Published
6 months agoon
By
Akkare News
ಪುತ್ತೂರು: ತನ್ನ ಕ್ಷೇತ್ರದಲ್ಲಿ ಮನೆ ಇಲ್ಲದವರು, ಕುಡಿಯಲು ನೀರು ಇಲ್ಲದವರು ಹಾಗೂ ಕರೆಂಟ್ ಇಲ್ಲದ ಮನೆ ಒಂದೂ ಇರಬಾರದು ಎಂದು ಚುನಾವಣಾ ಸಮಯದಲ್ಲಿ ನಾನು ಪ್ರತಿಜ್ಞೆ ಮಾಡಿದ್ದೆ, ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ವಿದ್ಯುತ್ ಇಲ್ಲದ ನೂರಾರು ಮನೆಗಳಿಗೆ ವಿದ್ಯುತ್ ಸಂಪರ್ಕ ಕೊಡಿಸುವ ಕೆಲಸ ಮಾಡಿದ್ದೇನೆ, ಕುಡಿಯುವ ನೀರಿಗಾಗಿ ಈಗಾಗಲೇ ೧೦೫೦ ಕೋಟಿ ರೂ ಅನುದಾನ ತಂದಿದ್ದೇನೆ ಮುಂದೆ ಮನೆ ಇಲ್ಲದ ಕ್ಷೇತ್ರದ ಪ್ರತೀಯೊಂದು ಕುಟುಂಬಕ್ಕೂ ಮನೆ ನಿರ್ಮಾಣ ಹಾಗೂ ನಿವೇಶನ ಇಲ್ಲದವರಿಗೆ ನಿವೇಶನ ಹಂಚುವ ಕಾರ್ಯ ಶೀಘ್ರ ಪ್ರಾರಂಭವಾಗಲಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ.
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತೀ ಗ್ರಾಮದಲ್ಲೂ ಸರಕಾರಿ ಭೂಮಿ ಇದೆ. ಇರುವ ಸರಕಾರಿ ಭೂಮಿಯನ್ನು ಗುರುತಿಸಿ ಅಲ್ಲಿ ಸೈಟ್ ಮಾಡಿ ಅದನ್ನು ನಿವೇಶನ ರಹಿತ ಅರ್ಹರಿಗೆ ನೀಡಲಾಗುವುದು. ಸರಕಾರಿ ಭೂಮಿ ಒತ್ತುವರಿ ಮಾಡುವ ಮೂಲಕ ಬಡವರಿಗೆ ಅದನ್ನು ಹಂಚುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕಂದಾಯ ಸಚಿವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ.
ಅರ್ಜಿ ಸಲ್ಲಿಸದೇ ಇದ್ದಲ್ಲಿ ನಿವೇಶನ ಕಷ್ಟ
ಸ್ವಂತವಾಗಿಯೇ ಜಾಗ ಇಲ್ಲದವರು ನಿವೇಶನ ಪಡೆಯಲು ಅರ್ಹರಾಗಿರುತ್ತಾರೆ. ನಿವೇಶನ ಇಲ್ಲದವರು ಆಯಾ ಗ್ರಾಪಂ ಗಳಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಬೇಕು , ನಿಮ್ಮ ಗ್ರಾಮದಲ್ಲಿ ನಿವೇಶನ ಕಡಿಮೆ ಇದ್ದಲ್ಲಿ ಪಕ್ಕದ ಗ್ರಾಪಂ ಕಚೇರಿಯಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಕೆಲವು ಗ್ರಾಮಗಳಲ್ಲಿ ನಿವೇಶನ ರಹಿತರ ಸಂಖ್ಯೆ ಕಡಿಮೆ ಇದ್ದು ಅಲ್ಲಿ ದಾರಾಳ ಸರಕಾರಿ ಜಾಗವಿದ್ದು ಅಂಥಹ ಗ್ರಾಮಗಳಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ನಿವೇಶನದ ಜೊತೆಗೆ ಮನೆಗೂ ಅರ್ಜಿ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಸದೇ ಇದ್ದಲ್ಲಿ ನಿವೇಶನವಾಗಲಿ, ಮನೆಯಾಗಲಿ ನೀಡಲು ಕಷ್ಟ ಸಾಧ್ಯ ಈ ಕಾರಣಕ್ಕೆ ನಾಳೆಯೇ ನಿಮ್ಮ ಗ್ರಾಪಂ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸುವಂತೆ ಶಾಸಕರು ಮನವಿ ಮಾಡಿದ್ದಾರೆ.
ಸರಕಾರಿ ಜಾಗ ಬಡವರಿಗೆ ಹಂಚುತ್ತೇನೆ
ಪ್ರತೀ ಗ್ರಾಮದಲ್ಲಿ ಸರಕಾರಿ ಜಾಗವನ್ನು ಗುರುತಿಸಿ ಅದನ್ನು ಸ್ವಾಧೀನಕ್ಕೆ ಪಡೆದು ಅದನ್ನು ಸೈಟ್ ಮಾಡಿ ಪ್ರತೀ ಫಲಾನುಭವಿಗಳಿಗೆ ೩ ಸೆಂಟ್ಸ್ ಜಾಗವನ್ನು ನೀಡುತ್ತೇವೆ. ಈಗಾಗಲೇ ಹಲವು ಗ್ರಾಮಗಳಲ್ಲಿ ಜಾಗ ಗುರುತಿಸುವ ಕಾರ್ಯ ಪ್ರಾರಂಭವಾಗಿದೆ. ಹಲವಾರು ವರ್ಷಗಳಿಂದ ಸ್ವಂತ ಜಾಗವಿಲ್ಲದೆ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಸಾವಿರಾರು ಕುಟುಂಬಗಳು ನನ್ನ ಕ್ಷೇತ್ರದಲ್ಲಿದ್ದಾರೆ ಅವರಿಗೆಲ್ಲರಿಗೂ ನಿವೇಶನ ಹಂಚಿಯೇ ಹಂಚುತ್ತೆನೆ ಎಂದು ಶಾಸಕರು ತಿಳಿಸಿದ್ದಾರೆ. ನಾನು ಚುನಾವಣಾ ಸಮಯದಲ್ಲಿ ಕೊಟ್ಟ ಮಾತನ್ನು ಚಾಚೂ ತಪ್ಪದೆ ಪಾಲನೆ ಮಾಡುತ್ತೇನೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.