Published
6 months agoon
By
Akkare News
ಪುತ್ತೂರು: 9/11 ಸಮಸ್ಯೆಯಿಂದ ಜನರಿಗೆ ತುಂಬಾ ಕಷ್ಟವಾಗಿದ್ದು ಅದರಲ್ಲೂ ಗ್ರಾಮೀಣ ಭಾಗದ ಬಡವರಿಗೆ ತೀವ್ರ ಸಂಕಷ್ಟ ಎದುರಾಗಿದ್ದು ಈ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈಯವರು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ ಖರ್ಗೆಅವರಿಗೆ ಮನವಿ ಮಾಡಿದ್ದು ಸಮಸ್ಯೆಯನ್ನು ಶೀಘ್ರವೇ ಇತ್ಯರ್ಥಪಡಿಸುವ ಭರವಸೆ ನೀಡಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಸಚಿವರ ಕಚೇರಿಗೆ ಭೇಟಿ ನೀಡಿದ ಶಾಸಕ ಅಶೋಕ್ ರೈಯವರು 9/11 ಸಮಸ್ಯೆ ಗಂಭೀರವಾಗಿದೆ. ಮನೆ ಕಟ್ಟುವಲ್ಲಿ ಅಗತ್ಯವಾಗಿ ಬೇಕಾದ ಈ ಪತ್ರಕ್ಕಾಗಿ ಜನ ಪರದಾಟ ನಡೆಸುವಂತಾಗಿದೆ. ಈ ಹಿಂದೆ ಗ್ರಾಪಂ ಕಚೇರಿಯಲ್ಲೇ 9/11 ಪತ್ರವನ್ನು ನೀಡಲಾಗುತ್ತಿತ್ತು. ಅಧಿಕಾರ ಅವಧಿಯ ಕೊನೇ ಗಳಿಗೆಯಲ್ಲಿ ಕಳೆದ ಅವಧಿಯ ಬಿಜೆಪಿ ಸರಕಾರ ಈ ವ್ಯವಸ್ಥೆಯನ್ನು ಗ್ರಾಪಂ ನಿಂದ ಮೂಡಾಕ್ಕೆ ವರ್ಗಾವಣೆ ಮಾಡಿತ್ತು. ಆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದರೂ ಅದೇ ಸಮಸ್ಯೆ ಮುಂದುವರೆದಿದೆ. ಜನರಿಗೆ ತೊಂದರೆ ನೀಡುವ ಯಾವುದೇ ಕಾನೂನು ಇಲ್ಲಿ ಬೇಡ. 9/11ಗ್ರಾಮದ ಕಟ್ಟಕಡೇಯ ವ್ಯಕ್ತಿಗೂ ಅಗತ್ಯವಾಗಿ ಬೇಕಾಗಿದೆ. ಮನೆ ಕಟ್ಟುವ ವೇಳೆ ಈ ದಾಖಲೆ ಪತ್ರಕ್ಕಾಗಿ ಮಂಗಳೂರಿನ ಮುಡಾ ಕಚೇರಿಗೆ ತೆರಳಬೇಕಾಗಿದೆ. ಕಚೇರಿ ಅಲೆದಾಟ ಬಗ್ಗೆ ಪರಿಜ್ಞಾನವಿಲ್ಲದ ಬಡವರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸರಕಾರ ಕೂಡಲೇ ಎಚ್ಚೆತ್ತು 9/11 ಸಮಸ್ಯೆಯನ್ನು ಇತ್ಯರ್ಥ ಮಾಡಬೇಕು ಎಂದು ಶಾಸಕರು ಸಚಿವರಲ್ಲಿ ಮನವಿ ಮಾಡಿದ್ದಾರೆ.
ಅಧಿಕಾರಿಗಳ ಸಭೆ ಕರೆದು ಶೀಘ್ರ ಇತ್ಯರ್ಥ
ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ಸಚಿವ ಪ್ರಿಯಾಂಕ ಖರ್ಗೆ 9/11 ಸಮಸ್ಯೆಯ ಬಗ್ಗೆ ಚರ್ಚಿಸಲು ಶೀಘ್ರವೇ ಅಧಿಕಾರಿಗಳ ಸಭೆ ಕರೆಯುತ್ತೇನೆ. ಸಭೆಯಲ್ಲಿ ಈ ಸಮಸ್ಯೆಯ ಬಗ್ಗೆ ಕೂಲಂಕುಶವಾಗಿ ಚರ್ಚಿಸಿ ಜನ ಸಾಮಾನ್ಯರಿಗೆ ತೊಂದರೆಯಾಗುವ ಈಗಿನ ವ್ಯವಸ್ಥೆಯನ್ನು ಬದಲಾವಣೆ ಮಾಡಿ ಹಿಂದಿನ ಮಾದರಿಯಲ್ಲೇ ಗ್ರಾಪಂ ಮೂಲಕವೇ 9/11 ದಾಖಲೆ ಪತ್ರವನ್ನು ನೀಡುವಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಗ್ರಾಪಂ ಮೂಲಕವೇ ನೀಡಬೇಕು: ಅಶೋಕ್ ರೈ
9/11 ದಾಖಲೆ ಪತ್ರಕ್ಕಾಗಿ ಜನರನ್ನು ಕುಣಿಸಬಾರದು. ಏನೂ ಗೊತ್ತಿಲ್ಲದ ಬಡವರು ಮನೆ ಕಟ್ಟುವಾಗ ಈ ದಾಖಲೆಗಾಗಿ ಕಚೇರಿ ಅಲೆದಾಟ ನಡೆಸುವಂತಾಗಿದೆ. ಬಡವರು ಮನೆ ಕಟ್ಟುವುದೇ ಭಾರೀ ಕಷ್ಟದಲ್ಲಿ ಅದರಲ್ಲೂ ಈ ದಾಖಲೆ ಪತ್ರ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಬಡವರಿಗೆ ತೊಂದರೆ ನೀಡುವ ಯಾವ ಕಾನೂನು ಇಲ್ಲಿ ಅಗತ್ಯವಿಲ್ಲ. ಹಿಂದಿನ ಮಾದರಿಯಲ್ಲೇ ಗ್ರಾಪಂ ಮೂಲಕವೇ ಈ ದಾಖಲೆ ಪತ್ರವನ್ನು ಕೊಡುವಂತಾಗಬೇಕು ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.