Published
13 hours agoon
By
Akkare News
ರಾಜ್ಯಸಭೆಯ ಸ್ಥಾನಗಳಿಗೆ ಮುಂದಿನ ತಿಂಗಳು ನಡೆಯುವ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರನ್ನು ಪರಿಗಣಿಸಬೇಕು ಎಂದು ವರಿಷ್ಠರಿಗೆ ಶಿಫಾರಸು ಮಾಡುವ ಬಗ್ಗೆ ಬಿಜೆಪಿ ಪ್ರಮುಖರ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿದೆ. ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್, ರಾಜ್ಯ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್, ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಸಮ್ಮುಖದಲ್ಲಿ ಪ್ರಮುಖರ ಸಭೆ ಗುರುವಾರ ನಡೆಯಿತು.

ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ 2 ಸ್ಥಾನಗಳು ಲಭ್ಯವಾಗಲಿದ್ದು ಆಕಾಂಕ್ಷಿಗಳ ದಂಡು ಸೃಷ್ಟಿಯಾಗಿದೆ. ಗುರುವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ಪರಿಷತ್ ಚುನಾವಣೆ ವಿಚಾರ ಪ್ರಸ್ತಾಪವಾಗಿದ್ದು, 20ಕ್ಕೂ ಹೆಚ್ಚು ಆಕಾಂಕ್ಷಿಗಳ ಹೆಸರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕೋರ್ ಕಮಿಟಿ ಸಭೆ ನಡೆಸಿ ಸಂಭಾವ್ಯರ ಪಟ್ಟಿಯನ್ನು ದೆಹಲಿಗೆ ಕಳುಹಿಸಿಕೊಡಲು ತೀರ್ಮಾನಿಸಲಾಗಿದೆ. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಮೈಸೂರಿನ ರಘು ಕೌಟಿಲ್ಯ, ಹುಬ್ಬಳ್ಳಿಯ ಲಿಂಗರಾಜ್ ಪಾಟೀಲ್, ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ, ವೆಂಕಟೇಶ್ ದೊಡ್ಡೇರಿ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಎಂ.ಜಿ.ಮಹೇಶ್, ಶರಣು ತಳ್ಳಿಕೇರಿ ಸೇರಿ ಹಲವರ ಹೆಸರು ಈಗ ಮುನ್ನೆಲೆಗೆ ಬಂದಿದೆ. ಭಾರತಿ ಶೆಟ್ಟಿ ಅವರು ಹಾಲಿ ವಿಧಾನ ಪರಿಷತ್ ಸದಸ್ಯರಾಗಿದ್ದು ಅವರು ಮತ್ತೊಮ್ಮೆ ಮೇಲ್ಮನೆ ಪ್ರವೇಶಿಸುವ ಆಕಾಂಕ್ಷೆ ಹೊಂದಿದ್ದಾರೆ. ಅದೇ ರೀತಿ ಭದ್ರಾವತಿಯ ಸಿ. ಮಂಜುಳಾ ಅವರೂ ವಿಧಾನ ಪರಿಷತ್ ಪ್ರವೇಶಿಸಲು ಉತ್ಸುಕರಾಗಿದ್ದಾರೆ.




