾಯ ಶತಮಾನಗಳಿಂದ ಕುಕ್ಕೆಯಲ್ಲಿ ಜಾರಿಯಲ್ಲಿದೆ. ನವೆಂಬರ್ 26ರಂದು ಬೆಳಗಿನಜಾವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಪ್ರಸಿದ್ಧ ಚಂಪಾಷಷ್ಠಿ ಮಹಾರಥೋತ್ಸವ ಜರುಗಲಿದೆ.






