ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಮಂಗಳೂರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಂಗಳೂರಿಗೆ. ಅದ್ದೂರಿ ಸ್ವಾಗತಕ್ಕೆ ಸಿದ್ಧತೆ. ಜಿಲ್ಲೆಯ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಾಗಿ

Published

on

ಪುತ್ತೂರು: ಏ.26ರಂದು ಚುನಾವಣೆ ನಡೆಯಲಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನ್ಯಾಯವಾದಿ,ನೋಟರಿಯೂ ಆಗಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್.ಅವರು ಆಯ್ಕೆಯಾಗಿದ್ದಾರೆ.ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಮಾ.21ರಂದು ಬಿಡುಗಡೆಗೊಳಿಸಿದ್ದು ದ.ಕ.ಕ್ಕೆ ಪದ್ಮರಾಜ್ ಆರ್.,ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಸೇರಿದಂತೆ ರಾಜ್ಯದ 17 ಅಭ್ಯರ್ಥಿಗಳ ಆಯ್ಕೆ ಮಾಡಿದೆ.ದೆಹಲಿಯಲ್ಲಿ ಎಐಸಿಸಿ ಕಚೇರಿಯಲ್ಲಿ ಮಾ.19ರಂದು ನಡೆದ ಕಾಂಗ್ರೆಸ್ ಕೇಂದ್ರ ಚುನಾವಣೆ ಸಮಿತಿ ಸಭೆಯಲ್ಲಿ ರಾಜ್ಯದ ಬಹುತೇಕ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿತ್ತು. ಇದೀಗ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಂಡಿದೆ.

ಪದ್ಮರಾಜ್ ಆರ್. ಪರಿಚಯ: ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶ, ಸಮಾಜ ಸೇವೆಯನ್ನು ಮೈಗೂಡಿಸಿಕೊಂಡು ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಳದ ಬಗ್ಗೆ ಶ್ರದ್ಧೆ ಭಕ್ತಿ ಹೊಂದಿ ಕಿರಿಯ ವಯಸ್ಸಿನಲ್ಲೇ ದೇವಳದ ಜವಾಬ್ದಾರಿ ವಹಿಸಿಕೊಂಡು ಕ್ಷೇತ್ರದ ಏಳಿಗೆಗಾಗಿ ಹಗಲಿರುಳು ದುಡಿಯುತ್ತಿರುವ ಪದ್ಮರಾಜ್ ಆರ್. ಅವರು ವೃತ್ತಿಯಲ್ಲಿ ನ್ಯಾಯವಾದಿಯಾಗಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಗ್ರಾಮದಲ್ಲಿ, ಮಂಗಳೂರು ಮೂಲದ ಎಚ್.ಎಂ.ರಾಮಯ್ಯ ಪೂಜಾರಿ ಮತ್ತು ಲಲಿತಾ ದಂಪತಿಯ ದ್ವಿತೀಯ ಪುತ್ರನಾಗಿ ಜನಿಸಿದ ಪದ್ಮರಾಜ್ ರಾಮಯ್ಯರವರು ತನ್ನ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಗಿಸಿ ಮುಂದೆ ಬಿ.ಎ. ಪದವಿಯನ್ನು ಬೆಳ್ತಂಗಡಿಯ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು ಹಾಗೂ ಕಾನೂನು ಪದವಿಯನ್ನು ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಮುಗಿಸಿದರು.1995ರಿಂದ ಕಾನೂನು ವೃತ್ತಿಯ ಚೊಚ್ಚಲ ಅಭ್ಯಾಸವನ್ನು ಕೇಂದ್ರದ ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿಯವರೊಂದಿಗೆ ಪ್ರಾರಂಭಿಸಿದ್ದರು.ನಾಲ್ಕು ವರ್ಷಗಳ ಬಳಿಕ ಮಂಗಳೂರಿನ ಬಳ್ಳಾಲ್‌ಭಾಗ್‌ನಲ್ಲಿ ಸ್ವಂತ ಕಚೇರಿ ಪ್ರಾರಂಭಿಸಿದರು.ವೃತ್ತಿ ಜೀವನದ ಆರಂಭದ ಸಮಯದಲ್ಲಿ ಹಿರಿಯ ವಕೀಲರಾದ ಪಿ.ಗಂಗಾಧರ್ ಅವರ ಸಲಹೆಯಂತೆ ಆಗಿನ ಬಿಲ್ಲವರ ಯೂನಿಯನ್ ಸದಸ್ಯರಾದರು.ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳದಿದ್ದರೂ ಬಿ.ಜನಾರ್ದನ ಪೂಜಾರಿಯವರು ಸ್ಪರ್ಧಿಸಿದ ಎಲ್ಲಾ ಚುನಾವಣೆ ಸಂದರ್ಭದಲ್ಲೂ ಅವರಿಗಾಗಿ ದುಡಿದಿದ್ದರು.








