Published
9 months agoon
By
Akkare Newsವಿಟ್ಲ: ವಿಟ್ಲ ಮುಡ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೩ನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಕೊಡ, ಬಕೆಟ್ ಹಿಡಿದು ವಿಟ್ಲ ಮೂಡ್ನೂರು ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಎಲ್ಯಣ್ಣ ಪೂಜಾರಿ ಮೈರುಂಡ ಮಾತನಾಡಿ ಈ ಭಾಗದಲ್ಲಿ ನೀರಿಗಾಗಿ ಬಡಪಾಯಿ ಜನರು ನಿರಂತರ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿನವರು ವಾಹನದಲ್ಲಿ ನೀರು ಸರಬರಾಜು ಮಾಡುತ್ತಿದ್ದು, ಅದು ನಮಗೆ ಏನೂ ಸಾಕಾಗುತ್ತಿಲ್ಲ. ಚುನಾವಣೆಯಲ್ಲಿ ಗೆದ್ದ ಕೆಲವು ಸದಸ್ಯರು ಜೀವ ಇಲ್ಲದಂತೆ ವರ್ತಿಸುತ್ತಿದ್ದಾರೆ. ತಕ್ಷಣವೇ ಇಲ್ಲಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಜಯ ಕೆ. ಮತ್ತು ಅಧ್ಯಕ್ಷ ಪುನೀತ್ ಮಾಡತ್ತಾರು ಅವರು ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿ ಹಾಳಾಗಿರುವ ಪಂಪ್ ಸರಿಪಡಿಸಿ ನೀರಿನ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ಈ ಸಂದರ್ಭ ರಾಮಣ್ಣ ಪಿಲಿಂಜ, ಲೋಹಿತ್ ಪೂಜಾರಿ, ನವೀನ್ ಗೌಡ, ಪದ್ಮಾವತಿ , ಶೀನ ಮೂಲ್ಯ, ಸೀತಾ, ಗೀತಾ ರುಕ್ಮಯ್ಯ ಗೌಡ, ತಾರಾನಾಥ ಹಾಗೂ ಕೃಷ್ಣಪ್ಪ ಅವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಜಯ ಕೆ. ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಇಲ್ಲಿರುವ ನೀರಿನ ಸಮಸ್ಯೆಯನ್ನು ಮನಗಂಡು ಎರಡು ದಿನಗಳಿಗೊಮ್ಮೆ ೯ ಪಿಕಪ್‌ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ೧೮ ಸಾವಿರ ಲೀಟರ್ ನೀರು ಕೊಡಲಾಗುತ್ತಿದೆ. ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಹಳೆಯ ಕೊಳವೆಬಾವಿಗೆ ಹಾಕಿರುವ ಕಬ್ಬಿಣದ ತುಂಡು ತೆಗೆಯಲು ತಂಡವನ್ನು ಆಹ್ವಾನಿಸಲಾಗಿದೆ. ಖಾಸಗಿ ವ್ಯಕ್ತಿಯೊಬ್ಬರ ಕೊಳವೆ ಬಾವಿಯಿಂದ ನೀರು ನೀಡಲು ಸಹಕಾರಿ ಕೋರಲಾಗಿದ್ದು, ಜನರಿಗೆ ನೀರಿನ ಸಮಸ್ಯೆ ಬಾರದ ರೀತಿಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ತಿಳಿಸಿದರು.