ಕುದ್ರೋಳಿ ದೇವಳದ ಸಖ್ಯ: ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿಯವರ ಅನುಯಾಯಿಯಾಗಿದ್ದು, ಕಳೆದ 25 ವರ್ಷದಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಪದ್ಮರಾಜ್‌ ಅವರು ಮಂಗಳೂರಿನ ನವರಾತ್ರಿ ಉತ್ಸವ ವಿಶ್ವ ಪ್ರಸಿದ್ದಿ ಪಡೆಯಲು ಶ್ರಮ ಪಟ್ಟವರಲ್ಲಿ ಓರ್ವರಾಗಿದ್ದಾರೆ.ಕೊರೋನಾ ಮಹಾಮಾರಿಯಿಂದಾಗಿ 40 ದಿನಗಳ ಲಾಕ್‌ಡೌನ್ ಉಂಟಾದ ಸಂದರ್ಭ ಬಿ.ಜನಾರ್ದನ ಪೂಜಾರಿಯವರ ಆದೇಶದಂತೆ, ದಿನಂಪ್ರತಿ ದೇವಸ್ಥಾನದ ವತಿಯಿಂದ ಸುಮಾರು 1000 ಬಡವರು, ನಿರಾಶ್ರಿತರಿಗೆ ಹಾಗೂ ವಲಸೆ ಕೂಲಿ ಕಾರ್ಮಿಕರಿಗೆ ಅನ್ನದಾನ ನಡೆಯುತ್ತಿತ್ತು.ಈ ಸಂದರ್ಭ ಪದ್ಮರಾಜ್ ಅವರೇ ಖುದ್ದಾಗಿ ಸೇವಾದಳದವರೊಂದಿಗೆ ವಿವಿಧ ಪ್ರದೇಶಗಳಿಗೆ ತೆರಳಿ ಅನ್ನದಾನ ವಿತರಣೆಯಲ್ಲಿ ಭಾಗಿಯಾಗುತ್ತಿದ್ದರು.ಪದ್ಮರಾಜ್ ನೇತೃತ್ವದಲ್ಲಿ ದಾನಿಗಳ ಸಹಕಾರದಿಂದ, ದೇವಸ್ಥಾನದ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ 300 ಕ್ವಿಂಟಾಲ್ ಅಕ್ಕಿದಾನ ಮಾಡಲಾಗಿತ್ತು. ಎರಡನೇ ಲಾಕ್‌ಡೌನ್ ಸಂದರ್ಭದಲ್ಲಿ ತನ್ನದೇ ಆದ ಚಿಗುರುಬೆಳದಿಂಗಳು ಫೌಂಡೇಶನ್‌ ಮೂಲಕ ಪದ್ಮರಾಜ್ ಅವರು ಸಹಸ್ರಾರು ನೊಂದವರಿಗೆ ದಿನಸಿ, ಆಹಾರ ಸಾಮಾಗ್ರಿ ತಲುಪಿಸಿದ್ದರು.ಯುವವಾಹಿನಿ ಕೇಂದ್ರ ಸಮಿತಿಯ ಗೌರವ ಸಲಹೆಗಾರರು,ಜೆ.ಪಿ.ಪ್ರತಿಷ್ಠಾನ ದ.ಕ.ಜಿಲ್ಲಾ ಗೌರವ ಸಂಚಾಲಕ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.ರಾಜ್ಯಾದ್ಯಂತ ಅನೇಕ ಸಂಘ ಸಂಸ್ಥೆಗಳಿಂದ ಇವರ ಸಮಾಜಮುಖಿ ಸೇವೆಗೆ ಗೌರವ ಸಂದಿದೆ.ನಮ್ಮ ಕುಡ್ಲ ವಾಹಿನಿ ನೀಡುವ ನಮ್ಮ ಕುಡ್ಲಲಿ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಬಡವರಿಗೆ ಉಚಿತ ಸೇವೆ: ನೋಟರಿ ವಕೀಲರಾದ ಇವರು ತನ್ನ ನೋಟರಿ ಸಹಿಯನ್ನು ಬಡವರು, ವಿದ್ಯಾರ್ಥಿಗಳ ದೃಢೀಕರಣಕ್ಕೆ ಉಚಿತವಾಗಿ ನೀಡುವ ಮೂಲಕ ಮಾದರಿ ವಕೀಲರಾಗಿ ಗುರುತಿಸಿಕೊಂಡಿದ್ದಾರೆ. ಪದ್ಮರಾಜ್‌ರವರು ನಾರಾಯಣ ಗುರುಗಳ ಬಗ್ಗೆ ಅಪಾರ ಕಾಳಜಿ ಹೊಂದಿದವರು. ಇತ್ತೀಚೆಗೆ ನಡೆದ ನಾರಾಯಣ ಗುರುಗಳ ಟ್ಯಾಬೋ ನಿರಾಕರಣೆ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದ ಮೊದಲಿಗರು. ಇವರ ಮುಂದಾಳತ್ವದಲ್ಲಿ ಗುರುಗಳಿಗೆ ಆದ ಅವಮಾನದ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡಿದ್ದರು.ಇತ್ತೀಚೆಗೆ ೧೦ನೇ ತರಗತಿಯ ಪಠ್ಯಪುಸ್ತಕದ ಸಮಾಜ ವಿಜ್ಞಾನದಲ್ಲಿ ನಾರಾಯಣ ಗುರುಗಳ ಪಠ್ಯ ಕೈಬಿಟ್ಟದ್ದರ ವಿರುದ್ಧ ಮೊದಲು ಖಂಡನೆ ವ್ಯಕ್ತಪಡಿಸಿ ರಾಜ್ಯಾದ್ಯಂತ ಹೋರಾಟ ಮಾಡುವ ಮೂಲಕ ಗುರುಗಳ ಪಠ್ಯವನ್ನು ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version